ಕಳೆದುಹೋದ ಮಗಳ ಹುಡುಕಾಟ ನಡೆಸಿದ್ದ ಮಹಿಳೆಯೊಬ್ಬಳು ಮೆಕ್ಸಿಕೋ ನಲ್ಲಿ ಕೊಲೆಯಾಗಿದ್ದು 2021 ರಿಂದ ತಾಯಿಯೊಬ್ಬಳು ಹೀಗೆ ಕಳೆದುಹೋದ ಮಗುವಿನ ಹುಡುಕಾಟದಲ್ಲಿದ್ದಾಗ ಕೊಲೆಯಾಗುತ್ತಿರುವುದು ಇದು ನಾಲ್ಕನೇ ಪ್ರಕರಣವಾಗಿದೆ. ಎಸ್ಮೆರಾಲ್ಡ ಗಲ್ಲಾರ್ಡೋ ಹೆಸರಿನ ಮಹಿಳೆ ಕಾಣೆಯಾಗಿದ್ದ ತನ್ನ 22-ವರ್ಷದ ಮಗಳನ್ನು ಹುಡುಕಾಟದಲ್ಲಿ ತೊಡಗಿದ್ದಾಗ ಕೊಲೆಯಾಗಿದ್ದಾಳೆ ಎಂದು ‘ವಾಯ್ಸ್ ಆಫ್ ಡಿಸಪೀಯರ್ಡ್ ಇನ್ ಪ್ಯೂಬ್ಲಾ’ ಹೆಸರಿನ ಸ್ವಯಂ ಸೇವಾ ಸಂಸ್ಥೆ ಹೇಳಿದೆ. ಗಲ್ಲಾರ್ಡೊಳನ್ನು ಮೆಕ್ಸಿಕೋದ ಪೂರ್ವಭಾಗಕ್ಕಿರುವ ಪ್ಯೂಬ್ಲಾ ನಗರದಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಪ್ಯೂಬ್ಲಾದ ಸರ್ಕಾರಿ ವಕೀಲರು ಕೊಲೆ ನಡೆದಿರುವುದನ್ನು ಖಚಿತಪಡಿಸಿದ್ದು ಆದಷ್ಟು ಬೇಗ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಹೇಳಿದ್ದಾರೆ.
ಆದರೆ ಸಂಘದ ಸದಸ್ಯರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ‘ನಿಮ್ಮ ಬೂಟಾಟಿಕೆ ಮಾತುಗಳನ್ನು ಪಕ್ಕಕ್ಕಿಟ್ಟು ಸಂತ್ರಸ್ತರಿಗೆ ಭದ್ರತೆ ಒದಗಿಸುವ ಬಗ್ಗೆ ಯೋಚನೆ ಮಾಡಿ, ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಸುರಕ್ಷತೆ ಒದಗಿಸುವುದು ನಿಮ್ಮ ಕರ್ತವ್ಯವಾಗಿದೆ,’ ಎಂದು ಹೇಳಿದ್ದಾರೆ.
ಗಲ್ಲಾರ್ಡೊ ಮಗಳು ಬೆಟ್ಜೇಬ್ ಅಲ್ವರಾಡೋ ಗಲ್ಲಾರ್ಡೊ ಜನೆವರಿ 2021ರಲ್ಲಿ ವಿಲ್ಲಾ ಫ್ರಂಟಿರಾ ಹೆಸರಿನ ಊರಲ್ಲಿ ಕಡಿಮೆ ಆದಾಯದ ಮನೆಗಳಿರುವ ಪ್ರದೇಶವೊಂದರಿಂದ ನಾಪತ್ತೆಯಾಗಿದ್ದಳು.
