
ವಾಷಿಂಗ್ಟನ್, ಆಗಸ್ಟ್ 06: ಭಾರತ(India)ದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ ಎಂದು ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲಿ ಡೊನಾಲ್ಡ್ ಟ್ರಂಪ್‌ಗೆ ಸಲಹೆ ನೀಡಿದ್ದಾರೆ. ಭಾರತೀಯ ಸರಕುಗಳ ಮೇಲೆ ಭಾರೀ ಸುಂಕ ವಿಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬಗ್ಗೆ ನಿಕ್ಕಿ ಹ್ಯಾಲಿ ಮಾತನಾಡಿದ್ದು, ಈ ಕ್ರಮದಿಂದ ಅಮೆರಿಕ ಹಾಗೂ ಭಾರತದ ಸಂಬಂಧ ಹದಗೆಡಬಹುದು ಎಂದು ಎಚ್ಚರಿಸಿದ್ದಾರೆ.
ಚೀನಾದಂತಹ ಶತ್ರು ರಾಷ್ಟ್ರಕ್ಕೆ ರಿಯಾಯಿತಿಗಳನ್ನು ನೀಡಬೇಡಿ ಮತ್ತು ಭಾರತದಂತಹ ಮಿತ್ರ ರಾಷ್ಟ್ರದೊಂದಿಗಿನ ಸಂಬಂಧವನ್ನು ಹಾಳು ಮಾಡಬೇಡಿ ಎಂದು ಅವರು ಟ್ರಂಪ್‌ಗೆ ಸಲಹೆ ನೀಡಿದ್ದಾರೆ. ಟ್ರಂಪ್ ಆಡಳಿತವು ಎರಡು ಮಾನದಂಡಗಳನ್ನು ಅಳವಡಿಸಿಕೊಂಡಿದೆ ಎಂದು ನಿಕ್ಕಿ ಹ್ಯಾಲಿ ಆರೋಪಿಸಿದರು. ಚೀನಾದೊಂದಿಗಿನ ವ್ಯಾಪಾರಕ್ಕಾಗಿ ಅಮೆರಿಕ 90 ದಿನಗಳ ಸುಂಕ ವಿನಾಯಿತಿ ನೀಡಿದೆ, ಆದರೆ ಭಾರತದ ಮೇಲೆ ರೊಚ್ಚಿಗೆದ್ದಿದೆ ಎಂದರು.
ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸಂಬಂಧದ ಪರವಾಗಿ ನಿಕ್ಕಿ ಹ್ಯಾಲಿ ಬಹಳ ಹಿಂದಿನಿಂದಲೂ ಇದ್ದಾರೆ. ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ತಡೆಯಲು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳೊಂದಿಗೆ ಬಲವಾದ ಪಾಲುದಾರಿಕೆ ಅಗತ್ಯ ಎಂದು ಅವರು ನಂಬುತ್ತಾರೆ.
ಮತ್ತಷ್ಟು ಓದಿ: 24 ಗಂಟೆಯಲ್ಲಿ ಭಾರತದ ಮೇಲಿನ ಸುಂಕ ಹೆಚ್ಚಿಸುವುದಾಗಿ ಟ್ರಂಪ್ ಬೆದರಿಕೆ
ಆಗಸ್ಟ್ 1 ರಿಂದ ಜಾರಿಗೆ ಬಂದ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ. 25 ರಷ್ಟು ಹೆಚ್ಚಿಸುವುದಾಗಿ ಟ್ರಂಪ್ ಸಿಎನ್‌ಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಭಾರತವು ರಷ್ಯಾದ ತೈಲವನ್ನು ಖರೀದಿಸುವುದನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಹೊಸ ಒಪ್ಪಂದದಲ್ಲಿ ಭಾರತವು ಅಮೆರಿಕದ ಸರಕುಗಳ ಮೇಲೆ ಶೂನ್ಯ ಸುಂಕವನ್ನು ಪ್ರಸ್ತಾಪಿಸಿದೆ ಎಂದು ಟ್ರಂಪ್ ಹೇಳಿಕೊಂಡರು. ನಾವು ವಿರೋಧಿಸುವ ಯುದ್ಧಕ್ಕೆ ಅವರು ಹಣಕಾಸು ಒದಗಿಸುತ್ತಿದ್ದರೆ, ಶೂನ್ಯ ಸುಂಕಗಳು ವಿಧಿಸಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಭಾರತವು ತನ್ನ ಇಂಧನ ನೀತಿಯನ್ನು ಪದೇ ಪದೇ ಸಮರ್ಥಿಸಿಕೊಂಡಿದೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿ ಮತ್ತು ಕೈಗೆಟುಕುವ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ತೈಲವನ್ನು ಖರೀದಿಸುತ್ತದೆ ಎಂದು ಹೇಳುತ್ತದೆ. ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳು ಸಹ ರಷ್ಯಾದೊಂದಿಗೆ ವ್ಯಾಪಾರ ಮತ್ತು ಇಂಧನ ಸಂಬಂಧಗಳನ್ನು ಹೊಂದಿವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಸುಂಕಗಳನ್ನು ಜಾರಿಗೆ ತಂದರೆ, ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಜವಳಿ, ಆಟೋ ಭಾಗಗಳು, ರಾಸಾಯನಿಕಗಳು ಮತ್ತು ರತ್ನ-ಆಭರಣಗಳಂತಹ ವಲಯಗಳ ಸ್ಪರ್ಧಾತ್ಮಕತೆ ದುರ್ಬಲಗೊಳ್ಳಬಹುದು ಎಂದು ಐಸಿಆರ್ಎ ಹೇಳಿದೆ.
ಹಣಕಾಸು ವರ್ಷದಲ್ಲಿ ಅಮೆರಿಕದೊಂದಿಗಿನ ಭಾರತದ ವ್ಯಾಪಾರ ಹೆಚ್ಚುವರಿ 41 ಬಿಲಿಯನ್ ಡಾಲರ್ ಆಗಿದ್ದು, ಅದರ ಮೇಲೆ ಈಗ ಪರಿಣಾಮ ಬೀರಬಹುದು. ಆದಾಗ್ಯೂ, ಫಾರ್ಮಾ, ಪೆಟ್ರೋಲಿಯಂ ಮತ್ತು ಟೆಲಿಕಾಂ ಉಪಕರಣಗಳಂತಹ ಕೆಲವು ವಲಯಗಳು ಪ್ರಸ್ತುತ ಸುಂಕಗಳ ಪ್ರಭಾವದಿಂದ ಕಡಿಮೆ ಪರಿಣಾಮ ಬೀರಬಹುದು.
ಅಮೆರಿಕ ಮತ್ತು ಚೀನಾ ಮೇ ತಿಂಗಳಲ್ಲಿ 90 ದಿನಗಳ ಸುಂಕ ವಿರಾಮಕ್ಕೆ ಒಪ್ಪಿಕೊಂಡವು, ಈ ಅವಧಿಯಲ್ಲಿ ಅಮೆರಿಕದ ಸುಂಕಗಳನ್ನು ಶೇ. 145 ರಿಂದ ಶೇ. 30 ಕ್ಕೆ ಮತ್ತು ಚೀನಾದ ಸುಂಕಗಳನ್ನು ಶೇ. 125 ರಿಂದ ಶೇ. 10 ಕ್ಕೆ ಇಳಿಸಲಾಯಿತು. ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರರ ಹೇಳಿಕೆಯಲ್ಲಿ ಸರ್ಕಾರವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