ಕೊರೊನಾ ಎಂಬ ಸಾಂಕ್ರಾಮಿಕ ಮಹಾಮಾರಿಯಿಂದ ಇಡಿ ವಿಶ್ವಕ್ಕೆ ವಿಶ್ವವೇ ತಲ್ಲಣಗೊಂಡಿರುವಾಗ, ನ್ಯೂಜಿಲೆಂಡ್ ಕೊರೊನಾವನ್ನು ಯಶಸ್ವಿಯಾಗಿ ಕಟ್ಟಿಹಾಕಿದ್ದು, ಈಗ ಕೊರೊನಾ ಇಲ್ಲದ ನೂರನೇ ದಿನದ ಸಂಭ್ರಮದಲ್ಲಿದೆ.
ಹೌದು, ಒಂದು ರೀತಿಯಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೊರೊನಾ ಸೋಂಕು ವಕ್ಕರಿಸದ ದೇಶವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ನ್ಯೂಜಿಲೆಂಡ್ ಸೇರಿದಂತೆ ಕೆಲವೇ ಕೆಲ ದೇಶಗಳು ಕೊರೊನಾ ಮಾರಿಯನ್ನು ಯಾವುದೇ ವ್ಯಾಕ್ಸಿನ್ ಇಲ್ಲದೇ ಹತ್ತಿಕ್ಕುವಲ್ಲಿ ಯಶ ಕಂಡಿವೆ.
ನ್ಯೂಜಿಲೆಂಡ್‌ನಲ್ಲಿ ಫೆಬ್ರವರಿ 26ರಂದು ಮೊದಲ ಕೊರೊನಾ ಪ್ರಕರಣ ವರದಿಯಾದ ನಂತರ, ಕೀವಿಸ್ ಸರ್ಕಾರ ವ್ಯವಸ್ಥಿತವಾಗಿ ಕಾರ್ಯಾಚರಣೆ ಮಾಡಿದೆ. ದೇಶದ ನಾಗರಿಕರಿಗೆ ಕೊರೊನಾ ಬಗ್ಗೆ ಸರಿಯಾದ ಮಾಹಿತಿ ನೀಡಿ ಯಾವ ರೀತಿ ಸೋಂಕು ತಗುಲದಂತೆ ತಡೆಯಬಹುದು ಎನ್ನುವುದನ್ನು ತಿಳಿಸಿದೆ. ಹಾಗೇ ನಾಗರಿಕರು ಕೂಡಾ ಸಹಕರಿಸಿದ್ದಾರೆ. ಪರಿಣಾಮ ಮೇ 1ನೇ ತಾರಿಖಿನ ನಂತರ ನ್ಯೂಜಿಲೆಂಡ್ನಲ್ಲಿ ಯಾವುದೇ ಕೊರೊನಾ ಪ್ರಕರಣ ಇದುವರೆಗೂ ವರದಿಯಾಗಿಲ್ಲ.
ಭಾನುವಾರ ನ್ಯೂಜಿಲೆಂಡ್‌ನಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣ ದಾಖಲಾಗದ ನೂರನೇ ದಿನ. ನಂಬಲು ಕಷ್ಟವಾದ್ರೂ ಇದು ಸತ್ಯ. ಕಳೆದ ನೂರು ದಿನಗಳಲ್ಲಿ ನ್ಯೂಜಿಲೆಂಡ್‌ನಲ್ಲಿ ಯಾವುದೇ ಕೊರೊನಾ ಸೋಂಕಿನ ಪ್ರಕರಣ ದಾಖಲಾಗಿಲ್ಲ. ಹಾಗೇ ವ್ಯವಸ್ಥಿತವಾಗಿ ವೈಜ್ಞಾನಿಕ ರೀತಿಯಲ್ಲಿ ಕೊರೊನಾ ವಿರುದ್ಧದ ಸಮರದಲ್ಲಿ ಇದುವರೆಗೆ ನ್ಯೂಜಿಲೆಂಡ್ ಯಶ ಸಾಧಿಸಿದೆ.
ಈ ಮೂದಲು ವಿಯಟ್ನಾಮ್ ಮತ್ತು ಆಸ್ಟ್ರೇಲಿಯಾ ದಂಥಹ ದೇಶಗಳೂ ಕೂಡಾ ಆರಂಭಿಕ ಯಶಸ್ಸು ಕಂಡಿದ್ದವವು. ಆದ್ರೆ ನಂತರ ಮತ್ತೇ ಕೊರೊನಾದ ಎರಡನೇ ಅಲೆ ಆರಂಭವಾದ ಪರಿಣಾಮ, ಈ ದೇಶಗಳಲ್ಲಿ ಈಗ ಕೊರೊನಾ ಸಂಖ್ಯೆ ಹೆಚ್ಚುತ್ತಿವೆ. ಹೀಗಾಗಿ ನ್ಯೂಜಿಲೆಂಡ್ ಕೊರೊನಾ ಪ್ರೀ ನೂರು ದಿನಗಳನ್ನು ಆಚರಿಸಿಕೊಳ್ಳುತ್ತಿದ್ರೂ, ಯಾವುದೇ ಛಾನ್ಸ್ ತೆಗೆದುಕೊಳ್ಳಲು ತಯಾರಿಲ್ಲ. ಹೀಗಾಗಿ ತನ್ನ ಕಟ್ಟುನಿಟ್ಟಿನ ಕ್ರಮವನ್ನು ಮುಂದುವರಿಸಿದೆ.
ನ್ಯೂಜಿಲೆಂಡ್‌ನಂತೆ ಕೊರೊನಾ ಇಲ್ಲದ ಇತರ ದೇಶಗಳೂ ಇವೆ. ಇವುಗಳೆಂದ್ರೆ ಟೊಂಗೋ, ವನುವಾಟು, ಕಿರಿಬತಿ, ಮಾರ್ಷಲ್ ಐಲ್ಯಾಂಡ್ಸ್, ನಾವುರು, ಪಲಾವು, ಸಮೋಆ, ದಿ ಸೊಲೋಮನ್ ಐಲ್ಯಾಂಡ್ಸ್, ಟುವಾಲು ಮತ್ತು ಟರ್ಕಮೇನಿಸ್ತಾನ್. ಈ ದೇಶಗಳಲ್ಲಿ ಈಗ ಯಾವುದೇ ಕೊರೊನಾ ಪ್ರಕರಣಗಳು ಇಲ್ಲ. ಈ ಎಲ್ಲ ದೇಶಗಳು ಚಿಕ್ಕ ಚಿಕ್ಕ ರಾಷ್ಟ್ರಗಳು ಅಥವಾ ನಡುಗಡ್ಡೆ ರಾಷ್ಟ್ರಗಳು ಎನ್ನುವುದು ವಿಶೇಷ.