ಭಾರತೀಯರಿಗೆ ಬಾಂಗ್ಲಾದೇಶದ ವೀಸಾ ಸೇವೆ ಮತ್ತೆ ಆರಂಭ; ಪ್ರಧಾನಿ ತಾರಿಕ್ ರೆಹಮಾನ್ ನಿರ್ಧಾರ
ಬಾಂಗ್ಲಾದೇಶದ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ಕೂಡ ನೆರೆಯ ದೇಶದೊಂದಿಗೆ ತನ್ನ ಸಂಬಂಧವನ್ನು ಮತ್ತೆ ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದೆ. ಹೀಗಾಗಿಯೇ ಬಾಂಗ್ಲಾದೇಶದ ಪ್ರಧಾನಿಯ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಭಾರತದ ಪ್ರತಿನಿಧಿಯಾಗಿ ಕಳುಹಿಸಲಾಗಿತ್ತು. ಇದೀಗ ಬಾಂಗ್ಲಾದೇಶ ಭಾರತೀಯರಿಗೆ ವೀಸಾ ಸೇವೆಗಳನ್ನು ಮತ್ತೆ ಆರಂಭಿಸಿದೆ.

ಢಾಕಾ, ಫೆಬ್ರವರಿ 20: ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಂಡ ನಂತರ ಫೆಬ್ರವರಿ 17ರಂದು ಬಾಂಗ್ಲಾದೇಶದ ಹೊಸ ಪ್ರಧಾನಿಯಾಗಿ ತಾರಿಕ್ ರೆಹಮಾನ್ (Tarique Rahman) ಅಧಿಕಾರ ವಹಿಸಿಕೊಂಡಿದ್ದರು. ಅದಾದ ಮೂರೇ ದಿನದಲ್ಲಿ ನವದೆಹಲಿಯಲ್ಲಿರುವ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಭಾರತೀಯ ನಾಗರಿಕರಿಗೆ ವೀಸಾ ಸೇವೆಗಳನ್ನು ಮರು ಸ್ಥಾಪಿಸುವ ಮೂಲಕ ಭಾರತದೊಂದಿಗೆ ಸಂಬಂಧವನ್ನು ಸರಿಪಡಿಸಲು ಅವರು ಕ್ರಮ ಕೈಗೊಂಡಿದ್ದಾರೆ.
ಇಂದಿನಿಂದಲೇ ಈ ನಿರ್ಧಾರ ಜಾರಿಗೆ ಬರಲಿದೆ. ಮಹಮ್ಮದ್ ಯೂನಸ್ ಸರ್ಕಾರ 2025ರಿಂದ ಭಾರತಕ್ಕೆ ವೀಸಾ ಸೇವೆಯನ್ನು ರದ್ದುಗೊಳಿಸಿತ್ತು. ಇದೀಗ ಹೊಸ ಸರ್ಕಾರ ರಚನೆಯಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ಸುಧಾರಿಸುವ ಲಕ್ಷಣಗಳು ಕಾಣುತ್ತಿವೆ. ಇಂದು ದೆಹಲಿಯ ಬಾಂಗ್ಲಾ ಹೈಕಮಿಷನ್ ನಿರ್ಬಂಧಗಳಿಲ್ಲದೆ ಭಾರತೀಯರಿಗೆ ಪ್ರವಾಸಿ, ವೈದ್ಯಕೀಯ, ವ್ಯವಹಾರ, ಕೆಲಸ ಮತ್ತು ಇತರ ವೀಸಾ ವರ್ಗಗಳನ್ನು ನೀಡಿತು.
ಇದನ್ನೂ ಓದಿ: ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?
ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಉಸ್ತುವಾರಿ ಮಹಮ್ಮದ್ ಯೂನಸ್ ಅವರ ಅಡಿಯಲ್ಲಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ವಿರೋಧಿ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಹತ್ಯೆಯ ನಂತರ ಎರಡೂ ದೇಶದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಅವರ ಹತ್ಯೆಯ ನಂತರ ವ್ಯಾಪಕ ಪ್ರತಿಭಟನೆಗಳು ಮತ್ತು ಹಿಂದೂಗಳ ವಿರುದ್ಧ ಹಲವಾರು ಹಿಂಸಾಚಾರದ ಘಟನೆಗಳು ನಡೆದವು.
ಇದರ ನಡುವೆ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಅವರ ಮೊದಲ ಅಧಿಕೃತ ವಿದೇಶ ಪ್ರವಾಸದ ಬಗ್ಗೆ ರಾಜತಾಂತ್ರಿಕ ವಲಯಗಳಲ್ಲಿ ಊಹಾಪೋಹಗಳು ಕೇಳಿಬರುತ್ತಿವೆ. ಈ ವಾರದ ಆರಂಭದಲ್ಲಿ, ಭಾರತೀಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ರೆಹಮಾನ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ
ಭಾರತಕ್ಕೆ ಭೇಟಿ ನೀಡುವಂತೆ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯ ಪರವಾಗಿ ತಾರಿಕ್ ರೆಹಮಾನ್ ಅವರಿಗೆ ಆಹ್ವಾನವನ್ನು ನೀಡಿದ್ದರು. ಕಳೆದ ವರ್ಷ ಮಹಮ್ಮದ್ ಯೂನಸ್ ಅವರು ಹಿಂದಿನ ಸರ್ಕಾರ ಸಂಪ್ರದಾಯವನ್ನು ಮುರಿದು ಮೊದಲ ಅಧಿಕೃತ ಭೇಟಿಗೆ ಚೀನಾವನ್ನು ಆಯ್ಕೆ ಮಾಡಿಕೊಂಡಿದ್ದು ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಸಂಬಂಧ ನಾನಾ ಕಾರಣಗಳಿಂದ ಹದಗೆಟ್ಟಿತ್ತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
