AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ವರ್ಷದ ಬಾಲಕಿ ಫ್ಲೈದುಬೈ ವಿಮಾನದಲ್ಲಿ ಟಾಯ್ಲೆಟ್​​ಗೆ ಹೋಗಿದ್ದಾಗ ಬಯಲಾಯ್ತು ಪೈಲಟ್ ಮೇಲಿನ ದಾಳಿಯ ಸಂಗತಿ

ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಬೋಯಿಂಗ್ 737 ಮ್ಯಾಕ್ಸ್ 8' ವಿಮಾನದಲ್ಲಿ ನೀನಾ ಮಾನೆಸ್ ಎಂಬ 6 ವರ್ಷದ ಬಾಲಕಿ ತನ್ನ ಪೋಷಕರಾದ ತಾಲಿ ಮಾನೆಸ್ ಮತ್ತು ಟ್ಜಿಕಾ ಮಾನೆಸ್ ಅವರೊಂದಿಗೆ ಪ್ರಯಾಣಿಸುತ್ತಿದ್ದಳು. ವಿಮಾನದಲ್ಲಿದ್ದ ವೇಳೆ ಬಾಲಕಿ ನೀನಾ ತನ್ನ ತಾಯಿಯೊಂದಿಗೆ ಶೌಚಾಲಯಕ್ಕೆ ತೆರಳಿದ್ದಾಗ ಕಾಕ್‌ಪಿಟ್‌ ಒಳಗಿನಿಂದ ಬಂದ ಚೀರಾಟದ ಶಬ್ದಗಳನ್ನು ಗಮನಿಸಿದ್ದರು. "ಕಾಕ್‌ಪಿಟ್‌ ಸುತ್ತಲೂ ರಕ್ತ ಚೆಲ್ಲಿತ್ತು ಮತ್ತು ಒಳಗಡೆ ತೀವ್ರ ಸ್ವರೂಪದ ಕಾದಾಟ ನಡೆಯುತ್ತಿತ್ತು. ಇದನ್ನು ಕಂಡ ತಕ್ಷಣ ನಾನು 'ಅವನು ಪೈಲಟ್‌‌ಗೆ ಚಾಕುವಿನಿಂದ ಇರಿಯುತ್ತಿದ್ದಾನೆ! ಬನ್ನಿ ಕಾಪಾಡಿ!' ಎಂದು ಜೋರಾಗಿ ಕಿರುಚಿದೆ. ಆದರೆ ಸುತ್ತಲಿದ್ದ ಪ್ರಯಾಣಿಕರು ನನ್ನ ಮಾತುಗಳನ್ನು ಅರ್ಥಮಾಡಿಕೊಳ್ಳದೆ ಆಶ್ಚರ್ಯದಿಂದ ನೋಡುತ್ತಿದ್ದರು" ಎಂದು ತಾಲಿ ಆ ಭಯಾನಕ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.

6 ವರ್ಷದ ಬಾಲಕಿ ಫ್ಲೈದುಬೈ ವಿಮಾನದಲ್ಲಿ ಟಾಯ್ಲೆಟ್​​ಗೆ ಹೋಗಿದ್ದಾಗ ಬಯಲಾಯ್ತು ಪೈಲಟ್ ಮೇಲಿನ ದಾಳಿಯ ಸಂಗತಿ
ನೀನಾ ಮಾನೆಸ್ - ತಾಲಿ ಮಾನೆಸ್
ಸುಷ್ಮಾ ಚಕ್ರೆ
|

Updated on: Oct 02, 2026 | 4:35 PM

Share

ಟೆಲ್ ಅವೀವ್, ಅಕ್ಟೋಬರ್ 2: ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದ ಕಾಕ್‌ಪಿಟ್‌ನಲ್ಲಿ ಓಮನ್ ಮೂಲದ ಕೋ-ಪೈಲಟ್ ಜಿಹಾದಿ ಶೈಲಿಯಲ್ಲಿ ನಡೆಸಿದ ಭೀಕರ ಚಾಕು ದಾಳಿ ಹಾಗೂ ವಿಮಾನವನ್ನು ಪತನಗೊಳಿಸುವ ಸಂಚು, 6 ವರ್ಷದ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಗ ಬಯಲಾಗಿದೆ. 6 ವರ್ಷದ ನೀನಾ ಮಾನೆಸ್ ಎಂಬ ಬಾಲಕಿಯು ತನ್ನ ತಾಯಿ ತಾಲಿ ಮಾನೆಸ್ ಜೊತೆ ಪ್ರಯಾಣಿಸುತ್ತಿದ್ದಾಗ ವಿಮಾನದ ಮುಂಭಾಗದಲ್ಲಿದ್ದ ಶೌಚಾಲಯಕ್ಕೆ ತೆರಳಿದ್ದಳು. ಈ ವೇಳೆ ಕಾಕ್‌ಪಿಟ್ ಒಳಗಿನಿಂದ ಅಳು ಹಾಗೂ ಚೀರಾಟದ ಶಬ್ದವನ್ನು ತಾಯಿ-ಮಗಳು ಇಬ್ಬರೂ ಗಮನಿಸಿದ್ದರು.

