ನ್ಯೂಯಾರ್ಕ್: ಭಾರತ ಮೂಲದ ಮೇಡನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಔಷಧಿ ಕಂಪನಿ ತಯಾರಿಸಿದ ಕೆಮ್ಮು ಮತ್ತು ಶೀತದ ಔಷಧಿ ಕುಡಿದು ಪಶ್ಚಿಮ ಆಫ್ರಿಕಾದ ಗಾಂಬಿಯಾದಲ್ಲಿ (Gambia) ಜನರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಜೊತೆಗೆ 66 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಡಬ್ಲೂಹೆಚ್ಒ (WHO) ಹೇಳಿದೆ ಎಂದು ಎ.ಎನ್.ಆಯ್ (ANI) ಟ್ವೀಟ್ ಮಾಡಿದೆ. ಈ ಕಂಪನಿ ವಿರುದ್ಧ ತನಿಖೆ ನಡೆಸಲಾಗುತ್ತಿದೆ ಎಂದು ಡಬ್ಲೂಹೆಚ್ಒ ಹೇಳಿದೆ.
WHO issued a medical product alert on 4 cough & cold syrups made by India's Maiden Pharmaceuticals, potentially linking it to acute kidney injuries & 66 deaths among children in Gambia, conducting further investigation with the company ®ulatory authorities: Reuters quoting WHO
— ANI (@ANI) October 5, 2022
ಈ ನಾಲ್ಕೂ ಔಷಧಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿದಾಗ ಅವುಗಳಲ್ಲಿ ಡೈತಿಲೆನ್ ಗ್ಲೈಕೊಲ್ (diethylene glycol) ಮತ್ತು ಎಥಿಲೆನ್ ಗ್ಲೈಕೊಲ್ (ethylene glycol) ಹಾನಿಕಾರಕಗಳು ಹೆಚ್ಚಿನ ಮಟ್ಟದಲ್ಲಿರುವ ಪತ್ತೆಯಾಗಿತ್ತು. ಈ ಔಷಧಗಳ ಸುರಕ್ಷೆ ಮತ್ತು ಗುಣಮಟ್ಟ ಖಾತ್ರೆಯ ಬಗ್ಗೆ ಔಷಧ ತಯಾರಿಕೆ ಕಂಪನಿಯು ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಭರವಸೆ ನೀಡಲು ಸಮ್ಮತಿಸಿಲ್ಲ. ಮನುಷ್ಯರ ದೇಹಗಳಿಗೆ ಈ ಎರಡೂ ರಾಸಾಯನಿಕಗಳು ವಿಷಕಾರಿಯಾಗಿದ್ದು, ಇವುಗಳನ್ನು ಸೇವಿಸಿದರೆ ಜೀವಹಾನಿಯ ಅಪಾಯ ಇರುತ್ತದೆ. ಈ ವಿಷದ ಪರಿಣಾಮದಿಂದ ಹೊಟ್ಟೆನೋವು, ವಾಂತಿ, ಬೇಧಿ, ಮೂತ್ರ ವಿಸರ್ಜನೆಗೆ ತೊಂದರೆ, ತಲೆನೋವು, ಮಾನಸಿಕ ಸ್ಥಿತಿ ಏರುಪೇರಾಗುವುದು ಮತ್ತು ಕಿಡ್ನಿ ವೈಫಲ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ನೆರವು ದೊರಕದಿದ್ದರೆ ಸಾವು ಸಂಭವಿಸುತ್ತದೆ.
ಭಾರತ ಸರ್ಕಾರದ ಗೃಹ ಇಲಾಖೆಯ ಮೂಲಗಳು ಸಹ ಸಾವನ್ನು ದೃಢಪಡಿಸಿವೆ. ‘ಈ ಕಂಪನಿಯು ಈ ನಾಲ್ಕೂ ಔಷಧಿಗಳನ್ನು ಗಾಂಬಿಯಾ ದೇಶಕ್ಕೆ ಮಾತ್ರವೇ ರಫ್ತು ಮಾಡಿದೆ. ಔಷಧಿಗಳನ್ನು ಆಮದು ಮಾಡಿಕೊಳ್ಳುವ ದೇಶಗಳು ಗುಣಮಟ್ಟ ಪರಿಶೀಲಿಸಿದ ನಂತರವೇ ಬಳಕೆಗೆ ಅವಕಾಶ ಕೊಡುವುದು ವಾಡಿಕೆ’ ಎಂದು ಗೃಹ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ಜಾಲತಾಣ ವರದಿ ಮಾಡಿದೆ.
ಎಲ್ಲ ದೇಶಗಳೂ ಈ ನಾಲ್ಕೂ ಔಷಧಗಳನ್ನು ಬಳಕೆಯಿಂದ ದೂರ ಇರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ. ಗಾಂಬಿಯಾದ ವೈದ್ಯಕೀಯ ಅಧಿಕಾರಿಗಳು ಕಳೆದ ಜುಲೈ ತಿಂಗಳಿನಲ್ಲಿಯೇ ಈ ಔಷಧಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಧ್ವನಿ ಎತ್ತಿದ್ದರು. ಆಗಸ್ಟ್ ತಿಂಗಳಲ್ಲಿಯೂ 28 ಮಕ್ಕಳು ಈ ಔಷಧಿ ಸೇವನೆಯಿಂದ ಮೃತಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಶೀಘ್ರ ಹಿಂಪಡೆಯದಿದ್ದರೆ ಅಪಾಯ ಮತ್ತಷ್ಟು ಹೆಚ್ಚಬಹುದಾದ ಸಾಧ್ಯತೆಯಿದೆ ಎಂದು ಗಾಂಬಿಯಾದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 pm, Wed, 5 October 22