ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ

| Updated By: shruti hegde

Updated on: Dec 09, 2020 | 6:14 PM

ಕೆನಡಾ ದೇಶ ತನ್ನ ಜನಸಂಖ್ಯೆಗಿಂತಲೂ ಹೆಚ್ಚು ಲಸಿಕೆಗಳನ್ನು ಖರೀದಿ ಮಾಡಿದ್ದು ಅಲ್ಲಿನ ಪ್ರತಿ ಪ್ರಜೆಗೆ ಐದು ಸಲ ಲಸಿಕೆ ನೀಡಬಹುದಾಗಿದೆ ಎಂದು ವರದಿಯಾಗಿದೆ. ಬಲಾಢ್ಯ ರಾಷ್ಟ್ರಗಳ ಇಂತಹ ನಡವಳಿಕೆಗಳನ್ನು ಗಮನಿಸಿದರೆ ಇನ್ನೊಂದು ವರ್ಷವಾದರೂ ಬಡ ದೇಶಗಳ ಜನರಿಗೆ ಲಸಿಕೆ ಮರೀಚಿಕೆಯಾಗಿ ಉಳಿಯಲಿದೆ

ಬಡರಾಷ್ಟ್ರಗಳ ಬಡಪಾಯಿಗಳಿಗೆ ಕೊರೊನಾ ಲಸಿಕೆ ಮರೀಚಿಕೆಯಷ್ಟೇ.. ಅಧ್ಯಯನ ಹೇಳಿದ ಕಟು ಸತ್ಯ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ವೈರಾಣುವನ್ನು ಮಣಿಸಲು ಲಸಿಕೆ ಬಂದೇಬಿಡ್ತು. ಇನ್ನೇನು ಕೊವಿಡ್ ಹೇಳಹೆಸರಿಲ್ಲದಂತಾಗುತ್ತದೆ ಎಂದು ಬಹುತೇಕ ಜನರು ಖುಷಿಪಡುತ್ತಿದ್ದಾರೆ. ಇನ್ನು ಕೆಲವರು ದುಡ್ಡು ಎಷ್ಟಾದರೂ ಆಗಲಿ ಲಸಿಕೆ ಬಂದ ತಕ್ಷಣ ತೆಗೆದುಕೊಳ್ಳಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ದುರದೃಷ್ಟವಶಾತ್ ಈ ವಿಚಾರದಲ್ಲಿಯೂ ಬಲಾಢ್ಯರ ಜಗತ್ತು ಬಡಪಾಯಿಗಳನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಅಧ್ಯಯನವೊಂದು ಹೇಳುತ್ತಿದೆ.

ಇತ್ತೀಚಿನ ಅಧ್ಯಯನದ ಪ್ರಕಾರ ಜಗತ್ತಿನ ಸರಿಸುಮಾರು 70 ಬಡರಾಷ್ಟ್ರಗಳಲ್ಲಿ ವಾಸಿಸುವ 10ರಲ್ಲಿ 9 ಜನರಿಗೆ ಇನ್ನೊಂದು ವರ್ಷದೊಳಗೆ ಲಸಿಕೆ ಸಿಗುವುದೇ ಅನುಮಾನವಾಗಿದೆ. ಜಗತ್ತಿನ ಶೇ. 14ರಷ್ಟು ಜನಸಂಖ್ಯೆಯುಳ್ಳ ಪಾಶ್ಚಿಮಾತ್ಯ ದೇಶಗಳು ಈಗಾಗಲೇ ಶೇ. 53ರಷ್ಟು ಪರಿಣಾಮಕಾರಿ ಲಸಿಕೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಈ ಕಾರಣದಿಂದ ಬಡ ರಾಷ್ಟ್ರಗಳಿಗೆ ಅವಶ್ಯಕತೆ ಇದ್ದರೂ ಲಸಿಕೆ ದೊರೆಯುವುದು ದುರ್ಲಭವಾಗಲಿದೆ ಎಂದು ಅಧ್ಯಯನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ದುಡ್ಡಿದೆ ಅಂತ ಹೇಳಿ ಲಸಿಕೆಯನ್ನು ಗುಡ್ಡೆ ಹಾಕಿಕೊಂಡ ಕೆನಡಾ
ಕೆನಡಾ ದೇಶ ತನ್ನ ಜನಸಂಖ್ಯೆಗಿಂತಲೂ ಹೆಚ್ಚು ಲಸಿಕೆಗಳನ್ನು ಖರೀದಿ ಮಾಡಿದ್ದು ಅಲ್ಲಿನ ಪ್ರತಿ ಪ್ರಜೆಗೆ ಐದು ಸಲ ಲಸಿಕೆ ನೀಡಬಹುದಾಗಿದೆ ಎಂದು ವರದಿಯಾಗಿದೆ. ಬಲಾಢ್ಯ ರಾಷ್ಟ್ರಗಳ ಇಂತಹ ನಡವಳಿಕೆಗಳನ್ನು ಗಮನಿಸಿದರೆ ಇನ್ನೊಂದು ವರ್ಷವಾದರೂ ಬಡ ದೇಶಗಳ ಜನರಿಗೆ ಲಸಿಕೆ ಮರೀಚಿಕೆಯಾಗಿ ಉಳಿಯಲಿದೆ ಎಂದು ಹೇಳಲಾಗುತ್ತಿದೆ.

