ಕೊರೊನಾ ಕೆಪಿ2 ಉಪ ತಳಿಯಿಂದ ಕರ್ನಾಟಕಕ್ಕೂ ಇದೆಯೇ ಆತಂಕ; ಇಲ್ಲಿದೆ ತಜ್ಞರ ಅಭಿಪ್ರಾಯ
New Covid sub-variant KP.2: ಮಹಾರಾಷ್ಟ್ರದಲ್ಲಿ ಕೋವಿಡ್‌ನ ಹೊಸ ರೂಪಾಂತರದ 19 ಹೊಸ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿಯೂ ಆತಂಕ ಶುರುವಾಗಿತ್ತು. ಆದರೆ, ಹೆಚ್ಚು ಭಯಪಡಬೇಕಾದ ಅಗತ್ಯವಿಲ್ಲ ಎಂದು ತಜ್ಞವೈದ್ಯರು ಹೇಳಿದ್ದಾರೆ. ಇದಕ್ಕೆ ಕಾರಣಗಳೂ ಇವೆ. ಅವುಗಳು ಏನೆಂಬ ವಿವರ ಇಲ್ಲಿದೆ.
ಬೆಂಗಳೂರು, ಮೇ 14: ಮಹಾರಾಷ್ಟ್ರದಲ್ಲಿ (Maharashtra) ಕೊರೊನಾ ವೈರಸ್ನ (Coronavirus) ಕೆಪಿ2 (KP.2) ಉಪ ತಳಿಯ19 ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಕರ್ನಾಟಕದಲ್ಲಿಯೂ (Karnataka) ಆ ಬಗ್ಗೆ ಕಳವಳ ವ್ಯಕ್ತವಾಗಿದೆ. ಕೆಪಿ2 ಎಂಬುದು ಕೊರೊನಾ ವೈರಸ್ನ ಒಮಿಕ್ರಾನ್ ಜೆಎನ್.1 ತಳಿಯ ವಂಶದ್ದಾಗಿದ್ದು, ಅಮೆರಿಕಾ ಮತ್ತು ಬ್ರಿಟನ್ನಂತಹ ದೇಶಗಳಲ್ಲಿ ಜೆಎನ್.1 ಪ್ರಕರಣಗಳನ್ನೂ ಮೀರಿಸಿದೆ. ಇದು ವೇಗವಾಗಿ ಮತ್ತು ಹೆಚ್ಚು ಹರಡುವ, ಆದರೆ ತೀರಾ ಅಪಾಯಕಾರಿಯಲ್ಲದ ವೈರಸ್ ರೂಪಾಂತರವಾಗಿದೆ ಎಂದು ಕರ್ನಾಟಕದ ತಜ್ಞ ವೈದ್ಯರು ಹೇಳಿದ್ದಾರೆ. ಹೀಗಾಗಿ ಜನರು ಆತಂಕಕ್ಕೆ ಪಳಗಾಗಬೇಕಿಲ್ಲ ಎಂದೂ ಅವರು ಧೈರ್ಯದ ಮಾತುಗಳನ್ನಾಡಿದ್ದಾರೆ.
ಈ ಹೊಸ ತಳಿಯ ಬಗ್ಗೆ ಹೆಚ್ಚು ಆತಂಕಪಡಬೇಕಿಲ್ಲ. ಎಲ್ಲಾ ವೈರಸ್‌ಗಳು ರೂಪಾಂತರಗೊಳ್ಳುತ್ತವೆ. ಇದು ಜೆಎನ್.1 ರೂಪಾಂತರದ (ಜ್ವರ, ಕೆಮ್ಮು ಮತ್ತು ಆಯಾಸ) ರೀತಿಯಲ್ಲಿ ಅದೇ ರೋಗಲಕ್ಷಣಗಳೊಂದಿಗೆ ಸೋಂಕು ಉಂಟುಮಾಡುವ ಒಂದು ರೂಪಾಂತರವಾಗಿದೆ. ಆದ್ದರಿಂದ, ಆತಂಕಪಡಬೇಕಿಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ಅಂತಹ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಕರ್ನಾಟಕದ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಮುಖ್ಯಸ್ಥರಾದ ಡಾ. ರವಿ ಕೆ ತಿಳಿಸಿದ್ದಾರೆ.
ಕೊರೊನಾ ವೈರಸ್ನ ಇತರ ಉಪ-ತಳಿಗಳಂತೆ ಇದೂ ಸಹ ಅದರಷ್ಟಕ್ಕೇ ನಾಶವಾಗುವ ಸಾಧ್ಯತೆಯಿದೆ ಎಂದು ಶ್ವಾಸಕೋಶ ಶಾಸ್ತ್ರಜ್ಞ ಡಾ. ರವೀಂದ್ರ ಮೆಹ್ತಾ ಹೇಳಿರುವುದಾಗಿ ಪತ್ರಿಕಾ ವರದಿಯೊಂದು ಉಲ್ಲೇಖಿಸಿದೆ. ಈಗ ಕಾಣಿಸಿಕೊಳ್ಳುತ್ತಿರುವ ಕೋವಿಡ್‌ನ ರೂಪಾಂತರಗಳನ್ನು ಗಮನಿಸಿದಾಗ, ಮೊದಲ ಎರಡು ಅಲೆಗಳ ವೇಳೆ ಕಂಡುಬಂದ ಮಾರಣಾಂತಿಕ ಕೋವಿಡ್ ನ್ಯುಮೋನಿಯಾ ಮಾದರಿಯಷ್ಟು ಪ್ರಬಲವಾದದ್ದು ಕಾಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಮತ್ತೆ ಕೊರೊನಾ ಆತಂಕ, ಮಹಾರಾಷ್ಟ್ರದಲ್ಲಿ 19 ಪ್ರಕರಣಗಳು ಪತ್ತೆ
ಮಹಾರಾಷ್ಟ್ರದಲ್ಲಿ ಕೆಲವು ದಿನಗಳ ಹಿಂದೆ ಕೆಪಿ2 ನ 19 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಪುಣೆಯಲ್ಲಿ 51, ಥಾಣೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿದ್ದವು. ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