ಪೋಲೆಂಡ್​​ನಲ್ಲಿರುವ ರಷ್ಯಾದ ರಾಯಭಾರಿ ಮುಖಕ್ಕೆ ಕೆಂಪು ಬಣ್ಣ ಎರಚಿದ ಯುದ್ಧ ವಿರೋಧಿ ಪ್ರತಿಭಟನಾಕಾರರು

ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಸೆರ್ಗೆ ಮೇಲಿನ ದಾಳಿ ಖಂಡಿಸಿದ್ದು "ನಾವು ಹೆದರುವುದಿಲ್ಲ. ಆದರೆ "ಯುರೋಪಿನ ಜನರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲು ಭಯಪಡಬೇಕು" ಎಂದು ಹೇಳಿದ್ದಾರೆ.

ಪೋಲೆಂಡ್​​ನಲ್ಲಿರುವ ರಷ್ಯಾದ ರಾಯಭಾರಿ ಮುಖಕ್ಕೆ ಕೆಂಪು ಬಣ್ಣ ಎರಚಿದ ಯುದ್ಧ ವಿರೋಧಿ ಪ್ರತಿಭಟನಾಕಾರರು
ಸೆರ್ಗೆ ಆಂಡ್ರೀವ್
Edited By:

Updated on: May 10, 2022 | 3:18 PM

ಎರಡನೇ ಮಹಾಯುದ್ಧದಲ್ಲಿ (World War II) ಮಡಿದ ರೆಡ್ ಆರ್ಮಿ ಸೈನಿಕರಿಗೆ ವಾರ್ಸಾ ಸ್ಮಶಾನದಲ್ಲಿ (Warsaw cemetery) ಗೌರವ ಸಲ್ಲಿಸಲು ತೆರಳುತ್ತಿದ್ದ ಪೋಲೆಂಡ್‌ನಲ್ಲಿರುವ ರಷ್ಯಾದ ರಾಯಭಾರಿ ಸೆರ್ಗೆ ಆಂಡ್ರೀವ್ (Sergey Andreev) ಅವರ ಮುಖಕ್ಕೆ ಉಕ್ರೇನ್ ಯುದ್ಧವನ್ನು ವಿರೋಧಿಸುವ ಪ್ರತಿಭಟನಾಕಾರರು ಸೋಮವಾರ ಕೆಂಪು ಬಣ್ಣವನ್ನು ಎರಚಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ಸೆರ್ಗೆ ಮೇಲಿನ ದಾಳಿ ಖಂಡಿಸಿದ್ದು “ನಾವು ಹೆದರುವುದಿಲ್ಲ. ಆದರೆ “ಯುರೋಪಿನ ಜನರು ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಲು ಭಯಪಡಬೇಕು” ಎಂದು ಹೇಳಿದ್ದಾರೆ.


ರಾಯಭಾರಿ ಸೆರ್ಗೆ ಆಂಡ್ರೀವ್ ಅವರು ವಿಜಯ ದಿನದಂದು ವಾರ್ಸಾದಲ್ಲಿನ ಸೋವಿಯತ್ ಮಿಲಿಟರಿ ಸ್ಮಶಾನಕ್ಕೆ ಪುಷ್ಪ ನಮನ ಸಲ್ಲಿಸಲು ಆಗಮಿಸಿದ್ದರು. ಸ್ಮಶಾನಕ್ಕೆ ಅವರು ಆಗಮಿಸಿದಾಗ, ಆಂಡ್ರೀವ್ ಅವರನ್ನು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ವಿರುದ್ಧ ಪ್ರತಿಭಟಿಸುವ ಹಲವಾರು ಯುದ್ಧ-ವಿರೋಧಿ ಕಾರ್ಯಕರ್ತರು ಭೇಟಿಯಾಗಿದ್ದರು.

ಪ್ರತಿಭಟನಾಕಾರರು ಮೊದಲು ಸ್ಮಶಾನದಲ್ಲಿ ಇಡಲು ಉದ್ದೇಶಿಸಿದ್ದ ಹೂವಿನ ಮಾಲೆಯನ್ನು ಕಸಿದುಕೊಂಡು ತುಳಿದರು. ನಂತರ ಅವರ ಪಕ್ಕದಲ್ಲಿ ನಿಂತಿದ್ದ ಪ್ರತಿಭಟನಾಕಾರ ಕೆಂಪು ಬಣ್ಣವನ್ನು ಎಸೆದಾಗ ಅದು ಅವರ ಮುಖಕ್ಕೆ ಸ್ವಲ್ಪವೇ ತಾಗಿತ್ತು. ಅಷ್ಟೊತ್ತರಲ್ಲಿ ಮತ್ತೊಬ್ಬ ಪ್ರತಿಭಟನಾಕಾರ ಕೆಂಪು ಬಣ್ಣ ಎರಚಿದ್ದಾರೆ.

ಪ್ರತಿಭಟನಾಕಾರರು ಉಕ್ರೇನಿಯನ್ ಧ್ವಜಗಳನ್ನು ಹಿಡಿದುಕೊಂಡು “ಫ್ಯಾಸಿಸ್ಟ್‌ಗಳು” ಮತ್ತು “ಕೊಲೆಗಾರರು” ಎಂದು ಕೂಗಿದ್ದಾರೆ. ರಷ್ಯಾದ ಯುದ್ಧದಲ್ಲಿ ಉಕ್ರೇನಿಯನ್ ಸಂತ್ರಸ್ತರ ಸಂಕೇತವಾಗಿ ಕೆಲವರು ಕೆಂಪು ಲೇಪಿತ ಬಿಳಿ ಹಾಳೆಗಳನ್ನು ಧರಿಸಿದ್ದರು. ಕೆಲವರು ಕೆಂಪು ಬಣ್ಣಗಳನ್ನು ಬಳಿದಿದ್ದರು.

 

Published On - 2:53 pm, Tue, 10 May 22