ದೆಹಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ ಝಾಯಿ (ಮಲಾಲಾ ಯೂಸುಫ್-Malala Yousafzai) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಬ್ರಿಟನ್ನ ಬರ್ಮಿಂಗ್ಹ್ಯಾಮ್ನಲ್ಲಿ ನಾನು ಮತ್ತು ಅಸ್ಸರ್ ಮದುವೆಯಾಗಿದ್ದೇವೆ ಎಂದು ಮಲಾಲಾ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ತಮ್ಮ ನಿಖಾ ಸಮಾರಂಭದ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಇಂದು ನನ್ನ ಬದುಕಲ್ಲಿ ಅತ್ಯಮೂಲ್ಯ ದಿನವಾಗಿದೆ. ಅಸ್ಸರ್ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಬರ್ಮಿಂಗ್ಹ್ಯಾಂನಲ್ಲಿ ನಾವು ನಮ್ಮ ಕುಟುಂಬದವರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದೇವೆ. ನಮಗೆ ನಿಮ್ಮೆಲ್ಲರ ಆಶೀರ್ವಾದ ಬೇಕು. ನಾವು ಹೊಸಜೀವನ ಪ್ರಾರಂಭ ಮಾಡಲು ಉತ್ಸುಕರಾಗಿದ್ದೇವೆ. ಇದೊಂದು ರೋಮಾಂಚನಕಾರಿ ಸಂದರ್ಭ ಎಂದು ಹೇಳಿದ್ದಾರೆ.
Today marks a precious day in my life.
Asser and I tied the knot to be partners for life. We celebrated a small nikkah ceremony at home in Birmingham with our families. Please send us your prayers. We are excited to walk together for the journey ahead.
?: @malinfezehai pic.twitter.com/SNRgm3ufWP— Malala (@Malala) November 9, 2021
ಮಲಾಲಾ ಯೂಸುಫ್ 1997ರಲ್ಲಿ ಪಾಕಿಸ್ತಾನದ ಮಿಂಗೋರಾ ಎಂಬಲ್ಲಿ ಜನಿಸಿದ್ದಾರೆ. ತಮ್ಮ ಚಿಕ್ಕವಯಸ್ಸಿನಿಂದಲೇ ಹೆಣ್ಣುಮಕ್ಕಳ ಶಿಕ್ಷಣ, ವಿದ್ಯಾಭ್ಯಾಸದ ಹಕ್ಕನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. 2012ರಲ್ಲಿ ಅಂದರೆ ಅವರಿಗೆ ಕೇವಲ 11ವರ್ಷವಾಗಿದ್ದಾಗ ಒಮ್ಮೆ ಸಾರ್ವಜನಿಕವಾಗಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದರು. ಆಗ ಅವರಿಗೆ ತಾಲಿಬಾನ್ ಉಗ್ರರು ಗುಂಡು ಹೊಡೆದಿದ್ದರು. ತಾಲಿಬಾನಿಗಳು ಮೊದಲಿನಿಂದಲೂ ಹೆಣ್ಣುಮಕ್ಕಳು ಶಿಕ್ಷಣ ಕಲಿಯುವುದನ್ನು ವಿರೋಧಿಸುತ್ತಲೇ ಇದ್ದಾರೆ. ಅಂಥ ತಾಲಿಬಾನಿಗಳ ಕ್ರೌರ್ಯಕ್ಕೂ ಹೆದರದೆ ಮಲಾಲಾ ನಿರ್ಭಿಡೆಯಿಂದ ಮಾತನಾಡಿದ್ದರು. ಅಂದು ಗುಂಡೇಟಿನಿಂದ ಗಾಯಗೊಂಡಿದ್ದ ಮಲಾಲಾರನ್ನು ಬರ್ಮಿಂಗ್ಹ್ಯಾಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಗುಣಮುಖರಾದ ಬಳಿಕ ಕೂಡ ಅವರು ಹೆಣ್ಣುಮಕ್ಕಳ ಶಿಕ್ಷಣದ ಬಗೆಗಿನ ಹೋರಾಟವನ್ನೇ ಮುಂದುವರಿಸಿದ್ದಾರೆ. ಅದಾದ ಬಳಿಕ ಯುಕೆಯಲ್ಲಿಯೇ ವಾಸಿಸುತ್ತಿದ್ದರು.
ಮಲಾಲಾ ಸುಮ್ಮನೆ ಕುಳಿತುಕೊಳ್ಳಲೇ ಇಲ್ಲ. ತಮ್ಮ ತಂದೆಯ ಸಹಾಯದಿಂದ ಮಲಾಲಾ ಫಂಡ್ ಸ್ಥಾಪಿಸಿದರು. ಪ್ರತಿ ಹುಡುಗಿಯೂ ತಾನು ಕನಸುಕಂಡ ಗುರಿಯನ್ನು ಮುಟ್ಟಬೇಕು ಎಂದು ಹೇಳುತ್ತಿದ್ದ ಅವರು, ಅಂಥ ಹುಡುಗಿಯರಿಗೆ ಹಣದ ಅಗತ್ಯವಿದ್ದರೆ ಈ ಚಾರಿಟಿ ಮೂಲಕ ಮಾಡಲು ಶುರು ಮಾಡಿದರು. ಅವರ ಎಲ್ಲ ಕಾರ್ಯವನ್ನೂ ಗಮನಿಸಿ 2014ರ ಡಿಸೆಂಬರ್ನಲ್ಲಿ ನೊಬೆಲ್ ಶಾಂತಿ ಪುರಸ್ಕಾರ ನೀಡಲಾಯಿತು. ಹೀಗೆ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಜಗತ್ತಿನ ಅತ್ಯಂತ ಕಿರಿಯಳು ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 2020ರಲ್ಲಿ ಆಕ್ಸ್ಫರ್ಡ್ ಯೂನಿವರ್ಸಿಟಿಯಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಗನ ಅಪ್ರಾಪ್ತ ಪ್ರಿಯತಮೆಯ ಮೇಲೆ ತಂದೆ ಅತ್ಯಾಚಾರ! ಸಂತ್ರಸ್ತೆ ತಾಯಿಯಿಂದ ದೂರು ದಾಖಲು
Published On - 11:30 am, Wed, 10 November 21