
ಬೋಸ್ಟನ್, ಅಕ್ಟೋಬರ್ 3: ಬರ್ಮುಡಾದಿಂದ ಬೋಸ್ಟನ್‌ಗೆ 6 ಜನರೊಂದಿಗೆ ಪ್ರಯಾಣಿಸುತ್ತಿದ್ದ ವೈದ್ಯಕೀಯ ತುರ್ತು ಸೇವಾ ವಿಮಾನವೊಂದು ಇಂದು ಮುಂಜಾನೆ ದಿಢೀರ್ ನಾಪತ್ತೆಯಾಗಿದೆ. ಅಮೆರಿಕದ ಕರಾವಳಿ ಕಾವಲು ಪಡೆ ನ್ಯಾಂಟುಕೆಟ್ ಕರಾವಳಿಯ ಸಾಗರ ಪ್ರದೇಶದಲ್ಲಿ ವಾಯು ಮತ್ತು ನೌಕಾ ಮೂಲಕ ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ‘ಲ್ಯಾಟಿಟ್ಯೂಡ್ ಏರ್ ಆ್ಯಂಬುಲೆನ್ಸ್’ ಸಂಸ್ಥೆಗೆ ಸೇರಿದ ಗಲ್ಫ್‌ಸ್ಟ್ರೀಮ್ G100 ವಿಮಾನವು ಬರ್ಮುಡಾದ ಎಲ್.ಎಫ್. ವೇಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ಥಳೀಯ ಸಮಯ ಮಧ್ಯರಾತ್ರಿ 12ಕ್ಕೆ ಟೇಕ್ ಆಫ್ ಆಗಿತ್ತು. ವಿಮಾನಯಾನ ಸಂಸ್ಥೆ ಹಾಗೂ ಫ್ಲೈಟ್ ಟ್ರ್ಯಾಕಿಂಗ್ ಅಂಕಿಅಂಶಗಳ ಪ್ರಕಾರ, ಈ ವಿಮಾನವು ಮುಂಜಾನೆ 1.25ಕ್ಕೆ ಬೋಸ್ಟನ್ ಲೋ ಲೋಗನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಪ್ರಯಾಣದ ಮಧ್ಯದಲ್ಲೇ ವಿಮಾನವು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ನೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ.
ಶೋಧ ಕಾರ್ಯಾಚರಣೆ ತೀವ್ರಗೊಳಿಸಿದ ಕೋಸ್ಟ್ ಗಾರ್ಡ್:
ಇಂದು ಮುಂಜಾನೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಈ ಗಲ್ಫ್‌ಸ್ಟ್ರೀಮ್ G100 ವಿಮಾನಕ್ಕಾಗಿ ‘ಶೋಧ ಮತ್ತು ರಕ್ಷಣೆ’ ಎಚ್ಚರಿಕೆಯನ್ನು ನೀಡಿತು. ವಿಮಾನದಲ್ಲಿದ್ದ 6 ಜನರನ್ನು ಪತ್ತೆಹಚ್ಚಲು ಎಫ್‌ಎಎ ತಕ್ಷಣವೇ ರಕ್ಷಣಾ ಸಮನ್ವಯ ಕೇಂದ್ರ ಹಾಗೂ ಅಮೆರಿಕ ಕರಾವಳಿ ಕಾವಲು ಪಡೆಯೊಂದಿಗೆ ಸಂಪರ್ಕ ಸಾಧಿಸಿತು.
