ಅಣ್ವಸ್ತ್ರ ಬಳಕೆಯಾದರೆ ಇಡೀ ಜಗತ್ತಿಗೆ ಬರಗಾಲ ಆವರಿಸುತ್ತದೆ
ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿ ನಿರ್ಣಾಯಕ ಹಂತಕ್ಕೆ ಬಂದು, ರಷ್ಯಾದ ಮೇಲುಗೈ ಖಚಿತವಾಗುತ್ತಿದೆ. ಉಕ್ರೇನ್ ಪರ ಅಮೆರಿಕ ಸೇರಿದಂತೆ ಬಹುತೇಕ ನ್ಯಾಟೊ ಮತ್ತು ಐರೋಪ್ಯ ಒಕ್ಕೂಟದ ದೇಶಗಳು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿವೆ. ಬ್ರಿಟನ್, ಸ್ಪೇನ್ ಮತ್ತು ಹಾಲೆಂಡ್ ದೇಶಗಳ ಪ್ರಧಾನಿಗಳು ಉಕ್ರೇನ್ ರಾಜಧಾನಿ ಕೀವ್ಗೆ ಭೇಟಿ ನೀಡಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ನೇರ ಮಾತುಕತೆ ನಡೆಸಿದ್ದರು. ರಷ್ಯಾದೊಂದಿಗೆ ದೊಡ್ಡಮಟ್ಟದ ಯುದ್ಧಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ಯುದ್ಧದಿಂದ ಅಂತರ ಕಾಯ್ದುಕೊಂಡಿದ್ದ ಅಮೆರಿಕ ಸಹ ಇದೀಗ ಉಕ್ರೇನ್ಗೆ ಯುದ್ಧವಿಮಾನ, ಡ್ರೋಣ್ ಸೇರಿದಂತೆ ಹಲವು ಪ್ರಮುಖ ಯುದ್ಧೋಪಕರಣಗಳನ್ನು ರವಾನಿಸಲು ಸಮ್ಮತಿಸಿದೆ. ‘ಉಕ್ರೇನ್ ಮೇಲಿನ ಯುದ್ಧ ಗೆಲ್ಲಲು ರಷ್ಯಾಕ್ಕೆ ಸಾಧ್ಯವಿಲ್ಲ, ನಾವು ಬಿಡುವುದಿಲ್ಲ’ ಎನ್ನುವುದು ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳ ಧೋರಣೆ. ‘ನಮ್ಮ ತಂಟೆಗೆ ಬಂದರೆ ಯಾರೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಇದು ನಮ್ಮ ಯುದ್ಧ, ನೀವು ದೂರವಿರಿ’ ಎಂಬ ನಿಲುವಿಗೆ ರಷ್ಯಾ ಬಂದಿದೆ. ಉಕ್ರೇನ್ಗೆ ನೆರವು ಹೆಚ್ಚುತ್ತಿರುವ ಬೆನ್ನಿಗೇ ರಷ್ಯಾ ನೂತನ ತಂತ್ರಜ್ಞಾನದ ದೂರಗಾಮಿ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಲ್ಲಿ ಯಶಸ್ವಿಯಾಗಿದೆ. ‘ಹಲವು ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಈ ಕ್ಷಿಪಣಿಯು ಎಲ್ಲ ಬಗೆಯ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಭೇದಿಸಿ ಇದು ಗುರಿ ತಲುಪಬಲ್ಲದು’ ಎಂದು ರಷ್ಯಾ ಹೇಳಿಕೊಂಡಿದೆ.
ಇಷ್ಟು ದಿನ ಕೇವಲ ‘ಒಣ’ ಬೆದರಿಕೆಯ ಮಟ್ಟದಲ್ಲಿದ್ದ ಅಣುದಾಳಿ ಸಾಧ್ಯತೆಯು ನಿಜವಾಗುವ ಆತಂಕ ಎದುರಾಗಿದೆ. ಇಡೀ ಜಗತ್ತು ಬೇಡ ಎನ್ನುತ್ತಿರುವ, ಬೇಡದ ದುಸ್ವಪ್ನದಂತೆ ಕಾಡುತ್ತಿರುವ ಅಣ್ವಸ್ತ್ರ ಬಳಕೆ ಹೇಗೆ ನಡೆಯಬಹುದು? ಅದರ ಪರಿಣಾಮಗಳು ಏನಾಗಬಹುದು ಎಂಬ 10 ಪ್ರಮುಖ ಅಂಶಗಳು ಇಲ್ಲಿವೆ.
