ನ್ಯೂಜಿಲೆಂಡ್ನ ಮಹಿಳಾ ರಾಜಕಾರಣಿಯೊಬ್ಬರು ಈಗ ಸುದ್ದಿಯಲ್ಲಿದ್ದಾರೆ. ಹೆರಿಗೆ ನೋವಲ್ಲೂ ಸೈಕಲ್ ತುಳಿದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಾಗಿ, ಒಂದು ಸುಂದರವಾದ, ಆರೋಗ್ಯಯುತವಾದ ಮಗುವಿಗೆ ಜನ್ಮ ನೀಡಿದ್ದಾರೆ. ಅದಾದ ಬಳಿಕ ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ನ್ಯೂಜಿಲೆಂಡ್ನ ಸಂಸದೆ ಜೂಲಿ ಅನ್ನೆ ಈ ಸಾಹಸ ಮಾಡಿದವರು. ಇವರು ರಾಜಕಾರಣಿಯಾಗುವುದಕ್ಕೂ ಮೊದಲು ಒಬ್ಬರು ಸೈಕ್ಲಿಸ್ಟ್. ಆದರೆ ತುಂಬು ಗರ್ಭ, ಆ ಹೆರಿಗೆ ನೋವಿನ ಮಧ್ಯೆ ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಸೈಕಲ್ ತುಳಿದುಕೊಂಡು ಬಂದು ಆಸ್ಪತ್ರೆ ಸೇರಿ ಒಂದೇ ತಾಸಿನಲ್ಲಿ ಮಗುವಿಗೆ ಜನ್ಮ ನೀಡಿದ್ದು ಇದೀಗ ಬಹುದೊಡ್ಡ ಸುದ್ದಿಯಾಗಿದೆ.
ಹೆರಿಗೆಯಾದ ಬಳಿಕ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಅನ್ನೆ ಜೆಂಟರ್, ಬಿಗ್ ನ್ಯೂಸ್ ! ಇಂದು ಮುಂಜಾನೆ 3.04ಗಂಟೆ ಹೊತ್ತಿಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯರೊಬ್ಬರ ಆಗಮನವಾಯಿತು. ಈ ಸಲ ಹೆರಿಗೆಗೆ ಸೈಕಲ್ ಹೊಡೆದು ಬಂದು ಅಡ್ಮಿಟ್ ಆಗುವ ಯೋಜನೆ ಇರಲಿಲ್ಲ. ಆದರೆ ಕೊನೆಯಲ್ಲಿ ಹಾಗೆಯೇ ಬರುವಂತಾಯ್ತು ಎಂದಿದ್ದಾರೆ. ಹಾಗೇ, ನನಗೆ 2 ಗಂಟೆ ಹೊತ್ತಿಗೆ ಹೆರಿಗೆ ನೋವು ಬರಲು ಶುರುವಾಯಿತು. ಆದರೆ ಅದು ತೀವ್ರವಾಗಿ ಇರಲಿಲ್ಲ. 2-3 ನಿಮಿಷಕ್ಕೊಮ್ಮೆ ಬಿಟ್ಟುಬಿಟ್ಟು ಬರುತ್ತಿತ್ತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿ ತೀವ್ರವಾಯಿತು. ಒಂದು ತಾಸಿನ ಬಳಿಕ ಮಗು ಹುಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ಈ ಪೋಸ್ಟ್ಗೆ ನೆಟ್ಟಿಗರಂತೂ ಫುಲ್ ಖುಷಿಯಾಗಿ ಕಾಮೆಂಟ್ ಹಾಕಿ, ತಾಯಿ ಮಗುವಿಗೆ ಹಾರೈಸಿದ್ದಾರೆ. ಇನ್ನು ಸೈಕ್ಲಿಂಗ್ ವೇಳೆ ಸಂಸದೆಯ ಪತಿಯೂ ಇದ್ದರು.
ಇದೇ ಮೊದಲಲ್ಲ !
ಒಂದು ಅಚ್ಚರಿಯ ಸಂಗತಿಯೆಂದರೆ ಈ ಸಂಸದೆ ಹೀಗೆ ಸೈಕಲ್ ಹೊಡೆದುಕೊಂಡು ಹೋಗಿ ಹೆರಿಗೆಗೆ ಅಡ್ಮಿಟ್ ಆಗಿದ್ದು ಇದೇ ಮೊದಲಲ್ಲ. 2018ರಲ್ಲಿ ಇವರು ತಮ್ಮ ಮೊದಲ ಮಗನಿಗೆ ಜನ್ಮ ನೀಡುವಾಗಲೂ ಸೈಕಲ್ ತುಳಿದುಕೊಂಡು ಹೋಗಿಯೇ ಆಕ್ಲೆಂಡ್ ನಗರದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಂದು ಹೆರಿಗೆ ಸ್ವಲ್ಪ ತಡವಾಗಿತ್ತು. ಈಗಲೂ ಮತ್ತೆ ಹಾಗೇ ಮಾಡಿದ್ದಾರೆ. ಇವರ ಸಾಹಸಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಸುರಿಯುತ್ತಿದೆ.
ಇದೇ ಹೊತ್ತಲ್ಲಿ ನ್ಯೂಜಿಲೆಂಡ್ನ ಮಹಿಳಾ ಪ್ರಧಾನಿ ಇಂಥದ್ದೇ ಒಂದು ಕಾರಣಕ್ಕೆ ಸುದ್ದಿಯಾಗಿದ್ದರು. ಅವರು ಹೆರಿಗೆಗಾಗಿ ರಜೆ ತೆಗೆದುಕೊಂಡಿದ್ದಕ್ಕೆ ಮತ್ತು 2018ರಲ್ಲಿ ತನ್ನ ಮೂರು ತಿಂಗಳ ಮಗುವನ್ನು ವಿಶ್ವಸಂಸ್ಥೆ ಸಭೆಗೆ ಕರೆತಂದು ಎಲ್ಲರ ಗಮನಸೆಳೆದಿದ್ದರು.
ಇದನ್ನೂ ಓದಿ: ನೀವು ಬೆಳಗ್ಗೆ ಎದ್ದ ತಕ್ಷಣ ಚಹಾ ಕುಡಿತೀರಾ? ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
Published On - 12:07 pm, Sun, 28 November 21