Pakistan Economy: ದೊಡ್ಡ ಕೈಗಾರಿಕೆಗಳ ಮೇಲೆ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದ ಪಾಕಿಸ್ತಾನ, ಷೇರು ಮೌಲ್ಯದಲ್ಲಿ ಭಾರೀ ಕುಸಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 24, 2022 | 3:02 PM

ಪಾಕಿಸ್ತಾನ ಸರ್ಕಾರ ತೆಗೆದುಕೊಂಡಿರುವ ಕ್ರಮ ಜನರಲ್ಲಿ ಭರವಸೆ ಹುಟ್ಟಿಸುವ ಬದಲು ಭೀತಿ ಹೆಚ್ಚಿಸಿದೆ

Pakistan Economy: ದೊಡ್ಡ ಕೈಗಾರಿಕೆಗಳ ಮೇಲೆ ಶೇ 10ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿದ ಪಾಕಿಸ್ತಾನ, ಷೇರು ಮೌಲ್ಯದಲ್ಲಿ ಭಾರೀ ಕುಸಿತ
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್
Follow us on

ಇಸ್ಲಾಮಾಬಾದ್: ವಿದೇಶಿ ಮೀಸಲು ನಿಧಿಯ (Forex Reserve) ಕೊರತೆ, ಸಾಲದ ಹೊರೆ, ಏರುತ್ತಿರುವ ಹಣದುಬ್ಬರದಿಂದ  (Inflation) ಕಂಗಾಲಾಗಿರುವ ಪಾಕಿಸ್ತಾನ ಕಂಗಾಲಾಗಿದೆ. ಆರ್ಥಿಕತೆಗೆ ಸ್ಥಿರತೆ (Pakistan Economic Crisis) ಒದಗಿಸುವ ಉದ್ದೇಶದಿಂದ ಅಲ್ಲಿನ ಸರ್ಕಾರ ತೆಗೆದುಕೊಂಡಿರುವ ಕ್ರಮ ಜನರಲ್ಲಿ ಭರವಸೆ ಹುಟ್ಟಿಸುವ ಬದಲು ಭೀತಿ ಹೆಚ್ಚಿಸಿದೆ. ಅಲ್ಲಿ ದೊಡ್ಡ ಕಾರ್ಖಾನೆಗಳ ಮೇಲೆ ಸರ್ಕಾರ ಶೇ 10ರ ಸೂಪರ್ ಟ್ಯಾಕ್ಸ್ ಹೇರಿದೆ. ಸಿಮೆಂಟ್, ಉಕ್ಕು, ಸಕ್ಕರೆ, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಎಲ್​ಎನ್​ಜಿ ಟರ್ಮಿನಲ್ಸ್, ಬಟ್ಟೆ, ಬ್ಯಾಂಕಿಂಗ್, ಆಟೊಮೊಬೈಲ್ ಮತ್ತು ಸಿಗರೇಟ್ ವಲಯಗಳಲ್ಲಿರುವ ಕಾರ್ಖಾನೆಗಳ ಮೇಲೆ ಈ ಹೊಸ ತೆರಿಗೆಯು ಲಾಗೂ ಆಗಲಿದೆ.

ದೇಶವನ್ನು ಅಪಾಯದಿಂದ ಪಾರು ಮಾಡಲು ಅತ್ಯಂತ ಧೈರ್ಯದ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸೂಪರ್ ಟ್ಯಾಕ್ಸ್ ಘೋಷಣೆಯನ್ನು ಪ್ರಧಾನಿ ಶಹಬಾಜ್ ಷರೀಫ್ ವಿವರಿಸಿದ್ದಾರೆ. ಆದರೆ ಸರ್ಕಾರದ ನಿರ್ಧಾರವು ಮಾರುಕಟ್ಟೆಯಲ್ಲಿ ತಲ್ಲಣ ಹೆಚ್ಚಿಸಿದೆ. ಪಾಕಿಸ್ತಾನ ಷೇರು ವಹಿವಾಟು ಕೇಂದ್ರವು (Pakistan Stock Exchange – PSX) ಪ್ರಧಾನಿ ಭಾಷಣದ ನಂತರ 2000 ಅಂಶಗಳ ಕುಸಿತ ದಾಖಲಿಸಿತು. ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಇಂಧನ ದರ, ವಿದ್ಯುತ್ ದರ ಮತ್ತು ತೆರಿಗೆ ಪ್ರಮಾಣವನ್ನು ಪಾಕ್ ಸರ್ಕಾರ ಹೆಚ್ಚಿಸಿದೆ. ವಿಶ್ವ ಹಣಕಾಸು ನಿಧಿಯಿಂದ (IMF) ಸಾಲಮನ್ನಾ ಮತ್ತು ಹೊಸ ಸಾಲ ಕೋರುತ್ತಿರುವ ಪಾಕಿಸ್ತಾನ ಸರ್ಕಾರವು, ಐಎಂಎಫ್ ಷರತ್ತುಗಳಿಗೆ ಅನುಗುಣವಾಗಿ ಹಲವು ನಿರ್ಧಾರಗಳನ್ನು ಘೋಷಿಸುತ್ತಿದೆ.

ದಿವಾಳಿಯಾಗುವ ಅಪಾಯದಿಂದ ದೇಶವನ್ನು ಪಾರು ಮಾಡುವ ಜೊತೆಗೆ ಮಿತ್ರದೇಶಗಳು ಮತ್ತು ವಿತ್ತೀಯ ಸಂಸ್ಥೆಗಳಿಂದ ಅಗತ್ಯ ನೆರವು ಸಿಗಬಹುದು ಎನ್ನುವ ಕಾರಣಕ್ಕೆ ಪಾಕಿಸ್ತಾನ ಸರ್ಕಾರವು ಹಲವು ನಿರ್ಧಾರಗಳನ್ನು ಘೋಷಿಸಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಸಾಲ ಮರುಪಾವತಿಗೆ ಪಾಕಿಸ್ತಾನಕ್ಕೆ 41 ಶತಕೋಟಿ ಡಾಲರ್ ಬೇಕಿದೆ. ಪ್ರಸ್ತುತ ಪಾಕಿಸ್ತಾನದ ವಿದೇಶಿ ಮೀಸಲು ಪ್ರಮಾಣವು 10 ಶತಕೋಟಿ ಡಾಲರ್​ ಮೊತ್ತಕ್ಕಿಂತಲೂ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಇದು ಪಾಕಿಸ್ತಾನದ ಒಟ್ಟು ಅಗತ್ಯಗಳ 2 ತಿಂಗಳ ಆಮದು ಮಾಡಿಕೊಳ್ಳಲು ಕಷ್ಟ ಎನಿಸುವ ಪ್ರಮಾಣ.

ಕಳೆದ ಮೇ ತಿಂಗಳಿನಿಂದ ಈಚೆಗೆ ಪಾಕಿಸ್ತಾನದಲ್ಲಿ ಹಣದುಬ್ಬರ ವಿಪರೀತ ಎನ್ನಿಸುವಷ್ಟು ಹೆಚ್ಚಾಗಿದೆ. ಇದೇ ಹೊತ್ತಿಗೆ ಪಾಕ್​ನ ಕರೆನ್ಸಿ ಮೌಲ್ಯವು ಶೇ 17ರಷ್ಟು ಕುಸಿದಿದೆ. ಖರ್ಚು ಕಡಿಮೆ ಮಾಡುವುದು ಮತ್ತು ವಿತ್ತೀಯ ಕೊರತೆಗೆ ಕಡಿವಾಣ ಹಾಕುವ ಪ್ರಕ್ರಿಯೆಯನ್ನು ಪಾಕಿಸ್ತಾನ ಮುಂದುವರಿಸಿದೆಯಾದರೂ ವಿಶ್ವ ಹಣಕಾಸು ನಿಧಿಯು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದೆ.

Published On - 3:02 pm, Fri, 24 June 22