ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ತುಂಬ ಸಪೂರ ಆಗಿಬಿಟ್ಟಿದ್ದಾರೆ ಎಂಬುದೊಂದು ವಿಚಾರ ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ಚರ್ಚೆಯಾಗುತ್ತಿದ್ದಾರೆ. ಕಿಮ್ ಜಾಂಗ್ ಉನ್ ಮೊದಲಿನಂತಿಲ್ಲ..ಮೈಕೈ ತುಂಬಿಕೊಂಡು ಇಲ್ಲ. ಅವರ ತೂಕ ಇಳಿದಿದೆ. ಏನಾದರೂ ಆರೋಗ್ಯ ಸಮಸ್ಯೆ ಆಗಿದ್ದಿರಬಹುದು ಅಥವಾ ಡಯಟ್ ಮಾಡುತ್ತಿರಬಹುದು ಎಂಬಿತ್ಯಾದಿ ಚರ್ಚೆಗಳು ರಾಜಕೀಯ ವಿಶ್ಲೇಷಕರ ಮಟ್ಟದಲ್ಲೇ ನಡೆಯುತ್ತಿದೆ. ಅದರಲ್ಲೂ ಕಿಮ್ ಜಾಂಗ್ ಉನ್ ಮೊದಲಿದ್ದುದಕ್ಕೂ, ಈಗಿರುವುದಕ್ಕೂ ಸ್ಪಷ್ಟ ವ್ಯತ್ಯಾಸ ತಿಳಿಸುವ ಫೋಟೋ, ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಇನ್ನಷ್ಟು ಅನುಮಾನಗಳು ಹುಟ್ಟುಕೊಂಡಿವೆ.
ಇದೀಗ ಗುಪ್ತಚರ ದಳವೊಂದು ನೀಡಿದ ಮಾಹಿತಿಯನ್ನು ದಕ್ಷಿಣ ಕೊರಿಯಾ ಜನಪ್ರತಿನಿಧಿಯೊಬ್ಬರು ಬಹಿರಂಗಪಡಿಸಿದ್ದಾರೆ. ಅದರ ಪ್ರಕಾರನ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರು ಸುಮಾರು 44 ಪೌಂಡ್ ಅಂದರೆ ಅಜಮಾಸು 20 ಕೆಜಿ ತೂಕ ಕಳೆದುಕೊಂಡಿದ್ದಾರೆ. ಆದರೆ ಆಡಳಿತದ ಮೇಲೆ ಪರಿಣಾಮ ಬೀರುವಂಥ ಗಂಭೀರ ಆರೋಗ್ಯ ಸಮಸ್ಯೆಯೇನೂ ಅವರಿಗೆ ಇಲ್ಲ ಎಂದು ದಕ್ಷಿಣ ಕೊರಿಯಾ ಜನಪ್ರತಿನಿಧಿ ಕಿಮ್ ಬೈಂಗ್ ಕೀ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಿಮ್ ಜಾಂಗ್ ಉನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯೇನಾದರೂ ಇದ್ದರೆ ಅದು ಗೊತ್ತಾಗುತ್ತದೆ. ಅವರ ಚಿಕಿತ್ಸೆಯ ಜವಾಬ್ದಾರಿ ಹೊತ್ತಿರುವ ಆಸ್ಪತ್ರೆಗೆ ಅಗತ್ಯ ಔಷಧಿಗಳು ಆಮದಾಗುತ್ತವೆ. ಒಂದಲ್ಲ ಒಂದು ಕಾರಣದಿಂದ ತಿಳಿದೇ ತಿಳಿಯುತ್ತದೆ. ಆದರೆ ಅಂಥ ಲಕ್ಷಣಗಳೇನೂ ಕಂಡುಬಂದಿಲ್ಲ ಎಂದು ಕಿಮ್ ಬೈಂಗ್ ಹೇಳಿದ್ದಾರೆ. ಅಷ್ಟೇ ಅಲ್ಲ, ಅವರು ಹಲವು ತಾಸುಗಳ ಸಭೆ ನಡೆಸುತ್ತಾರೆ..ಸಹಜವಾಗಿಯೇ ನಡೆದಾಡುತ್ತಾರೆ. ಹಾಗಾಗಿ ಅವರಿಗೆ ಆರೋಗ್ಯ ಸಮಸ್ಯೆ ಏನೂ ಆದಂತಿಲ್ಲ ಎಂದೂ ಹೇಳಿದ್ದಾರೆ. 37ವರ್ಷದ ಕಿಮ್ ಜಾಂಗ್ ಉನ್ ಮೇ ತಿಂಗಳಲ್ಲಿ ಜನರ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಜೂನ್ನಲ್ಲಿ ಕಾಣಿಸಿಕೊಂಡಾಗ ಅಚ್ಚರಿ ಪಡುವ ಸರದಿ ಜನರದ್ದಾಗಿತ್ತು. ಊಹೆಗೂ ಮೀರಿ ಸಪೂರ ಆಗಿದ್ದರು. ಮುಖವೆಲ್ಲ ಇಳಿದಿತ್ತು.
ನಿರಂಕುಶಾಧಿಕಾರಿ ಕಿಮ್ ಜಾಂಗ್ ಉನ್ ರಹಸ್ಯ ಆಡಳಿತದ ಮೇಲೆ ದಕ್ಷಿಣ ಕೊರಿಯಾದ ಪತ್ತೇದಾರಿ ಏಜೆನ್ಸಿಗಳು ಸದಾ ಒಂದು ಕಣ್ಣಿಟ್ಟಿರುತ್ತವೆ. ಈ ಗುಪ್ತಚರ ದಳಗಳು ಹೇಳುವ ಪ್ರಕಾರ, ಕಿಮ್ ಜಾಂಗ್ ಉನ್ ಸುಮಾರು 140 ಕೆಜಿ ತೂಕವಿದ್ದರು. ಅವರ ಕುಟುಂಬಕ್ಕೆ ಹೃದ್ರೋಗ ಇತಿಹಾಸವಿದ್ದು, ಹಲವರು ಈ ರೋಗಕ್ಕೆ ತುತ್ತಾಗಿದ್ದಾರೆ. ಹಾಗಾಗಿಯೇ ಈಗ ಕಿಮ್ ಜಾಂಗ್ ಉನ್ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ತೂಕ ಇಳಿಸುತ್ತಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಚೆನ್ನೈನಲ್ಲಿ ಅರ್ಜುನ್ ಸರ್ಜಾ ನಿರ್ಮಿಸಿದ ಆಂಜನೇಯ ಸ್ವಾಮಿ ದೇವಾಲಯದ ದರ್ಶನ ಪಡೆದ ಜ್ಯೂ. ಚಿರು
North Korean leader Kim Jong Un lost 44 pounds Says South Korean Spy Agency