ಇಸ್ಲಾಮಾಬಾದ್, ನವೆಂಬರ್ 9: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಭಾರೀ ಬಾಂಬ್ ಸ್ಫೋಟ ಸಂಭವಿಸಿದ್ದು, ಸುಮಾರು 25 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಪೊಲೀಸರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳವನ್ನೂ ಸ್ಥಳಕ್ಕೆ ಕರೆಸಲಾಗಿದೆ. ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಕ್ವೆಟ್ಟಾದಲ್ಲಿ ಎರಡು ಬಾಂಬ್ ಸ್ಫೋಟಗಳು ಸ್ಫೋಟಗೊಂಡಿವೆ ಎಂದು ಹೇಳಲಾಗುತ್ತಿದೆ. ಒಂದು ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದರೆ, ಎರಡನೇ ಸ್ಫೋಟದಲ್ಲಿ ಸುಮಾರು 15 ಜನರು ಗಾಯಗೊಂಡಿದ್ದಾರೆ. ಈ ಬಾಂಬ್ ಸ್ಫೋಟವನ್ನು ಯಾರು ಮಾಡಿದ್ದಾರೆ ಮತ್ತು ಏಕೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಸ್ತುತ, ಈ ಸ್ಫೋಟದ ಬಗ್ಗೆ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟದ ವೇಳೆ ರೈಲು ನಿಲ್ದಾಣದಲ್ಲಿ ಭಾರಿ ಜನಸಂದಣಿ ಇತ್ತು.
ಸ್ಫೋಟದ ನಂತರ, ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. ಸ್ಫೋಟದ ತೀವ್ರತೆ ಬಹಳಷ್ಟು ಗಂಭೀರವಾಗಿತ್ತು ಎಂದು ತಿಳಿಸಿದ್ದಾರೆ.
ಗಾಯಗೊಂಡ ಪ್ರಯಾಣಿಕರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ದಾಳಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂಡ್ ತಿಳಿಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ತಲುಪಿದ್ದು, ಬಾಂಬ್ ನಿಷ್ಕ್ರಿಯ ದಳವು ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಅತಿದೊಡ್ಡ ಮತ್ತು ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಬಲೂಚಿಸ್ತಾನ್ ಇತ್ತೀಚೆಗೆ ಪ್ರತ್ಯೇಕತಾವಾದಿ ಉಗ್ರರ ನೆಲೆಯಾಗಿದೆ.
ಕೆಲ ದಿನಗಳ ಹಿಂದೆಯೂ ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಪಾಕಿಸ್ತಾನದ ಪ್ರಕ್ಷುಬ್ಧ ಉತ್ತರ ವಜೀರಿಸ್ತಾನ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಇದಲ್ಲದೇ ಖೈಬರ್ ಪಖ್ತುಂಖ್ವಾದಲ್ಲಿ ಶಾಲೆಯೊಂದರ ಬಳಿ ಬಾಂಬ್ ಸ್ಫೋಟ ಸಂಭವಿಸಿದ್ದು, ಈ ಸ್ಫೋಟದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಭೀಕರ ಸ್ಫೋಟಕ್ಕೆ ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರಛಿದ್ರ: ವಿಡಿಯೋ ನೋಡಿ
ಕೆಲವೇ ದಿನಗಳ ಮೊದಲು, ಪಾಕಿಸ್ತಾನದ ಬಲೂಚಿಸ್ತಾನದ ಶಾಲೆಯೊಂದರ ಬಳಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ಐವರು ಶಾಲಾ ಮಕ್ಕಳು ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದರು. ಕನಿಷ್ಠ 22 ಮಂದಿ ಗಾಯಗೊಂಡಿದ್ದರು. ಬೈಕ್‌ನಲ್ಲಿ ಐಇಡಿ ಅಳವಡಿಸಿ ಸ್ಫೋಟ ನಡೆಸಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Sat, 9 November 24