Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ

Sri Lanka Crisis: ಆರ್ಥಿಕ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಭಾರತಕ್ಕೆ ಧನ್ಯವಾದ ತಿಳಿಸಿದ ಶ್ರೀಲಂಕಾ ಪ್ರಧಾನಿ
ಶ್ರೀಲಂಕಾದಲ್ಲಿ ಅಗತ್ಯ ವಸ್ತುಗಳನ್ನು ಪಡೆಯಲು ಸಾಲಿನಲ್ಲಿ ನಿಂತಿರುವ ಜನ
Image Credit source: Hindustan Times

ಶ್ರೀಲಂಕಾದ ಪ್ರಧಾನಿ ವಿಕ್ರಮಸಿಂಘೆ ಅವರು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿ, ಆರ್ಥಿಕ ಬಿಕ್ಕಟ್ಟಿನ ಅವಧಿಯಲ್ಲಿ ಶ್ರೀಲಂಕಾಕ್ಕೆ ಭಾರತ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

TV9kannada Web Team

| Edited By: Sushma Chakre

May 28, 2022 | 7:57 AM

ನವದೆಹಲಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು (Sri Lanka Economic Crisis) ಉಂಟಾಗಿದ್ದು, ಇದರ ಪರಿಣಾಮವನ್ನು ಕಡಿಮೆ ಮಾಡಲು ಸರಿಯಾದ ನೀತಿ, ನಿರ್ಧಾರಗಳನ್ನು ತೆಗೆದುಕೊಳ್ಳುವತ್ತ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಶ್ರೀಲಂಕಾ ದೇಶದ ಪ್ರಧಾನಿ ರನಿಲ್ ವಿಕ್ರಮಸಿಂಘೆ (Ranil Wickremesinghe) ಹೇಳಿದ್ದಾರೆ. ಇದೇ ವೇಳೆ ಆರ್ಥಿಕ ಸಂಕಷ್ಟದಲ್ಲಿ ಶ್ರೀಲಂಕಾಕ್ಕೆ ಸಹಾಯ ಮಾಡಿದ ಭಾರತ ಮತ್ತು ಜಪಾನ್‌ಗೆ ಧನ್ಯವಾದವನ್ನು ತಿಳಿಸಿದ್ದಾರೆ. ಇತ್ತೀಚೆಗೆ ಆರನೇ ಬಾರಿಗೆ ಶ್ರೀಲಂಕಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಅನುಭವಿ ನಾಯಕ ವಿಕ್ರಮಸಿಂಘೆ ಅವರು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರೊಂದಿಗೆ ಮಾತನಾಡಿದ್ದಾರೆ. ಈ ಕಷ್ಟದ ಅವಧಿಯಲ್ಲಿ ಶ್ರೀಲಂಕಾಕ್ಕೆ ಭಾರತ ನೀಡಿದ ಬೆಂಬಲಕ್ಕಾಗಿ ಧನ್ಯವಾದ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಕೂಡ ಮಾಡಿರುವ 73 ವರ್ಷದ ನಾಯಕ ವಿಕ್ರಮಸಿಂಘೆ, ದಕ್ಷಿಣ ಏಷ್ಯಾದ ರಾಷ್ಟ್ರವಾದ ಶ್ರೀಲಂಕಾ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ (ಐಎಂಎಫ್) ತ್ವರಿತ ಮಾತುಕತೆಗಳನ್ನು ನಡೆಸಲು ಪ್ರಯತ್ನಿಸುತ್ತಿದೆ ಎಂದು ಒತ್ತಿಹೇಳಿದ್ದಾರೆ. ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಕಾಂಕ್ರೀಟ್ ಪರಿಹಾರಗಳನ್ನು ಕಂಡುಕೊಳ್ಳಲು ಜೂನ್ ಮಧ್ಯದ ವೇಳೆಗೆ ಒಂದು ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಶ್ರೀಲಂಕಾಕ್ಕೆ ಸಹಾಯ ಮಾಡಲು ವಿದೇಶಿ ನೆರವು ಒಕ್ಕೂಟವನ್ನು ಸ್ಥಾಪಿಸಲು ಮುಂದಾಳತ್ವ ವಹಿಸಲು ಕ್ವಾಡ್ ಸದಸ್ಯರಿಗೆ (ಅಮೆರಿಕಾ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ) ಮಾಡಿದ ಪ್ರಸ್ತಾವನೆಗೆ ಭಾರತ ಮತ್ತು ಜಪಾನ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಇಂದು ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಕಷ್ಟದ ಅವಧಿಯಲ್ಲಿ ಭಾರತ ನೀಡಿದ ಬೆಂಬಲಕ್ಕಾಗಿ ನಾನು ನಮ್ಮ ದೇಶದ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ನಮ್ಮ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಶ್ರೀಲಂಕಾ ಪ್ರಧಾನಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Sri Lanka Crisis ಶ್ರೀಲಂಕಾದಲ್ಲಿ ಪೆಟ್ರೋಲ್‌ ಖಾಲಿ, ಆರ್ಥಿಕತೆ ಅನಿಶ್ಚಿತ ಸ್ಥಿತಿಯಲ್ಲಿದೆ: ಪ್ರಧಾನಿ ರನಿಲ್ ವಿಕ್ರಮಸಿಂಘೆ