ಒಂದು ದೇಶ, ಅಲ್ಲಿನ ವ್ಯವಸ್ಥೆ ಅಥವಾ ತನ್ನ ಆರ್ಥಿಕ ಸ್ಥಿತಿಗತಿಯ ಕಾರಣಕ್ಕೆ ಈ ಜಗತ್ತಿನ ಯಾವ ವ್ಯಕ್ತಿಯೂ ಜೀವ ರಕ್ಷಕ ಲಸಿಕೆಯಿಂದ ವಂಚಿತನಾಗಬಾರದು ಎಂದು ಆಕ್ಸ್​ಫಾಮ್ ಸಂಸ್ಥೆಯ ಆರೋಗ್ಯ ನೀತಿಯ ಮುಖ್ಯಸ್ಥ ಅನ್ನಾ ಮರಿಯಾಟ್ ಅಭಿಪ್ರಾಯಪಟ್ಟಿದ್ದಾರೆ.

ಉಳ್ಳವರಿಗೆ ಆನೆ, ಬಡವರಿಗೆ ಆನೆ ಬಾಲ ಅನ್ನೋ ಹಾಗಾಯ್ತು
ಅತ್ಯಂತ ಕಡಿಮೆ ದರಕ್ಕೆ ಕೈಗೆಟುಕುವ ಪರಿಣಾಮಕಾರಿ ಲಸಿಕೆಯನ್ನು ಉತ್ಪಾದಿಸುತ್ತಿರುವ ಆಸ್ಟ್ರಾಜೆನೆಕಾ ಈಗಾಗಲೇ ತಾನು ಉತ್ಪಾದಿಸಿದ ಶೇ.64ರಷ್ಟು ಲಸಿಕೆಯನ್ನು ಕೊಳ್ಳಲು ಮುಂದುವರೆದ ದೇಶಗಳು ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿಸಿದೆ. ಅದೇ ರೀತಿ ಫೈಜರ್​ ಲಸಿಕೆಯ ಶೇ.96ರಷ್ಟು ಉತ್ಪಾದನೆ ಪಾಶ್ಚಿಮಾತ್ಯ ದೇಶಗಳನ್ನು ಸೇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಶಕ್ತಿಶಾಲಿ ರಾಷ್ಟ್ರಗಳ ಈ ನಡೆಯನ್ನು ಅವಲೋಕಿಸಿರುವ ಕೆಲವು ತಜ್ಞರು ಲಸಿಕೆ ಉತ್ಪಾದನೆಯ ತಾಂತ್ರಿಕತೆ ಹಾಗೂ ಸಂಪೂರ್ಣ ವಿವರಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಒಪ್ಪಿಸುವಂತೆ ಉತ್ಪಾದನಾ ಸಂಸ್ಥೆಗಳನ್ನು ಕೇಳಿಕೊಂಡಿದ್ದಾರೆ. ಬಲಶಾಲಿ ರಾಷ್ಟ್ರಗಳು ಅವಶ್ಯಕತೆಯನ್ನೂ ಮೀರಿ ಹೀಗೆ ಲಸಿಕೆ ಖರೀದಿಸಿದರೆ ಇನ್ನೂ ಹಲವು ವರ್ಷ ಕಳೆದರೂ ಕೊರೊನಾದಿಂದ ಜಗತ್ತು ಮುಕ್ತವಾಗುವುದು ಅನುಮಾನ.

Covid 19 ಲಸಿಕೆ ಪಡೆದವರ ತುಟಿ ಓರೆಯಾಗಿದ್ದೇಕೆ? ಅಡ್ಡ ಪರಿಣಾಮದ ಬಗ್ಗೆ ತಜ್ಞರ ಸಮರ್ಥನೆ?

Published On - 5:49 pm, Wed, 9 December 20