ಜಪಾನ್ ತಲುಪಿದ ಪ್ರಧಾನಿ ಮೋದಿ: ಎರಡು ದಿನಗಳ ಕ್ವಾಡ್ ಸಮಾವೇಶದಲ್ಲಿ ಭಾಗಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 23, 2022 | 7:23 AM

ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಅಭಿವೃದ್ಧಿ ಸಂಬಂಧ ಹಲವು ಮಹತ್ವದ ಮಾತುಕತೆಗಳು ಈ ಸಂದರ್ಭದಲ್ಲಿ ನಡೆಯಲಿವೆ.

ಜಪಾನ್ ತಲುಪಿದ ಪ್ರಧಾನಿ ಮೋದಿ: ಎರಡು ದಿನಗಳ ಕ್ವಾಡ್ ಸಮಾವೇಶದಲ್ಲಿ ಭಾಗಿ
ಜಪಾನ್ ರಾಜಧಾನಿ ಟೋಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ
Follow us on

ಟೊಕಿಯೊ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಎರಡು ದಿನಗಳ ಭೇಟಿಗಾಗಿ ಜಪಾನ್​ ರಾಜಧಾನಿ ಟೋಕಿಯೊ ತಲುಪಿದರು. ಕ್ವಾಡ್ (Quad – Quadrilateral Security Dialogue) ಸಮಾವೇಶದಲ್ಲಿ ಪಾಲ್ಗೊಳ್ಳುವ ಪ್ರಧಾನಿ ವಿವಿಧ ದೇಶಗಳ ಪ್ರಧಾನಿ, ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಅಭಿವೃದ್ಧಿ ಸಂಬಂಧ ಹಲವು ಮಹತ್ವದ ಮಾತುಕತೆಗಳು ಈ ಸಂದರ್ಭದಲ್ಲಿ ನಡೆಯಲಿವೆ. ‘ಟೋಕಿಯೊದಲ್ಲಿ ಲ್ಯಾಂಡ್ ಆದೆ. ಕ್ವಾಡ್ ಸಮಾವೇಶವೂ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೇನೆ. ಕ್ವಾಡ್​ ದೇಶಗಳ ನಾಯಕರನ್ನು ಭೇಟಿಯಾಗುವುದರೊಂದಿಗೆ ಜಪಾನ್ ಪ್ರಧಾನಿ, ಉದ್ಯಮಿಗಳು ಮತ್ತು ಜಪಾನ್​ನಲ್ಲಿ ನೆಲೆಸಿರುವ ಭಾರತೀಯರೊಂದಿಗೂ ಮಾತನಾಡುತ್ತೇನೆ’ ಎಂದು ಮೋದಿ (PM Narendra Modi) ಜಪಾನೀಸ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದಾರೆ.

‘ಟೊಕಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಮೋದಿ ಅವರು ಪ್ರಧಾನಿಯಾದ 8 ವರ್ಷಗಳಲ್ಲಿ ಇದು 5ನೇ ಭೇಟಿ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಅರಿಂಧಮ್ ಬಾಗ್​ಚಿ ಟ್ವೀಟ್ ಮಾಡಿದ್ದಾರೆ. ಟೊಕಿಯೊದಲ್ಲಿ ಮೇ 24ರಂದು ನಡೆಯಲಿರುವ ಕ್ವಾಡ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಎಲೆಕ್ಟ್ ಆಂಥೋಣಿ ಅಲ್ಬಾನೀಸ್ ಪಾಲ್ಗೊಳ್ಳಲಿದ್ದಾರೆ.

