ದೆಹಲಿ: ಜಗತ್ತಿನಲ್ಲಿ ಒಮಿಕ್ರಾನ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಈಗಿರುವ ಕೊವಿಡ್ 19 ಲಸಿಕೆಗಳು ಒಮಿಕ್ರಾನ್ ವಿರುದ್ಧ ಹೋರಾಡಲಾರವು ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಈ ಮಧ್ಯೆ ಅಮೆರಿಕದ ಫಾರ್ಮಾ ಕಂಪನಿ ಫೈಜರ್(Pfizer), ಮಾರ್ಚ್ ತಿಂಗಳಷ್ಟೊತ್ತಿಗೆ ಒಮಿಕ್ರಾನ್ ಲಸಿಕೆ (Omicron Vaccine)ಸಿದ್ಧವಾಗಲಿದೆ ಎಂದು ಹೇಳಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಕೊವಿಡ್ 19 ಲಸಿಕೆಗಳು ಒಮಿಕ್ರಾನ್ ಸೋಂಕಿನ ವಿರುದ್ಧವೂ ಸಮಂಜಸವಾದ ರಕ್ಷಣೆ ನೀಡುತ್ತಿದೆ. ಆದರೆ ಒಮಿಕ್ರಾನ್ಗೇ ನಿರ್ಧಿಷ್ಟವಾದ ಲಸಿಕೆ ಮಾರ್ಚ್ ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಫೈಜರ್ ಕಂಪನಿ ಸಿಇಒ ಅಲ್ಬರ್ಟ್ ಬೌರ್ಲಾ ತಿಳಿಸಿದ್ದಾರೆ.
ಬೌರ್ಲಾ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ಒಮಿಕ್ರಾನ್ ಸೋಂಕಿನ ವಿರುದ್ಧ ಹೋರಾಟಕ್ಕೆ ಮಾರ್ಚ್ನಲ್ಲಿ ಲಸಿಕೆ ಸಿದ್ಧವಾಗುತ್ತದೆ. ಈ ಲಸಿಕೆಯ ಅಗತ್ಯ ನಮಗೆ ಇದೆಯೇ? ಇಲ್ಲವೇ? ಎಂಬುದು ಗೊತ್ತಿಲ್ಲ. ಅದನ್ನು ಹೇಗೆ ಬಳಸಬಹುದು ಎಂಬುದು ಸದ್ಯಕ್ಕಂತೂ ನನಗೆ ಗೊತ್ತಿಲ್ಲ. ಆದರೆ ಒಮಿಕ್ರಾನ್ ಸೋಂಕಿನ ಮೇಲೆ ಕೇಂದ್ರೀಕರಿಸಿ ಲಸಿಕೆ ತಯಾರಿಸಲಾಗುತ್ತದೆ. ಇದು ಕೇವಲ ಒಮಿಕ್ರಾನ್ ಅಷ್ಟೇ ಅಲ್ಲ, ಇನ್ನಿತರ ಕೊವಿಡ್ 19 ತಳಿಗಳ ಮೇಲೆ ಕೂಡ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.
ಒಮಿಕ್ರಾನ್ ಲಸಿಕೆ ತಯಾರಿಕೆಗೆ ಮಾಡೆರ್ನಾ ಪ್ರಯತ್ನ
ಇನ್ನೊಂದೆಡೆ ಮತ್ತೊಂದು ಔಷಧಿ ಕಂಪನಿ ಮಾಡೆರ್ನಾ ಕೂಡ ಒಮಿಕ್ರಾನ್ ಸೋಂಕನ್ನು ಕೇಂದ್ರೀಕರಿಸಿ ಬೂಸ್ಟರ್ ಡೋಸ್ ಕೊಡಬಹುದಾದ ಲಸಿಕೆ ಉತ್ಪಾದನೆಯ ಮೇಲೆ ಕೇಂದ್ರೀಕರಿಸಿದೆ ಎಂದು ಮಾಡೆರ್ನಾ ಸಿಇಒ ಸ್ಟೀಫನ್ ಬ್ಯಾನ್ಸೆಲ್ ತಿಳಿಸಿದ್ದಾರೆ. ವೈರಸ್ ವಿರುದ್ಧ ಹೋರಾಟ ಮಾಡಲು ನಾವು ಅದಕ್ಕಿಂತಲೂ ಮುಂದೇ ಇರಬೇಕು. ವೈರಸ್ ಹಿಂದಿದ್ದು, ಅದನ್ನು ಮಣಿಸಲು ಸಾಧ್ಯವಿಲ್ಲ. ಹೀಗಾಗಿ ಒಮಿಕ್ರಾನ್ ಮತ್ತು ಇತರ ತಳಿಗಳ ವಿರುದ್ಧ ರೋಗನಿರೋಧಕ ಶಕ್ತಿ ಉತ್ತೇಜಿಸುವ ಸಲುವಾಗಿ ಬೂಸ್ಟರ್ ಡೋಸ್ ಉತ್ಪಾದನೆ ಬಗ್ಗೆ ನಾವು ಯೋಚಿಸುತ್ತಿದ್ದೇವೆ. ಈ ಸಂಬಂಧ ಪ್ರಪಂಚಾದ್ಯಂತ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ನಾಯಕರೊಂದಿಗೆ ಚರ್ಚಿಸುತ್ತಿದ್ದೇವೆ ಎಂದು ಇತ್ತೀಚೆಗೆ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕೊವಿಡ್ 19ನ ರೂಪಾಂತರಿ ಒಮಿಕ್ರಾನ್ ಇದೀಗ ಭರ್ಜರಿ ಪ್ರಸರಣಗೊಳ್ಳುತ್ತಿದೆ. ಇದರ ಲಕ್ಷಣಗಳು ಸೌಮ್ಯವಾಗಿದ್ದರೂ ಕೂಡ ಹರಡುವಿಕೆ ವೇಗ ಅಧಿಕವಾಗಿದೆ. ಭಾರತದಲ್ಲಿ ನಾಲ್ಕು ಸಾವಿರದ ಗಡಿ ದಾಟಿದೆ.
ಇದನ್ನೂ ಓದಿ: ಪ್ರಿಯಕರನಿಗಾಗಿ ಪತಿಯ ಕೊಲೆ ಮಾಡಿ ಮೂರ್ಛೆ ರೋಗದಿಂದ ಸಾವು ಎಂದು ಕತೆ ಕಟ್ಟಿದ್ದ ಖರ್ತನಾಕ್ ಲೇಡಿಯ ಬಂಧನ