ಸ್ನೇಹಿತ ಡೊನಾಲ್ಡ್​ ಟ್ರಂಪ್​ ಮೇಲೆ ಮಾರಣಾಂತಿಕ ದಾಳಿ, ಪ್ರಧಾನಿ ಮೋದಿ ಖಂಡನೆ

|

Updated on: Jul 14, 2024 | 8:53 AM

ತಮ್ಮ ಸ್ನೇಹಿತ ಡೊನಾಲ್ಡ್​ ಟ್ರಂಪ್​ ಮೇಲೆ ನಡೆದ ಗುಂಡಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಸ್ನೇಹಿತ ಡೊನಾಲ್ಡ್​ ಟ್ರಂಪ್​ ಮೇಲೆ ಮಾರಣಾಂತಿಕ ದಾಳಿ, ಪ್ರಧಾನಿ ಮೋದಿ ಖಂಡನೆ
ನರೇಂದ್ರ ಮೋದಿ
Image Credit source: ABP Live
Follow us on

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ್‍ಯಾಲಿ ಮೇಲೆ ನಡೆದ ಗುಂಡಿನ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ತನ್ನ ಸ್ನೇಹಿತನ ಮೇಲೆ ನಡೆದಿರುವ ಹಲ್ಲೆಯಿಂದ ಬೇಸರಗೊಂಡಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಬಯಸುತ್ತೇನೆ ಎಂದು ತಮ್ಮ ಎಕ್ಸ್​ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆಗ ಏಕಾಏಕಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಒಂದರ ಹಿಂದೆ ಒಂದರಂತೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ.

ಟ್ರಂಪ್ ಬಲ ಕಿವಿಗೆ ಗಾಯವಾಗಿದೆ, ರಹಸ್ಯ ಸೇವಾ ತಂಡ ಕೂಡಲೇ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ದರು. ಟ್ರಂಪ್ ಮೇಲೆ ಬುಲೆಟ್ ಹಾರಿದ ತಕ್ಷಣ, ಪೊಲೀಸರೂ ಕಾರ್ಯಪ್ರವೃತ್ತರಾಗಿ ಪ್ರತಿದಾಳಿ ಆರಂಭಿಸಿದರು. ದಾಳಿಯಲ್ಲಿ ಶಂಕಿತ ಶೂಟರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ.

ಅಮೆರಿಕ: ರ್‍ಯಾಲಿಯಲ್ಲಿ ಗುಂಡಿನ ದಾಳಿ, ಮಾಜಿ ಅಧ್ಯಕ್ಷ ಟ್ರಂಪ್ ಬಲ ಕಿವಿಗೆ ಗಾಯ

ಬಟ್ಲರ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ರಿಚರ್ಡ್ ಗೋಲ್ಡಿಂಗರ್ ಅವರು ಶೂಟರ್‌ಗಳಲ್ಲಿ ಒಬ್ಬರು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಪ್ರತಿಸ್ಪರ್ಧಿ ಟ್ರಂಪ್ ಮೇಲಿನ ಮಾರಣಾಂತಿಕ ದಾಳಿಯನ್ನು ಖಂಡಿಸಿದರು. ಜಾರ್ಜ್​ ಬುಷ್, ಬರಾಕ್ ಒಬಾಮಾ ಸೇರಿದಂತೆ ಇತರರು ದಾಳಿಯನ್ನು ಖಂಡಿಸಿದ್ದಾರೆ.

ನಮ್ಮ ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸೆಗೆ ಜಾಗವಿಲ್ಲ ಎಂದು ಒಬಾಮಾ ಹೇಳಿದ್ದಾರೆ. ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲ, ಟ್ರಂಪ್ ಗಂಭೀರವಾಗಿ ಗಾಯಗೊಂಡಿಲ್ಲ ಇದಕ್ಕಾಗಿ ನಾವು ನಿರಾಳರಾಗಬೇಕು ಎಂದಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 am, Sun, 14 July 24