ಕೃಷ್ಣ ಜನ್ಮಾಷ್ಟಮಿ ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿಶ್ವದ ನಾನಭಾಗಗಳಲ್ಲಿ ಆಚರಿಸಲಾಗುತ್ತಿದೆ. ಭಾರತೀಯ-ಮೂಲದ ಬ್ರಿಟಿಷ್ ರಾಜಕಾರಣಿ ಮತ್ತು ಪ್ರಸ್ತುತ ಆ ದೇಶದ ಪ್ರಧಾನ ಮಂತ್ರಿ ಸ್ಥಾನಕ್ಕೆ ರೇಸ್ ನಲ್ಲಿರುವ ರಿಷಿ ಸುನಾಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ಭಕ್ತಿವೇದಾಂತ ಮೇನರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಇನ್ಸ್ಟಾಗ್ರಾಮ್ನಲ್ಲಿ ಸುನಾಕ್, ‘ಜನ್ಮಾಷ್ಟಮಿ ಅಂಗವಾಗಿ ಇಂದು ನನ್ನ ಪತ್ನಿ ಅಕ್ಷತಾ ಜೊತೆ ಭಕ್ತಿವೇದಾಂತ ಮೇನರ್ ದೇವಸ್ಥಾನಕ್ಕೆ ಹೋಗಿದ್ದೆ, ಹಿಂದೂಗಳ ಪ್ರಮುಖ ಹಬ್ಬವಾಗಿರುವ ಶ್ರೀಕೃಷ್ಣನ ಜನ್ಮದಿನವನ್ನು ನಾವು ಆಚರಿಸಿದೆವು,’ ಎಂದು ಹೇಳಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇಂಗ್ಲೆಂಡ್ ನಲ್ಲೇ ಹುಟ್ಟಿ ಬೆಳೆದರೂ ಸುನಾಕ್ ಅಪ್ಪಟ ಹಿಂದೂ ಧರ್ಮದ ಅನುಯಾಯಿ ಅಗಿದ್ದಾರೆ.
ಭಾರತೀಯ ಮೂಲದ ದಂಪತಿಗಳಿಗೆ ಸೌಥಾಂಪ್ಟನಲ್ಲಿ ಜನಿಸಿದ ಸುನಾಕ್, ಸ್ಟ್ಯಾನ್ಫೋರ್ಡ್ ಯೂನಿವರ್ಸಿಟಿಯಲ್ಲಿ ಎಮ್ ಬಿ ಎ ವ್ಯಾಸಂಗ ಮಾಡುವಾಗ ತಮ್ಮ ಬಾಳ ಸಂಗಾತಿ ಅಕ್ಷತಾರನ್ನು ಭೇಟಿಯಾದರು. 2006 ಬೆಂಗಳೂರಲ್ಲಿ ಎರಡು ದಿನಗಳ ಕಾಲ ನಡೆದ ಮದುವೆ ಸಮಾರಂಭದಲ್ಲಿ ಅವರು ಸತಿಪತಿಗಳಾದರು.
ಏತನ್ಮಧ್ಯೆ, ಬೋರಿಸ್ ಜಾನ್ಸನ್ ಸಂಪುಟದಲ್ಲಿ ಸಚಿರಾಗಿದ್ದ ಸುನಾಕ್ ರಾಜೀನಾಮೆ ಸಲ್ಲಿಸುವ ಮೂಲಕ ಜಾನ್ಸನ್ ಪದಚ್ಯುತಿಗೆ ನಾಂದಿ ಹಾಡಿ ಪ್ರಧಾನ ಮಂತ್ರಿ ಸ್ಥಾನಕ್ಕೆ ತಾನೂ ಅಭ್ಯರ್ಥಿ ಎಂದು ಘೋಷಿಸಿಕೊಂಡರು.
ಆದರೆ ಹಲವಾರು ಸಮೀಕ್ಷೆಗಳ ಪ್ರಕಾರ ಅವರು ತಮ್ಮ ಪ್ರತಿಸ್ಪರ್ಧಿ ಯುಕೆಯ ವಿದೇಶಾಂಗ ವ್ಯವಾಹಾರಗಳ ಸಚಿವೆ ಲಿಜ್ ಟ್ರಸ್ ಅವರಿಗಿಂತ ಬಹಳ ಹಿಂದಿದ್ದಾರೆ. ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಅಯ್ಕೆಯಾದವರು ಯುಕೆಯ ಪ್ರಧಾನಿಯಾಗಲಿದ್ದಾರೆ. ತಮ್ಮ ಪಕ್ಷದಲ್ಲಿ ಜನಾಂಗೀಯ ತಾರತಮ್ಯಕ್ಕೆ ಅವಕಾಶವಿಲ್ಲ ಅಂತ ಅವರು ಇತ್ತೀಚಿಗೆ ಹೇಳಿದ್ದರು.
ಬುಧವಾರ ಬಿಡುಗಡೆಯಾದ ಕನ್ಸರ್ವೇಟಿವ್ ಪಕ್ಷದ ಸಮೀಕ್ಷೆಯ ಪ್ರಕಾರವೂ ಸುನಾಕ್ ಅವರು ಲಿಜ್ ಗಿಂತ ಹಿಂದಿದ್ದಾರೆ.
‘ಸುನಾಕ್ ಅವರಿಗೆ ಶೇಕಡ 26 ರಷ್ಟು ಸದಸ್ಯರ ಬೆಂಬಲವಿದ್ದರೆ ಲಿಜ್ ಅವರಿಗೆ ಶೇಕಡಾ 58 ಸದಸ್ಯರು ಬೆಂಬಲ ಸೂಚಿಸಿದ್ದಾರೆ, ಮಿಕ್ಕ 12 ಪರ್ಸೆಂಟ್ ಜನ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಈಗ, ಆ ಅಂಕಿಅಂಶಗಳು ಶೇಕಡಾ 28, ಶೇಕಡಾ 60 ಮತ್ತು ಶೇಕಡಾ 9 ಆಗಿವೆ. ಈ ಬಾರಿ ‘ಯಾರಿಗೂ ವೋಟ್ ಮಾಡಲ್ಲ’, ‘ವೋಟಿಂಗ್ ನಿಂದ ಹಿಂತೆಗೆಯುವುದು’ ಎಂಬ ಹೊಸ ಕಾಲಮ್ ಗಳನ್ನು ಜಾರಿ ಮಾಡಿದ್ದೇವೆ,’ ಎಂದು 961 ಪಕ್ಷದ ಸದಸ್ಯರ ಕನ್ಸರ್ವೇಟಿವ್ ಪಕ್ಷದ ಹೋಮ್ ಸಮೀಕ್ಷೆ ಹೇಳಿದೆ.