ಇದನ್ನೂ ಓದಿ: 6 ವರ್ಷದ ಬಾಲಕಿ ಫ್ಲೈದುಬೈ ವಿಮಾನದಲ್ಲಿ ಟಾಯ್ಲೆಟ್ಗೆ ಹೋಗಿದ್ದಾಗ ಬಯಲಾಯ್ತು ಪೈಲಟ್ ಮೇಲಿನ ದಾಳಿಯ ಸಂಗತಿ
ಮುಂಜಾನೆ ಸುಮಾರು 2 ಗಂಟೆಗೆ ಮಾಹಿತಿ ಪಡೆದ ಕರಾವಳಿ ಕಾವಲು ಪಡೆ, ನ್ಯಾಂಟುಕೆಟ್ ದಕ್ಷಿಣದ ಜಲಮೂಲಗಳಲ್ಲಿ ಕಾರ್ಯಾಚರಣೆ ಆರಂಭಿಸಿದೆ. ರಾಡಾರ್ ಮಾಹಿತಿಯ ಪ್ರಕಾರ, ವಿಮಾನವು ಬೋಸ್ಟನ್ ತಲುಪಲು ಕೆಲವೇ ನಿಮಿಷಗಳಿರುವಾಗ ಅಂದರೆ ಮುಂಜಾನೆ 1.23ಕ್ಕೆ ತನ್ನ ಅಂತಿಮ ಸಿಗ್ನಲ್ ಅನ್ನು ನೀಡಿ ಸಂಪರ್ಕ ಕಳೆದುಕೊಂಡಿದೆ.
A terrible situation as assets have been deployed to search for missing Latitude Air Ambulance with 6 souls on board. Lost contact off Nantucket early this morning, en-route to Boston from Bermuda. Follow @USCGNortheast for updates. God speed 🙏 pic.twitter.com/LuWZpOuiwB
— Scott Dunlop (@sdoppler2) October 3, 2026
ಲ್ಯಾಟಿಟ್ಯೂಡ್ ಏರ್ ಆ್ಯಂಬುಲೆನ್ಸ್ ಸಂಸ್ಥೆಯು ತಮ್ಮ ವಿಮಾನ ನಾಪತ್ತೆಯಾಗಿರುವುದನ್ನು ದೃಢಪಡಿಸಿದ್ದು, ರಕ್ಷಣಾ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ. ಈ ಸಂಸ್ಥೆಯು ತುರ್ತು ವೈದ್ಯಕೀಯ ಸ್ಥಳಾಂತರ, ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವುದು ಹಾಗೂ ವಿದೇಶಗಳಲ್ಲಿರುವ ಜನರನ್ನು ತಾಯ್ನಾಡಿಗೆ ಕರೆತರುವ ಸೇವೆಗಳನ್ನು ಒದಗಿಸುತ್ತದೆ.
ಇದನ್ನೂ ಓದಿ: ಫ್ಲೈದುಬೈ ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ
ಲ್ಯಾಟಿಟ್ಯೂಡ್ ಸಂಸ್ಥೆಯು 4 ಗಲ್ಫ್‌ಸ್ಟ್ರೀಮ್ G100 ವಿಮಾನಗಳು ಸೇರಿದಂತೆ ಒಟ್ಟು 10 ವಿಮಾನಗಳನ್ನು ಹೊಂದಿದೆ. ಈ ವಿಮಾನಗಳು ಸುಸಜ್ಜಿತ ತೀವ್ರ ನಿಗಾ (ಐಸಿಯು) ಉಪಕರಣಗಳನ್ನು ಹೊಂದಿದ್ದು, ನರ್ಸ್‌ಗಳು ಮತ್ತು ಶ್ವಾಸಕೋಶದ ಚಿಕಿತ್ಸಕರು ಸೇರಿದಂತೆ ಪರಿಣಿತ ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡಿರುತ್ತವೆ.
ವಿಮಾನದಲ್ಲಿದ್ದ 6 ಸಿಬ್ಬಂದಿ ಮಾತ್ರವೇ ಅಥವಾ ರೋಗಿ ಹಾಗೂ ಅವರ ಸಹಾಯಕರೂ ಇದ್ದರೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾದಂತೆ ನೀಡುವುದಾಗಿ ಕರಾವಳಿ ಕಾವಲು ಪಡೆ ತಿಳಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