- ಉಕ್ರೇನ್ನ ಬಹುದಿನಗಳ ಬೇಡಿಕೆಗೆ ಮಣಿಯುವ ನ್ಯಾಟೊ ಮತ್ತು ಐರೋಪ್ಯ ಒಕ್ಕೂಟ ರಷ್ಯಾ ವಿರುದ್ಧ ಉಕ್ರೇನ್ನಲ್ಲಿ ಹಾರಾಟ ನಿರ್ಬಂಧ ‘ನೋ ಫ್ಲೈ ಜೋನ್’ ಘೋಷಿಸಬಹುದು. ಆಗಸದಲ್ಲಿ ರಷ್ಯಾದ ಯುದ್ಧವಿಮಾನಗಳು ಹಾರದಿದ್ದರೆ ಉಕ್ರೇನ್ನ ನೆಲದಲ್ಲಿರುವ ರಷ್ಯಾ ಸೇನೆಗೆ ಉಕ್ರೇನ್ ಸೇನೆ ಉಗ್ರ ಪ್ರತಿರೋಧ ತೋರಿ, ರಷ್ಯಾ ಹಿಮ್ಮೆಟ್ಟಬೇಕಾಗುತ್ತದೆ. ಸೋಲು ಖಚಿತವಾಗುತ್ತಿದ್ದಂತೆಯೇ ರಷ್ಯಾ ಅಣ್ವಸ್ತ್ರ ದಾಳಿಗೆ ಮುಂದಾಗಬಹುದು.
- ‘ನೋ ಫ್ಲೈ ಜೋನ್’ ಜಾರಿಗಾಗಿ ನ್ಯಾಟೊದ ಯುದ್ಧ ವಿಮಾನಗಳು ಉಕ್ರೇನ್ ವಾಯುಗಡಿಯಲ್ಲಿರುವ ರಷ್ಯಾದ ಯುದ್ಧ ವಿಮಾನಗಳೊಂದಿಗೆ ಕದನಕ್ಕಿಳಿಯಬಹುದು. ಈ ವೇಳೆ ನ್ಯಾಟೊದ ಯಾವುದಾದರೂ ಯುದ್ಧ ವಿಮಾನ ರಷ್ಯಾದ ವಾಯುಗಡಿ ಪ್ರವೇಶಿಸಿ ಬಾಂಬ್ ಹಾಕಿದರೆ ರಷ್ಯಾ ಸಹ ಉಕ್ರೇನ್ ಗಡಿಯಲ್ಲಿರುವ ಪೊಲೆಂಡ್ ಅಥವಾ ಇತರ ಯಾವುದೇ ನ್ಯಾಟೊ ಸದಸ್ಯ ರಾಷ್ಟ್ರಗಳ ಮೇಲೆ ದಾಳಿ ಆರಂಭಿಸುತ್ತದೆ. ಕ್ರಮೇಣ ಇದು ಅಣ್ವಸ್ತ್ರ ದಾಳಿಗೆ ಕಾರಣವಾಗುವ ಹಲವು ಬೆಳವಣಿಗೆಗಳನ್ನು ಹುಟ್ಟುಹಾಕಬಹುದು.
- ನ್ಯಾಟೊ ಸದಸ್ಯ ದೇಶಗಳ ಮೇಲೆ ರಷ್ಯಾ ಅಣ್ವಸ್ತ್ರ ದಾಳಿ ಆರಂಭಿಸಿದರೆ ಪ್ರತೀಕಾರವಾಗಿ ಇಂಗ್ಲೆಂಡ್, ಫ್ರಾನ್ಸ್ನಂಥ ಅಣ್ವಸ್ತ್ರ ಸಜ್ಜಿತ ದೇಶಗಳು ಆರಂಭದಲ್ಲಿ ರಷ್ಯಾ ಮೇಲೆ ಮುಗಿಬೀಳುತ್ತವೆ. ರಷ್ಯಾ ಸಹ ಈ ದೇಶಗಳ ಮೇಲೆ ಅಣ್ವಸ್ತ್ರ ಪ್ರಯೋಗಿಸಬಹುದು.