‘ಕ್ವಾಡ್​ ನಾಯಕರೊಂದಿಗೆ ಎರಡನೇ ಬಾರಿಗೆ ಮುಖತಃ ಮಾತುಕತೆ ನಡೆಯುತ್ತಿದೆ. ಕ್ವಾಡ್​ ಉಪಕ್ರಮಗಳ ಪ್ರಗತಿ ಬಗ್ಗೆ ವಿವಿಧ ದೇಶಗಳು ಸಾಧಿಸಿರುವ ಪ್ರಗತಿ ಕುರಿತು ಈ ವೇಳೆ ಪರಿಶೀಲನೆ ನಡೆಯಲಿದೆ’ ಎಂದು ಮೋದಿ ಅವರು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದರು. ‘ಇಂಡೋ-ಪೆಸಿಫಿಕ್ ವಲಯದ ಬೆಳವಣಿಗೆಗಳ ಜೊತೆಗೆ ಪರಸ್ಪರ ಆಸಕ್ತಿಯಿರುವ ಜಾಗತಿಕ ವಿದ್ಯಮಾನಗಳ ಬಗ್ಗೆಯೂ ವಿವಿಧ ದೇಶಗಳ ನಾಯಕರು ಈ ಸಂದರ್ಭದಲ್ಲಿ ವಿಚಾರ ವಿನಿಮಯ ನಡೆಸಲಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಪ್ರಧಾನಿಯ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಕ್ವಾಡ್ ಮೈತ್ರಿ ಒಪ್ಪಂದದಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಸದಸ್ಯ ರಾಷ್ಟ್ರಗಳಾಗಿವೆ. ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಆಮಂತ್ರಣದ ಮೇಲೆ ಮೋದಿ ಅವರು ಜಪಾನ್ ರಾಜಧಾನಿ ಟೋಕಿಯೊಗೆ ಭೇಟಿ ನೀಡಿದ್ದಾರೆ. ಕ್ವಾಡ್ ಸಮಾವೇಶದಲಲ್ಲಿ ಎಲ್ಲ ಸದಸ್ಯ ದೇಶಗಳ ನಾಯಕರೊಂದಿಗೆ ಸಭೆಯಲ್ಲಿ ಮಾತುಕತೆ ನಡೆಸಲಿದ್ದಾರೆ. ಇದರ ಜೊತೆಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಕಿಶಿದಾ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಲ್​ಬನೀಸ್ ಜೊತೆಗೆ ಪ್ರತ್ಯೇಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತದಲ್ಲಿ ಕಳೆದ ಮಾರ್ಚ್​ನಲ್ಲಿ ನಡೆದಿದ್ದ ಭಾರತ-ಜಪಾನ್ ವಾರ್ಷಿಕ ಸಮಾವೇಶಕ್ಕಾಗಿ ಪ್ರಧಾನಿ ಮೋದಿ ಜಪಾನ್​ನ ಪ್ರಧಾನಿ ಕಿಶಿದಾ ಅವರನ್ನು ಆಮಂತ್ರಿಸಿದ್ದರು. ‘ಜಪಾನ್ ಭೇಟಿಯ ವೇಳೆ ನಾನು ಮತ್ತು ಮಾತುಕತೆ ಮತ್ತು ಸಂಬಂಧಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಉತ್ಸುಕನಾಗಿದ್ದೇನೆ. ಭಾರತ-ಜಪಾನ್​ನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಸಹಭಾಗಿತ್ವದ ಬಗ್ಗೆ ಮಹತ್ವದ ಬೆಳವಣಿಗೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಪ್ರಧಾನಿ ಮೋದಿ ಅವರು ತಮ್ಮ ಭೇಟಿಯ ಮುನ್ನ ತಿಳಿಸಿದ್ದರು.

ಭಾರತ ಮತ್ತು ಜಪಾನ್​ ದೇಶಗಳ ನಡುವಣ ಸಂಬಂಧ ಸಾಕಷ್ಟು ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದ್ದ ಮೋದಿ, ಆಸ್ಟ್ರೇಲಿಯಾ ದೇಶದೊಂದಿಗೂ ಭಾರತ ಮುಂದಿನ ದಿನಗಳಲ್ಲಿ ಇನ್ನಷ್ಟು ದ್ವಿಪಕ್ಷೀಯ ಸಹಕಾರ ಒಪ್ಪಂದ ಮಾಡಿಕೊಳ್ಳಲು ಉತ್ಸುಕವಾಗಿದೆ. ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೇಸ್ ಅವರೊಂದಿಗೆ ಮಾತುಕತೆಗೆ ಮಾತುಕತೆ ನಡೆಸುವ ಮೂಲಕ ಈ ಉದ್ದೇಶ ಸಾಧನೆಗೆ ಯತ್ನಿಸಲಾಗುವುದು ಎಂದು ಮೋದಿ ಹೇಳಿದ್ದರು. ಜಪಾನ್​ನಲ್ಲಿ ಸುಮಾರು 40,000 ಭಾರತೀಯರು ವಾಸಿಸುತ್ತಿದ್ದಾರೆ. ಭಾರತದೊಂದಿಗಿನ ಜಪಾನ್​ ಸಂಬಂಧದಲ್ಲಿ ಈ ಅನಿವಾಸಿ ಭಾರತೀಯರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ.

Published On - 7:22 am, Mon, 23 May 22