
ಅಲಾಸ್ಕಾ, ಆಗಸ್ಟ್ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ನಡುವೆ ಅಲಾಸ್ಕಾದಲ್ಲಿ ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಯಾವುದೇ ರೀತಿಯ ಒಪ್ಪಂದ ಏರ್ಪಟ್ಟಿಲ್ಲ. ಈ ಮಾತುಕತೆಯ ಬಗ್ಗೆ ಇಡೀ ವಿಶ್ವವೇ ಕುತೂಹಲದಿಂದ ಕಾದಿತ್ತು. ಮತ್ತೊಂದೆಡೆ, ಟ್ರಂಪ್ ಹಾಗೂ ಪುಟಿನ್ ನಡುವಣ ಮಾತುಕತೆ ಫಲಪ್ರದವಾಗದೇ ಇರುವುದರಿಂದ ಭಾರತದ ಮೇಲೆ ಅಮೆರಿಕ ಇನ್ನಷ್ಟು ಸುಂಕದ ಬರೆ ಎಳೆಯಲಿದೆಯೇ ಎಂಬ ಪ್ರಶ್ನೆಗೆ ಕಾರಣವಾಗಿದೆ.
ರಷ್ಯಾ ಹಾಗೂ ಉಕ್ರೇನ್ ನಡುವಣ ಯುದ್ಧ ಮತ್ತು ಯುರೋಪಿನ ಭದ್ರತಾ ಪರಿಸ್ಥಿತಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಇಡೀ ಜಗತ್ತು ಟ್ರಂಪ್ ಹಾಗೂ ಪುಟಿನ್ ನಡುವಣ ಉನ್ನತ ಮಟ್ಟದ ಶೃಂಗಸಭೆಯತ್ತ ಚಿತ್ತ ನೆಟ್ಟಿತ್ತು. 2019 ರ ನಂತರ ಇಬ್ಬರು ನಾಯಕರು ಮುಖಾಮುಖಿಯಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಇಬ್ಬರೂ ನಾಯಕರ ಜೊತೆ ಅವರ ಉನ್ನತ ಮಟ್ಟದ ತಂಡವಿತ್ತು. ಶಾಂತಿ ಸ್ಥಾಪನೆಯ ಉದ್ದೇಶದೊಂದಿಗೆ ಈ ಮಾತುಕತೆ ನಡೆಯುತ್ತಿದೆ ಎನ್ನಲಾಗಿತ್ತು.
ದ್ವಿಪಕ್ಷೀಯ ಮುನ್ನ, ಉಕ್ರೇನ್ ಯುದ್ಧವನ್ನು ತಕ್ಷಣವೇ ನಿಲ್ಲಿಸುವುದು ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಶೀಘ್ರದಲ್ಲೇ ಭೇಟಿಯಾಗುವುದಾಗಿ ಪುಟಿನ್ ಅವರಿಂದ ಭರವಸೆ ಪಡೆಯುವುದು ತಮ್ಮ ಗುರಿ ಎಂದು ಟ್ರಂಪ್ ಹೇಳಿದ್ದರು. ಆದಾಗ್ಯೂ, ಕದನ ವಿರಾಮದ ಕುರಿತು ಉಭಯ ನಾಯಕರು ಯಾವುದೇ ಒಪ್ಪಂದಕ್ಕೆ ಬಂದಿಲ್ಲ. ರಷ್ಯಾಕ್ಕೆ ಭೇಟಿ ನೀಡುವಂತೆ ಟ್ರಂಪ್ ಅವರನ್ನು ಪುಟಿನ್ ಆಹ್ವಾನಿಸಿದ್ದಾರೆ .
