AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?

ಬಾಂಗ್ಲಾದೇಶದಲ್ಲಿ ನಡೆದ ಚುನಾವಣೆಯಲ್ಲಿ ತಾರಿಕ್ ರೆಹಮಾನ್ ನೇತೃತ್ವದ ಬಿಎನ್​ಪಿ ಜಯಭೇರಿ ಬಾರಿಸಿದೆ. ಇದಾದ ಬಳಿಕ ಬಾಂಗ್ಲಾದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಬಾಂಗ್ಲಾದೇಶದ ಮುಂದಿನ ಪ್ರಧಾನಿ ತಾರಿಕ್ ರೆಹಮಾನ್ ಭಾರತ-ಬಾಂಗ್ಲಾದೇಶ ಸಂಬಂಧಗಳ ಕುರಿತು ಕೂಡ ಹೇಳಿಕೆ ನೀಡಿದ್ದಾರೆ. ಹಾಗೇ, ಬಾಂಗ್ಲಾದೇಶವನ್ನು ಬಿಟ್ಟು ಭಾರತಕ್ಕೆ ಪಲಾಯನಗೊಂಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಾಪಾಸ್ ಕರೆಸಿಕೊಳ್ಳುವ ಕುರಿತಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಬಾಂಗ್ಲಾದೇಶದ ಚುನಾವಣಾ ಗೆಲುವಿನ ಬಳಿಕ ಭಾರತದ ಬಗ್ಗೆ ತಾರಿಕ್ ರೆಹಮಾನ್ ಮೊದಲ ಹೇಳಿಕೆಯೇನು?
Tarique RahmanImage Credit source: x
ಸುಷ್ಮಾ ಚಕ್ರೆ
|

Updated on: Feb 14, 2026 | 6:56 PM

Share

ಢಾಕಾ, ಫೆಬ್ರವರಿ 14: ಈ ಬಾರಿಯ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಗೆಲುವಿನ ನಂತರ ತಮ್ಮ ಮೊದಲ ಪತ್ರಿಕಾಗೋಷ್ಠಿ ನಡೆಸಿರುವ ಬಿಎನ್​ಪಿ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದೇಶದ (Bangladesh) ವಿದೇಶಾಂಗ ನೀತಿಯ ಆದ್ಯತೆಗಳ ಕುರಿತು ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ನನಗೆ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ. ಅದರಲ್ಲಿ ರಾಜಿಯಾಗುವ ಮಾತೇ ಇಲ್ಲ. ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧಗಳ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾರಿಕ್ ರೆಹಮಾನ್, “ನಮಗೆ ಬಾಂಗ್ಲಾದೇಶ ಮತ್ತು ಬಾಂಗ್ಲಾದೇಶದ ಜನರೇ ಮೊದಲು. ಬಾಂಗ್ಲಾದೇಶದ ಜನರಿಗೆ ಯಾವುದು ಉತ್ತಮವೋ ಅದನ್ನೇ ನಮ್ಮ ವಿದೇಶಾಂಗ ನೀತಿಯನ್ನು ನಿರ್ಧರಿಸುತ್ತದೆ” ಎಂದು ತಾರಿಕ್ ಹೇಳಿದ್ದಾರೆ.

ಇಂದಿನ ಪತ್ರಿಕಾಗೋಷ್ಠಿಯಲ್ಲಿ ತಾರಿಕ್ ರೆಹಮಾನ್ ಅವರಿಗೆ “ಭಾರತ, ಪಾಕಿಸ್ತಾನ ಮತ್ತು ಚೀನಾದ ನಡುವಿನ ಸಂಬಂಧಗಳನ್ನು ಹೇಗೆ ಬ್ಯಾಲೆನ್ಸ್ ಮಾಡುತ್ತೀರಿ?” ಎಂದು ಕೇಳಿದಾಗ ಅವರು ಕೊಂಚ ವಿಚಲಿತರಾರು. ಈ ಪ್ರಶ್ನೆಗೆ ಈಗಾಗಲೇ ನನ್ನ ಹಿಂದಿನ ಹೇಳಿಕೆಗಳಲ್ಲಿ ಉತ್ತರಿಸಲಾಗಿದೆ ಎಂದು ಅವರು ಹೇಳಿ ಜಾರಿಕೊಂಡರು.