ಕಾಕ್​ಪಿಟ್ ಬಳಿಯೇ ಟಾಯ್ಲೆಟ್​ ಇದ್ದುದರಿಂದ ಒಳಗಿನ ಗಲಾಟೆ ಕೇಳುತ್ತಿತ್ತು. ತಕ್ಷಣ ಟಾಯ್ಲೆಟ್​​ನಿಂದ ಹೊರಗೆ ಬಂದ ತಾಲಿ ಫ್ಲೈಟ್ ಅಟೆಂಡರ್​​ಗೆ ಕಾಕ್​ಪಿಟ್​ನೊಳಗೆ ಏನೋ ಗಲಾಟೆ ಕೇಳುತ್ತಿದೆ ಎಂದು ಹೇಳಿದರು. ಆದರೆ, ಅವರು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೂ ಏನೋ ಸರಿಯಿಲ್ಲವೆಂದು ತಾಲಿಗೆ ಅನಿಸಿದ್ದರಿಂದ ಆಕೆ ಕಾಕ್​ಪಿಟ್ ಬಳಿ ಓಡಿಹೋಗಿ ನೋಡಿದಾಗ ಅರ್ಧ ಓಪನ್ ಆಗಿದ್ದ ಬಾಗಿಲಿನಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪೈಲಟ್ ಸ್ಮಿತ್ ಮಚ್ಚರ್ ಕಾಣಿಸಿದ್ದರು. ಅದನ್ನು ನೋಡಿ ಹೆದರಿದ ಆಕೆ ಜೋರಾಗಿ ಕಿರುಚುತ್ತಾ, ಪೈಲಟ್​​ಗೆ ಚಾಕು ಇರಿತವಾಗಿದೆ, ಹೆಲ್ಪ್ ಮಾಡಿ ಎಂದು ಹೇಳಿದ್ದರು.

ಶೌಚಾಲಯದ ಬಳಿ ಕೇಳಿದ ಚೀರಾಟ:

ಬುಧವಾರ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದ ಮುಂಭಾಗದ ಸೀಟಿನಲ್ಲಿ ಕುಳಿತಿದ್ದ ತಾಲಿ ಮಾನೆಸ್, ತಮ್ಮ 6 ವರ್ಷದ ಮಗಳು ನೀನಾಳನ್ನು ಶೌಚಾಲಯಕ್ಕೆ ಕರೆದುಕೊಂಡು ಹೋದಾಗ ಕಾಕ್‌ಪಿಟ್ ಒಳಗಿನಿಂದ ಬಂದ ಭೀಕರ ಅಳು ಹಾಗೂ ಚೀರಾಟದ ಶಬ್ದವನ್ನು ಕೇಳಿದರು. ಅದನ್ನು ಕೇಳಿ ಹೆದರಿದ ಮಗಳು “ಅಮ್ಮಾ, ನಾವು ಸಾಯುತ್ತೇವಾ?!” ಎಂದು ಗೊಳೋ ಎಂದು ಅತ್ತಿದ್ದಾಳೆ. ಇದರಿಂದ ಅವರು ಭಯದಿಂದ ಕಾಕ್​ಪಿಟ್ ಬಳಿಗೆ ಓಡಿದಾಗ ಅಷ್ಟರಲ್ಲಾಗಲೇ ಇರಿತಕ್ಕೊಳಗಾಗಿ ಕಾಕ್​ಪಿಟ್ ಡೋರ್ ಓಪನ್ ಮಾಡಿ ಕೆಳಗೆ ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕಾಣಿಸಿದ್ದರು.

ಇದನ್ನೂ ಓದಿ: ಫ್ಲೈದುಬೈ ಸಾಹಸಿ ಭಾರತೀಯ ಪೈಲಟ್‌ ಸ್ಮಿತ್ ಮಚ್ಛಾರ್‌ಗೆ ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ

ರಕ್ತದ ಮಡುವಿನಲ್ಲಿ ನರಳುತ್ತಿದ್ದ ಪೈಲಟ್:

ಕಾಕ್‌ಪಿಟ್‌ನ ಬಾಗಿಲು ಭಾಗಶಃ ತೆರೆದುಕೊಂಡಿತ್ತು. ಇರಿತಕ್ಕೊಳಗಾಗಿ ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಭಾರತೀಯ ಸಾಹಸಿ ಕಮಾಂಡರ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಓಮನ್ ಮೂಲದ ದಾಳಿಕೋರ ಕೋ-ಪೈಲಟ್‌ನೊಂದಿಗೆ ಕಾದಾಡುತ್ತಾ ಡೋರ್ ಲಾಕ್​ ಕೋಡ್ ಓಪನ್ ಮಾಡಿದ್ದರು. ಕಾಕ್‌ಪಿಟ್ ಪೂರ್ತಿ ರಕ್ತಸಿಕ್ತವಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ತಮ್ಮನ್ನು ಹಾಗೂ ವಿಮಾನದಲ್ಲಿದ್ದವರನ್ನು ರಕ್ಷಿಸಿಕೊಳ್ಳಲು ಧೈರ್ಯದಿಂದ ಬಾಗಿಲು ತೆರೆದು ಹೊರಬರಲು ಯತ್ನಿಸಿದ್ದು ಆಶ್ಚರ್ಯಕರವಾಗಿತ್ತು ಎಂದು ತಾಲಿ ವಿವರಿಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಮಾಂಡರ್ ಸ್ಮಿತ್ ಅವರ ಮೇಲೆ ದಾಳಿಕೋರ ಕೋ-ಪೈಲಟ್ ಕುಳಿತು ಮತ್ತೆ ಚಾಕುವಿನಿಂದ ಇರಿಯಲು ಯತ್ನಿಸುತ್ತಿದ್ದಾಗ, ತಾಲಿ ಅವರ ಗಂಡ ಟ್ಜಿಕಾ ಮಾನೆಸ್, ಅಸಾಫ್ ರಾಜುವಾನ್ ಮತ್ತು ಯಾನಿವ್ ಹಾಯುನ್ ಎಂಬ ಮೂವರು ಪ್ರಯಾಣಿಕರು ತಕ್ಷಣವೇ ಆತನ ಮೇಲೆ ಮುಗಿಬಿದ್ದರು. ವಿಮಾನದಲ್ಲಿದ್ದ ಹೆಡ್‌ಫೋನ್ ಕೇಬಲ್​ಗಳನ್ನೇ ಬಳಸಿ ದಾಳಿಕೋರನ ಕೈ-ಕಾಲುಗಳನ್ನು ಕಟ್ಟಿಹಾಕಿ ಆತನನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡರು.

ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದ ಸಂಕಲ್ಪ: ನೂರಾರು ಜನರ ಪ್ರಾಣ ಉಳಿಸಿದ ಪೈಲಟ್‌ ಸ್ಮಿತ್​ಗೆ ಅಷ್ಟು ಧೈರ್ಯ ಬಂದಿದ್ಹೇಗೆ? ಮೋದಿ ಬಳಿ ಹೇಳಿದ್ದೇನು?

ಸೌದಿ ಅರೇಬಿಯಾದಲ್ಲಿ ತುರ್ತು ಲ್ಯಾಂಡಿಂಗ್:

ಈ ಘರ್ಷಣೆಯ ವೇಳೆ ವಿಮಾನವು ದಿಢೀರನೇ ಸಾವಿರಾರು ಅಡಿ ಕೆಳಕ್ಕೆ ಜಾರಿದಾಗ ಪ್ರಯಾಣಿಕರು ಸೀಟುಗಳಿಂದ ಎಗರಿಬಿದ್ದರು ಮತ್ತು ಆತಂಕದಿಂದ ಚೀರಾಡಿದರು. ದಾಳಿಕೋರನನ್ನು ಬಂಧಿಸಿದ ಬಳಿಕ, ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಸೌದಿ ಅರೇಬಿಯಾದ ತಬುಕ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸಿದರು. ರಕ್ತಸಿಕ್ತ ಉಡುಪುಗಳಲ್ಲಿದ್ದ ಪ್ರಯಾಣಿಕರು ತಬುಕ್‌ನಲ್ಲಿ ಇಳಿದು, ನಂತರ ಪರ್ಯಾಯ ಫ್ಲೈದುಬೈ ವಿಮಾನದ ಮೂಲಕ ಬುಧವಾರ ರಾತ್ರಿ ಟೆಲ್ ಅವೀವ್ ತಲುಪಿದರು.

ಇಸ್ರೇಲ್ ಪ್ರಧಾನಿ ನೆತನ್ಯಾಹು ಶ್ಲಾಘನೆ:

ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ಶ್ಲಾಘಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, “ತೀವ್ರವಾಗಿ ಗಾಯಗೊಂಡಿದ್ದರೂ ಕ್ಯಾಪ್ಟನ್ ಸ್ಮಿತ್ ಧೈರ್ಯದಿಂದ ಹೋರಾಡಿ ಕಾಕ್‌ಪಿಟ್ ಬಾಗಿಲು ತೆರೆದರು. ಇದರಿಂದಾಗಿ ಪ್ರಯಾಣಿಕರು ದಾಳಿಕೋರನನ್ನು ಮಟ್ಟಹಾಕಲು ಸಾಧ್ಯವಾಯಿತು ಮತ್ತು ಭೀಕರ ದುರಂತ ತಪ್ಪಿತು” ಎಂದು ಅಭಿನಂದಿಸಿದ್ದಾರೆ. ಪ್ರಸ್ತುತ ತಬುಕ್ ಆಸ್ಪತ್ರೆಯಿಂದ ಯುಎಇಗೆ ಏರ್‌ಲಿಫ್ಟ್ ಆಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More