ದ್ವಿಪಕ್ಷೀಯ ಮಾತುಕತೆಯ ಬಗ್ಗೆ ಪ್ರತಿಕ್ರಿಯಿಸಿದ ಡೊನಾಲ್ಡ್ ಟ್ರಂಪ್, ಕೆಲವು ಪ್ರಗತಿ ಸಾಧಿಸಲಾಗಿದೆ. ಆದರೆ, ದೊಡ್ಡ ಸಮಸ್ಯೆಗಳು ಇನ್ನೂ ಉಳಿದಿವೆ ಎಂದಿದ್ದಾರೆ. ಮಾತುಕತೆಯಲ್ಲಿ ಹಲವು ಅಂಶಗಳ ಬಗ್ಗೆ ಸಹಮತಕ್ಕೆ ಬರಲಾಗಿದೆ. ಆದರೆ ಕೆಲವು ಅಂಶಗಳು ಉಳಿದಿವೆ. ಒಂದು ವಿಷಯವು ಅತ್ಯಂತ ಮುಖ್ಯವಾಗಿದೆ, ಆದರೆ ನಾನು ಅದನ್ನು ಈಗಲೇ ಹೇಳುವುದಿಲ್ಲ. ಅವರು (ಪುಟಿನ್) ಶೀಘ್ರದಲ್ಲೇ ಝೆಲೆನ್ಸ್ಕಿ ಮತ್ತು ಯುರೋಪಿಯನ್ ನಾಯಕರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ. ಪುಟಿನ್ ಅವರೊಂದಿಗಿನ ಅವರ ಮುಂದಿನ ಸಭೆ ಬಹುಶಃ ಮಾಸ್ಕೋದಲ್ಲಿ ನಡೆಯಬಹುದು ಎಂದು ಟ್ರಂಪ್ ಹೇಳಿದ್ದಾರೆ.
ಯುದ್ಧವನ್ನು ಕೊನೆಗೊಳಿಸಲು ಪ್ರಾಮಾಣಿಕವಾಗಿ ಆಸಕ್ತಿ ಹೊಂದಿರುವುದಾಗಿ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಆದರೆ ಅದಕ್ಕೂ ಮೊದಲು ಸಂಘರ್ಷದ ಪ್ರಮುಖ ಕಾರಣಗಳನ್ನು ಪರಿಹರಿಸಬೇಕು ಎಂದಿದ್ದಾರೆ. ಅಲ್ಲದೆ, ಮಾತುಕತೆ ಪ್ರಯತ್ನಗಳನ್ನು ಹಾಳುಮಾಡಬೇಡಿ ಎಂದು ಉಕ್ರೇನ್ ಮತ್ತು ಯುರೋಪ್‌ಗೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಈಗಾಗಲೇ ಶೇಕಡಾ 50 ರಷ್ಟು ಸುಂಕ ವಿಧಿಸಿದೆ. ಶೇಕಡಾ 25 ರಷ್ಟು ಮೂಲ ಸುಂಕ ಮತ್ತು ಶೇಕಡಾ 25 ರಷ್ಟು ಹೆಚ್ಚುವರಿ ಸುಂಕ ಸೇರಿ ಸದ್ಯ ಶೇ 50 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗಿನ ಮಾತುಕತೆ ವಿಫಲವಾದರೆ ಭಾರತದ ಉತ್ಪನ್ನಗಳ ಮೇಲೆ ಮತ್ತೆ ಶೇ 50 ರಷ್ಟು ಸುಂಕ ವಿಧಿಸುವುದಾಗಿ ಶುಕ್ರವಾರವಷ್ಟೇ ಅಮೆರಿಕ ಎಚ್ಚರಿಕೆ ನೀಡಿತ್ತು. ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ್ದರಿಂದಲೇ ರಷ್ಯಾ ಮಾತುಕತೆಗೆ ಮುಂದಾಯಿತು ಎಂದೂ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರು.
ಇದನ್ನೂ ಓದಿ: ಉಕ್ರೇನ್ ಜತೆ ಯುದ್ಧ ನಿಲ್ಲಿಸದಿದ್ದರೆ..ರಷ್ಯಾ ಅಧ್ಯಕ್ಷ ಪುಟಿನ್ಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಟ್ರಂಪ್
ಭಾರತದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದರಿಂದ ರಷ್ಯಾ ಅಧ್ಯಕ್ಷರನ್ನು ತಡೆಯಲಾಗದು ಎಂದು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ತಮ್ಮ ನಿಲುವನ್ನು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಇದೀಗ ಟ್ರಂಪ್ ಹಾಗೂ ಪುಟಿನ್ ಮಾತುಕತೆಯಲ್ಲಿ ಯಾವುದೇ ಒಪ್ಪಂದಗಳು ಏರ್ಪಡದೇ ಇರುವುದರಿಂದ ಭಾರತದ ಮೇಲೆ ಅಮೆರಿಕ ಮತ್ತಷ್ಟು ಸುಂಕದ ಬರೆ ಎಳೆಯುತ್ತದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:55 am, Sat, 16 August 25