ರಷ್ಯಾ, ಒಮನ್ ಬೆನ್ನಲ್ಲೇ ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿಯನ್ನು ಸ್ವಾಗತಿಸಿದ ಪಾಕಿಸ್ತಾನ

ಅಮೆರಿಕ-ಇಸ್ರೇಲ್​ನ ಜಂಟಿ ದಾಳಿಯಲ್ಲಿ ಇರಾನ್ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾವನ್ನಪ್ಪಿದ್ದರು. ಇದಾದ ಕೇವಲ 1 ವಾರದ ನಂತರ ಇರಾನ್‌ನ ತಜ್ಞರ ಸಭೆಯು ಅವರ 56 ವರ್ಷದ ಮಗ ಮೊಜ್ತಬಾ ಖಮೇನಿ ಅವರನ್ನು ಹೊಸ ಸರ್ವೋಚ್ಚ ನಾಯಕನನ್ನಾಗಿ ನೇಮಿಸಿತು. ರಷ್ಯಾ, ಒಮನ್ ಬೆನ್ನಲ್ಲೇ ಮೊಜ್ತಬಾ ಖಮೇನಿ ಅವರಿಗೆ ಪಾಕಿಸ್ತಾನ ಕೂಡ ಅಭಿನಂದನೆ ಸಲ್ಲಿಸಿದೆ.

ರಷ್ಯಾ, ಒಮನ್ ಬೆನ್ನಲ್ಲೇ ಇರಾನ್‌ನ ಹೊಸ ಸುಪ್ರೀಂ ನಾಯಕ ಮೊಜ್ತಬಾ ಖಮೇನಿಯನ್ನು ಸ್ವಾಗತಿಸಿದ ಪಾಕಿಸ್ತಾನ
Mojtaba Khamenei

Updated on: Mar 10, 2026 | 8:56 PM

ಇಸ್ಲಮಾಬಾದ್, ಮಾರ್ಚ್ 10: ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಫೆಬ್ರವರಿ 28ರಂದು ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ (Ayatollah Ali Khamenei) ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿರುವ ಇರಾನ್‌ನ ಹೊಸ ಸರ್ವೋಚ್ಚ ನಾಯಕರಾದ ಮೊಜ್ತಬಾ ಖಮೇನಿ ಅವರನ್ನು ಪಾಕಿಸ್ತಾನ ಅಭಿನಂದಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೊಜ್ತಬಾ ಖಮೇನಿ ಅವರನ್ನು ಅಭಿನಂದಿಸಿದ್ದು, ಅವರ ತಂದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇರಾನಿನ ಹೊಸ ನಾಯಕ ದೇಶವನ್ನು ಶಾಂತಿ ಮತ್ತು ಸ್ಥಿರತೆಯತ್ತ ಕೊಂಡೊಯ್ಯುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕನ ಜವಾಬ್ದಾರಿಗಳನ್ನು ವಹಿಸಿಕೊಂಡ ಅಯತೊಲ್ಲಾ ಮೊಜ್ತಬಾ ಖಮೇನಿ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ತಂದೆ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಕುಟುಂಬ ಸದಸ್ಯರ ಸಾವಿಗೆ ಪಾಕಿಸ್ತಾನದ ಜನರ ಪರವಾಗಿ ನಾನು ಸಂತಾಪ ಮತ್ತು ಪ್ರಾರ್ಥನೆಗಳನ್ನು ತಿಳಿಸುತ್ತೇನೆ. “ಹೊಸ ಸುಪ್ರೀಂ ನಾಯಕ ಮುಂದಿನ ವರ್ಷಗಳಲ್ಲಿ ಇರಾನ್ ಅನ್ನು ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ಶೆಹಬಾಜ್ ಷರೀಫ್ ಎಕ್ಸ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಇರಾನ್‌ನ ಪಾದ್ರಿಗಳ ತಂಡ ಮೊಜ್ತಬಾ ಖಮೇನಿ ಅವರನ್ನು ಮುಂದಿನ ಇರಾನಿನ ಸರ್ವೋಚ್ಚ ನಾಯಕರನ್ನಾಗಿ ಆಯ್ಕೆ ಮಾಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆಯ್ಕೆಯನ್ನು ನೇರವಾಗಿ ವಿರೋಧಿಸಿದ್ದರು. ಹಲವಾರು ದೇಶಗಳು ಮೊಜ್ತಬಾ ಅವರ ಉತ್ತರಾಧಿಕಾರವನ್ನು ಸ್ವಾಗತಿಸಿದ್ದವು. ರಷ್ಯಾ, ಒಮನ್ ಬೆನ್ನಲ್ಲೇ ಇದೀಗ ಪಾಕಿಸ್ತಾನವೂ ಈ ಆಯ್ಕೆಯನ್ನು ಸ್ವಾಗತಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us