- ಅಮೆರಿಕ ಪರೋಕ್ಷ ಕುಮ್ಮಕ್ಕಿನಿಂತಲೇ ಎಲ್ಲವೂ ನಡೆಯುತ್ತಿರುವುದನ್ನು ಮನಗಂಡಿರುವ ರಷ್ಯಾ ತನ್ನ ದೂರಗಾಮಿ ಕ್ಷಿಪಣಿಗಳನ್ನು ಅಮೆರಿಕ ವಿರುದ್ಧ ಪ್ರಯೋಗಿಸಬಹುದು. ಇಂಥ ಬೆಳವಣಿಗೆಗೆ ಅಮೆರಿಕ ಸಹ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರಷ್ಯಾ ವಿರುದ್ಧ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳನ್ನು ಹಾರಿ ಬಿಡುತ್ತದೆ. ಈ ಪ್ರಕ್ರಿಯೆ ಹಲವು ತಿಂಗಳವರೆಗೆ ಮುಂದುವರಿಯಬಹುದು.
- ಉತ್ತರ ಅಟ್ಲಾಂಟಿಕ್ನ ಸಾಗರದಲ್ಲಿ ಈಗಾಗಲೇ ರಷ್ಯಾದ ಅಣ್ವಸ್ತ್ರ ಸಜ್ಜಿತ ಸಬ್ಮರೀನ್ಗಳು ನಿಶ್ಯಬ್ದವಾಗಿ ಅಡಗಿವೆ. ಸಾವಿರಾರು ಕಿಲೋಮೀಟರ್ ದೂರದ ನಗರಗಳ ಮೇಲೆ ಅಣು ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯಾವಾಗ ಬೇಕಾದರೂ ಉಕ್ರೇನ್ ವಿರುದ್ಧದ ಯುದ್ಧ ಕೈಮೀರಿ, ರಷ್ಯಾದ ಸೋಲು ಖಚಿತವಾಗುವ ಹೊತ್ತಿಗೆ ಈ ಜಲಾಂತರ್ಗಾಮಿಗಳನ್ನು ನ್ಯಾಟೊ ಪಡೆಗಳನ್ನು ಪತ್ತೆಹಚ್ಚದಿದ್ದರೆ ಅಣ್ವಸ್ತ್ರ ದಾಳಿಯ ಸಾಧ್ಯತೆ ಹೆಚ್ಚು.
- ಜಗತ್ತಿನಲ್ಲಿ ಮೊದಲ ಬಾರಿಗೆ ಮತ್ತು ಈವರೆಗೆ ಒಂದೇ ಒಂದು ಬಾರಿ ಅಣ್ವಸ್ತ್ರ ಪ್ರಯೋಗಿಸಿರುವ ಏಕೈಕ ದೇಶ ಅಮೆರಿಕದಲ್ಲಿ ಅಣ್ವಸ್ತ್ರ ದಾಳಿಯ ಭೀತಿ ವ್ಯಕ್ತವಾಗಿದೆ. ಶೇ 70ರಷ್ಟು ಅಮೆರಿಕನ್ನರು ಉಕ್ರೇನ್ ವಿಚಾರದಲ್ಲಿ ತಮ್ಮ ದೇಶ ದೂರ ಉಳಿಯಬೇಕು. ಇಲ್ಲದಿದ್ದರೆ ಇದು ಅಣ್ವಸ್ತ್ರ ದಾಳಿಗೆ ಕಾರಣವಾಗಬಹುದು ಎಂದು ಭಯಪಟ್ಟಿದ್ದಾರೆ.
- ಜಪಾನ್ನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ 77 ವರ್ಷಗಳ ಹಿಂದೆ ಅಣ್ವಸ್ತ್ರ ಸ್ಫೋಟಿಸಿದಾಗ 1 ಲಕ್ಷ ಜನರು ತಕ್ಷಣ ಮೃತಪಟ್ಟಿದ್ದರು. 2 ಲಕ್ಷಕ್ಕೂ ಹೆಚ್ಚು ಜನರು ಅಣುವಿಕರಣದ ನಿರಂತರ ಪರಿಣಾಮಗಳಿಂದ ಜೀವಂತ ನರಕ ಅನುಭವಿಸಿದರು. ಇದೀಗ ವಿಶ್ವದ ಬಲಾಢ್ಯ ದೇಶಗಳಲ್ಲಿ ಅಂದು ಅಮೆರಿಕ ಪ್ರಯೋಗಿಸಿದ ಅಣ್ವಸ್ತ್ರಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಪ್ರಬಲ ಅಣ್ವಸ್ತ್ರಗಳಿದ್ದು, ಇಡೀ ಭೂಮಿಯನ್ನೇ ಹಲವು ಬಾರಿ ನಾಶಪಡಿಸಬಲ್ಲವು. ಯಾವುದೇ ಒಂದು ದೇಶ ಇನ್ನೊಂದು ದೇಶದ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಿದರೆ ಅದರ ಪರಿಣಾಮಗಳು ಇಡೀ ಜಗತ್ತನ್ನು ಬಾಧಿಸುತ್ತವೆ.