ಅದೇ ವರ್ಷದ ಆಗಸ್ಟ್ನಲ್ಲಿ ಸರ್ಚ್ ಗುಂಪಿನ ಕಾರ್ಯಕರ್ತ ರೊಸಾರಿಯೋ ರಾಡ್ರಿಗೆಜ್ ಬರಾಜಾರ ಕೊಲೆ ಉತ್ತರ ಭಾಗದ ಸಿನಾಲೊವಾ ಎಂಬಲ್ಲಿ ನಡೆದಿತ್ತು. ಈ ಪ್ರದೇಶ ಮಾದಕ ವಸ್ತುಗಳ ದಂಧೆ ನಡೆಯುವ ಕೇಂದ್ರವಾಗಿದೆ ಎಂದು ಹೇಳಲಾಗಿದೆ. ಇವರ ಹತ್ಯೆಯ ಹಿಂದಿನ ಉದ್ದೇಶ ಏನಾಗಿತ್ತು ಅನ್ನೋದು ಅಸ್ಪಷ್ಟವಾಗಿದೆ. ಹಂತಕರನ್ನು ಶಿಕ್ಷೆಗೊಳಪಡಿಸಲು ನಾವು ಸಾಕ್ಷ್ಯವನ್ನು ಸಾರ್ವಜನಿಕವಾಗೇನೂ ಹುಡುಕುತ್ತಿಲ್ಲ ಅಂತ ಸರ್ಚ್ ಸಂಘದ ಸದಸ್ಯರು ಹೇಳಿದ್ದಾರೆ.
ಸರ್ಚ್ ಸಂಸ್ಥೆಗಳು ಸಾಮಾನ್ಯವಾಗಿ ಮೆಕ್ಸಿಕೋನಲ್ಲಿ ಕಾಣೆಯಾಗಿರುವ ಸುಮಾರು 100,000 ಜನ ತಾಯಂದಿರಿಂದ ರಚಿತಗೊಂಡಿರುವ ಗುಂಪುಗಳಾಗಿವೆ. ನಮಗೆ ದುಃಖಿಸಲು ಮತ್ತು ಯೋಗ್ಯವಾದ ರೀತಿಯಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಮಕ್ಕಳ ದೇಹ ಸಿಕ್ಕರೆ ಸಾಕು, ಅಂತ ಮಾತ್ರ ಅವರು ಹೇಳುತ್ತಾರೆ.
ನಾಪತ್ತೆಯಾಗಿರುವ ಮಕ್ಕಳ ತಾಯಂದಿರು ಪೊಲೀಸರು ಮತ್ತು ಮೆಕ್ಸಿಕೋದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡಿದ್ದು ಸ್ವಇಚ್ಛೆಯಿಂದ ಸರ್ಚ್ ಸಂಸ್ಥೆಗಳನ್ನು ಸೇರಿಕೊಳ್ಳುತ್ತಿದ್ದಾರೆ. ಸದರಿ ಗುಂಪುಗಳು ಯಾವುದಾದರೂ ಸುಳಿವು ಸಿಕ್ಕರೆ ಓಣಿಗಳಲ್ಲಿ ಹೊಲಗದ್ದೆಗಳಲ್ಲಿ ಕೊಳೆತು ನಾರುವ ಸ್ಥಿತಿಯಲ್ಲಿರುವ ದೇಹಗಳನ್ನು ಪತ್ತೆ ಮಾಡುತ್ತಾರೆ.
ಕೆಲವು ಸಲ ಪೊಲೀಸರು ಕೂಡ ಸರ್ಚ್ ಸಂಸ್ಥೆಯ ಸದಸ್ಯರೊಂದಿಗೆ ಹುಡುಕಾಟ ನಡೆಸುತ್ತಾರೆ. ಪೊಲೀಸರು ಕೇವಲ ದೇಹದ ಗುರುತು ಹಿಡಿಯಲು ನೆರವಾಗುತ್ತಾರೆ. ಕೊಲೆ ಹೇಗೆ ನಡೆಯಿತು, ಯಾಕೆ ನಡೆಯಿತು ಅಂಥ ಪತ್ತೆ ಮಾಡುವ ಉಸಾಬರಿಗೆ ಅವರು ಹೋಗುವುದಿಲ್ಲ.