ಜಪಾನ್​ನಲ್ಲಿ ಕ್ವಾಡ್ ನಾಯಕರ ಶೃಂಗಸಭೆಯು ಈ ವಾರ ನಡೆದಿದ್ದು, ನಾಲ್ಕು ರಾಷ್ಟ್ರಗಳ ನಾಯಕರಾದ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬಿಡೆನ್, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ ಮತ್ತು ಆಸ್ಟ್ರೇಲಿಯನ್ ಪಿಎಂ ಆಂಥೋನಿ ಅಲ್ಬನೀಸ್ ಉಕ್ರೇನ್ ಹೊರತುಪಡಿಸಿ ಇಂಡೋ-ಪೆಸಿಫಿಕ್ ಸಮಸ್ಯೆಗಳಿಗೆ ಸಂಬಂಧಿಸಿದ, ಯುದ್ಧ ಮತ್ತು ಇತರ ಜಾಗತಿಕ ವಿಷಯಗಳ ಬಗ್ಗೆ ಚರ್ಚಿಸಿದರು.

ಶೃಂಗಸಭೆಯ ಹೊರತಾಗಿ, ಆರ್ಥಿಕ ಬಿಕ್ಕಟ್ಟು ಪೀಡಿತ ಶ್ರೀಲಂಕಾಕ್ಕೆ ಸಹಾಯ ಮಾಡಲು ಭಾರತ ಮತ್ತು ಜಪಾನ್ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿವೆ ಎಂದು ಪ್ರಧಾನಿ ಮೋದಿ ಮತ್ತು ಕಿಶಿದಾ ನಡುವಿನ ಸಭೆಯ ನಂತರ ಜಪಾನ್ ಸರ್ಕಾರ ತಿಳಿಸಿದೆ. ಶ್ರೀಲಂಕಾಕ್ಕೆ ಭಾರತ USD 700,000 ಮೌಲ್ಯದ 25 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಹಸ್ತಾಂತರಿಸಿದೆ. ಕಳೆದ ವಾರ ಭಾರತದಿಂದ 9,000 ಮೆಟ್ರಿಕ್ ಟನ್ ಅಕ್ಕಿ, 200 ಮೆಟ್ರಿಕ್ ಟನ್ ಹಾಲಿನ ಪುಡಿ ಮತ್ತು 24 ಮೆಟ್ರಿಕ್ ಟನ್ ಜೀವರಕ್ಷಕ ಔಷಧಗಳನ್ನು ಒಳಗೊಂಡಿರುವ ತುರ್ತು ಪರಿಹಾರ ಸಾಮಗ್ರಿಗಳನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada