Sri Lanka Crisis: ಶ್ರೀಲಂಕಾದಲ್ಲಿ ಪೆಟ್ರೋಲ್ಗಾಗಿ 5 ದಿನ ಸಾಲಲ್ಲಿ ಕಾಯುತ್ತಾ ನಿಂತ ವ್ಯಕ್ತಿ ಸಾವು!
ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಖರೀದಿಸಲು ಸರತಿ ಸಾಲಿನಲ್ಲಿ ದಿನಗಟ್ಟಲೆ ಕಾದು ಕುಳಿತಿದ್ದಕ್ಕೆ ಇದುವರೆಗೆ 10 ಜನ ಸಾವನ್ನಪ್ಪಿದ್ದಾರೆ.
ಕೊಲಂಬೊ: ಶ್ರೀಲಂಕಾದಲ್ಲಿ ಯಾವ ರೀತಿಯ ಆರ್ಥಿಕ ಬಿಕ್ಕಟ್ಟು (Sri Lanka Economic Crisis) ಎದುರಾಗಿದೆ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಆರ್ಥಿಕ ಸಂಕಷ್ಟದಿಂದ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್, ಅಗತ್ಯ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ. ಹಣ ಕೊಡುತ್ತೇವೆಂದರೂ ಕೆಲವು ವಸ್ತುಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ಸಾವು-ನೋವುಗಳು ಕೂಡ ಸಂಭವಿಸಿವೆ. ಶ್ರೀಲಂಕಾದಲ್ಲಿ 63 ವರ್ಷದ ಟ್ರಕ್ ಡ್ರೈವರ್ ಶ್ರೀಲಂಕಾದ ಪಶ್ಚಿಮ ಪ್ರಾಂತ್ಯದ ಗ್ಯಾಸ್ ತುಂಬುವ ಕೇಂದ್ರದಲ್ಲಿ 5 ದಿನಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಾ ನಿಂತು ಸಾವನ್ನಪ್ಪಿದ್ದಾರೆ.
ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಖರೀದಿಸಲು ಸರತಿ ಸಾಲಿನಲ್ಲಿ ದಿನಗಟ್ಟಲೆ ಕಾದು ಕುಳಿತಿದ್ದಕ್ಕೆ ಇದುವರೆಗೆ 10 ಜನ ಸಾವನ್ನಪ್ಪಿದ್ದಾರೆ. ಟ್ರಕ್ ಚಾಲಕ ಕಳೆದ 5 ದಿನದಿಂದ ಪೆಟ್ರೋಲ್ಗೆ ಕಾಯುತ್ತಾ ನಿಂತವನು ಸಾವನ್ನಪ್ಪಿದ್ದಾನೆ. ಅಂಗುರುವಾತೋಟದ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಸರತಿ ಸಾಲಿನಲ್ಲಿ ನಿಂತ ನಂತರ ಆ ವ್ಯಕ್ತಿ ಸುಸ್ತಿನಿಂದ ತನ್ನ ವಾಹನ ಹತ್ತಿ ಕುಳಿತಿದ್ದ. ಆ ವಾಹನದೊಳಗೆ ಆತ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ
ಶ್ರೀಲಂಕಾದಲ್ಲಿ ವಿದೇಶಿ ವಿನಿಮಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಪಡಿತರ ಇಂಧನದ ಕ್ರಮವನ್ನು ಜಾರಿಗೆ ತರಲಾಗುವುದು. ಈ ಬಿಕ್ಕಟ್ಟಿನ ನಡುವೆ, ದಿನಗಟ್ಟಲೆ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ಜನರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸರತಿ ಸಾಲಿನಲ್ಲಿ ಸತ್ತವರ ಸಂಖ್ಯೆ ಈಗ 10ಕ್ಕೇರಿದೆ. ಹೀಗೆ ಸಾವನ್ನಪ್ಪಿದ ಎಲ್ಲರೂ 43ರಿಂದ 84 ವರ್ಷ ವಯಸ್ಸಿನ ಪುರುಷರಾಗಿದ್ದಾರೆ. ಸರತಿ ಸಾಲಿನಲ್ಲಿ ವರದಿಯಾದ ಸಾವುಗಳಲ್ಲಿ ಹೆಚ್ಚಿನ ಸಾವುಗಳು ಹೃದಯ ಸ್ತಂಭನದಿಂದ ಸಂಭವಿಸಿವೆ ಎಂದು ಡೈಲಿ ಮಿರರ್ ಪತ್ರಿಕೆ ವರದಿ ಮಾಡಿದೆ.
ಒಂದು ವಾರದ ಹಿಂದೆ 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಇಂಧನ ಕೇಂದ್ರದಲ್ಲಿ ಹಲವಾರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಸಾವನ್ನಪ್ಪಿದ್ದರು. ಸುಮಾರು 22 ಮಿಲಿಯನ್ ಜನರಿಗೆ ನೆಲೆಯಾಗಿರುವ ಶ್ರೀಲಂಕಾ ಕಳೆದ 70 ವರ್ಷಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಶ್ರೀಲಂಕಾದ ಆರ್ಥಿಕತೆಯು ತೀವ್ರವಾದ ಇಂಧನ ಕೊರತೆಯನ್ನು ಅನುಭವಿಸುತ್ತಿದೆ, ಆಹಾರದ ಬೆಲೆಗಳು ಮತ್ತು ಔಷಧಿಗಳ ಕೊರತೆ ಎದುರಾಗಿದೆ.