ಬಿಎನ್‌ಪಿ ಸರ್ಕಾರವು ಭಾರತ, ಚೀನಾ ಮತ್ತು ಪಾಕಿಸ್ತಾನದಂತಹ ಪ್ರಾದೇಶಿಕ ಶಕ್ತಿಗಳೊಂದಿಗೆ ಸಮತೋಲಿತ ಸಂಬಂಧವನ್ನು ಕಾಯ್ದುಕೊಳ್ಳುತ್ತದೆ. ಬಾಂಗ್ಲಾದೇಶ ಯಾವುದೇ ದೇಶವನ್ನು ತನ್ನ “ಯಜಮಾನ” ಎಂದು ಪರಿಗಣಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದ ಪ್ರಧಾನಿಯಾಗಲಿರುವ ಬಿಎನ್​​ಪಿಯ ತಾರಿಕ್ ರೆಹಮಾನ್ ಒಟ್ಟು ಆಸ್ತಿ ಎಷ್ಟು?

“ಬಾಂಗ್ಲಾದೇಶ ಪ್ರಸ್ತುತ ಆರ್ಥಿಕ ಒತ್ತಡಗಳು, ಕಾನೂನು ಮತ್ತು ಸುವ್ಯವಸ್ಥೆಯ ಆತಂಕವನ್ನು ಎದುರಿಸುತ್ತಿದೆ ಎಂದು ರೆಹಮಾನ್ ಒಪ್ಪಿಕೊಂಡಿದ್ದಾರೆ. ಉತ್ತಮ ಆಡಳಿತವನ್ನು ನೀಡುವುದು ನಮ್ಮ ಆದ್ಯತೆಯಾಗಿದೆ” ಎಂದು ಅವರು ಹೇಳಿದರು.

ಬಿಎನ್‌ಪಿ ನೇತೃತ್ವದ ಸರ್ಕಾರವು ಪ್ರಸ್ತುತ ಭಾರತದಲ್ಲಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಾಪಾಸ್ ಕರೆಸಿಕೊಳ್ಳಲು ಪ್ರಯತ್ನಿಸುತ್ತದೆಯೇ? ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು “ಇದು ಕಾನೂನು ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಬಿಎನ್‌ಪಿಗೆ ಭರ್ಜರಿ ಜಯ; ತಾರಿಕ್ ರೆಹಮಾನ್​ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ

ವಿದ್ಯಾರ್ಥಿ ದಂಗೆಯಲ್ಲಿ ಶೇಖ್ ಹಸೀನಾ ಅವರ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಬಿಎನ್‌ಪಿ 297 ಸ್ಥಾನಗಳಲ್ಲಿ 212 ಸ್ಥಾನಗಳನ್ನು ಗೆದ್ದುಕೊಂಡಿತು. ಹೀಗಾಗಿ, ತಾರಿಕ್ ರೆಹಮಾನ್ ಮುಂದಿನ ಪ್ರಧಾನಿಯಾಗುವುದು ಖಚಿತವಾಗಿದೆ.

ಡಿಸೆಂಬರ್ 2025ರಲ್ಲಿ ಅವರ ತಾಯಿ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ನಿಧನರಾದ ನಂತರ ಭಾರತವು ತಾರಿಕ್ ರೆಹಮಾನ್ ಅವರನ್ನು ಸಂಪರ್ಕಿಸಿತ್ತು. ಅವರಿಗೆ ಸಂತಾಪ ಸೂಚಿಸಲು ಮತ್ತು ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮೋದಿ ಸರ್ಕಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಢಾಕಾಗೆ ಕಳುಹಿಸಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