ಸಾಮಾನ್ಯವಾಗಿ ತಮ್ಮ ಗಂಡ, ಮಕ್ಕಳು, ಸಹೋದರನ್ನು ಕಳೆದುಕೊಂಡು ಹುಡುಕಾಟದಲ್ಲಿ ತೊಡಗಿರುವ ಮಹಿಳೆಯರಿಗೆ ಜೀವ ಬೆದರಿಕೆಯ ಕರೆಗಳು ಬರುತ್ತವಂತೆ. ಕರೆಮಾಡುವವರು ಹೆಚ್ಚಿನ ಸಂದರ್ಭಗಳಲ್ಲಿ ಕೊಲೆಗಡುಕರೇ ಆಗಿರುತ್ತಾರೆ.
2021ರಲ್ಲಿ ಮೆಕ್ಸಿಕೋ ಉತ್ತರಭಾಗದ ರಾಜ್ಯವಾಗಿರುವ ಸೊನೊರಾದಲ್ಲಿ ಸರ್ಚರ್ ಅಗಿದ್ದ ಅರಾಂಜಾ ರಾಮೋಸ್ ದೇಹ ಕಸದ ಬುಟ್ಟಿಯೊಂದರಲ್ಲಿ ಸಿಕ್ಕಿತ್ತು. ಅದಕ್ಕೂ ಮುನ್ನ ಸ್ವಯಂ ಸೇವಕ ಜೇವಿಯರ್ ಬರಜಾಸ್ ಹೆಸರಿನ ವ್ಯಕ್ತಿಯನ್ನು ಗುವನ್ ಜೊಂಟೋ ಎಂಬಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು.
ಈ ಕೊಲೆಗಳು ನಡೆದ ಬಳಿಕ ಮಕ್ಕಳ ಹುಡುಕಾಟದಲ್ಲಿರುವ ಯಾವ ತಾಯಿಯನ್ನೂ ಕೊಲ್ಲಕೂಡದು ಎಂದು ಸ್ವಯಂ ಸೇವಕ ಸಂಘಗಳ ಒಕ್ಕೂಟ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಇಂಥ ತಾಯಂದಿರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಅಂತ ಹೇಳಿಕೆಯಲ್ಲಿ ತಿಳಿಸಲಾಗಿತ್ತು.
‘ಬೇರೆ ಬೇರೆ ಗುಂಪಿನ ಸದಸ್ಯರಾದ ನಾವೆಲ್ಲ ಒಂದೇ ಕುಟುಂಬಕ್ಕೆ ಸೇರಿದವರೆಂಬ ಭಾವನೆ ನಮ್ಮಲ್ಲಿ ಹುಟ್ಟಿದೆ. ಯಾಕೆಂದರೆ ನಾವು ಅನುಭವಿಸುತ್ತಿರುವ ನೋವು ನಮಗಷ್ಟೇ ಅರ್ಥವಾಗುತ್ತದೆ,’ ಎಂದು ಒಬ್ಬ ಸದಸ್ಯೆ ಹೇಳಿದ್ದಾಳೆ.
ಬಲಿಯಾದವರಲ್ಲಿ ಹೆಚ್ಚಿನವರು ಡ್ರಗ್ ಕಾರ್ಟೆಲ್ ಗಳಿಂದ ಹತ್ಯೆಗೈಯಲ್ಪಟ್ಟಿದ್ದಾರೆ ಮತ್ತು ಅವರ ದೇಹಗಳು ಕುಣಿಗಳಲ್ಲಿ ಅರೆಬರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಡ್ರಗ್ ಮತ್ತು ಅಪಪಹರಣ ನಡೆಸುವ ಗ್ಯಾಂಗ್ ಗಳು ಹತ್ಯೆಗಳನ್ನು ನಡೆಸಲು ಒಂದೇ ಜಾಗವನ್ನು ನಿಗದಿ ಮಾಡಿಕೊಂಡಿರುತ್ತಾರಂತೆ.