- ಅಣ್ವಸ್ತ್ರ ಸ್ಫೋಟದ ಪರಿಣಾಮವಾಗಿ ನೇರವಾಗಿ ಸಾಯುವವರು ಒಂದಿಷ್ಟು ಜನ. ಆದರೆ ಅದರ ಪರಿಣಾಮಗಳು ಹಲವು ವರ್ಷಗಳವರೆಗೆ ಬಾಧಿಸುತ್ತವೆ. ನೇರವಾದ ಅಣ್ವಸ್ತ್ರ ಸ್ಫೋಟದ ಪರಿಣಾಮವಾಗಿ ಮತ್ತೊಂದು ‘ಕಿರು ಶೀತಕಾಲ’ (ಲಿಟ್ಲ್ ಐಸ್ ಏಜ್) ರೂಪುಗೊಳ್ಳಬಹುದು. ಭೂಮಿಯ ಮೇಲಿನ ತಾಪಮಾನ ಹಲವು ಡಿಗ್ರಿಗಳಷ್ಟು ಕಡಿಮೆಯಾಗಿ ಜಗತ್ತಿನ ವಿವಿಧೆಡೆ ಬರಗಾಲ, ಬೆಳೆ ನಾಶಕ್ಕೆ ಕಾರಣವಾಗಬಹುದು. ಭೂಮಿಯ ವಾಯುಗೋಳವನ್ನು ಆವರಿಸಿಕೊಳ್ಳುವ ದಟ್ಟ ಹೊಗೆ ಮತ್ತು ದೂಳಿನಿಂದಾಗಿ ಹಲವು ದಿನಗಳವರೆಗೆ ಸೂರ್ಯನ ಬಿಸಿಲು ಭೂಮಿಯನ್ನು ತಲುಪದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
- ಭೂಮಿಯ ತಾಪಮಾನ ಏಕಾಏಕಿ, ಅನೈಸರ್ಗಿಕವಾಗಿ ಕಡಿಮೆಯಾದರೆ ಮಳೆ ಪ್ರಮಾಣ ಒಮ್ಮೆಲೆ ಕಡಿಮೆಯಾಗುತ್ತದೆ. ಬೆಳೆ ಫಸಲು ಕಟ್ಟುವ ಅವಧಿಯೂ 10ರಿಂದ 40 ದಿನಗಳಷ್ಟು ಕಡಿಮೆಯಾಗುತ್ತದೆ. ಜಗತ್ತಿನ ಯಾವುದೇ ದೇಶ ಬರಗಾಲದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದನ್ನು ಆರ್ಥಶಾಸ್ತ್ರಜ್ಞರು ಅಣ್ವಸ್ತ್ರದಿಂದ ಉಂಟಾದ ಜಾಗತಿಕ ಬರಗಾಲ (ಗ್ಲೂಬಲ್ ನ್ಯೂಕ್ಲಿಯರ್ ಫೆಮೈನ್) ಎಂದು ವಿಶ್ಲೇಷಿಸುತ್ತಿದ್ದಾರೆ.
- ಉಕ್ರೇನ್ ಮೇಲಿನ ಯುದ್ಧದಲ್ಲಿ ಮೇಲುಗೈ ಸಾಧಿಸಲು ರಷ್ಯಾ ಸಣ್ಣ ಸಾಮರ್ಥ್ಯದ ಅಣ್ವಸ್ತ್ರ ಬಳಸಬಹುದು ಎಂದು ಹೇಳಲಾಗುತ್ತಿದೆ. ಉಕ್ರೇನ್ ಯುದ್ಧವು ಅಣ್ವಸ್ತ್ರ ಯುದ್ಧಕ್ಕೆ ಹೊರಳಿಕೊಂಡರೆ ಸುಮಾರು 5.48 ಕೋಟಿ ಜನರ ಸಾವಿನಲ್ಲಿ ಇದು ಪರ್ಯಾವಸನಗೊಳ್ಳುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಣ್ವಸ್ತ್ರ ಬಳಕೆ ಹುಟ್ಟುಹಾಕುವ ಭೀತಿ ಮತ್ತು ಅದರ ಪರಿಣಾಮಗಳು ಈಗಾಗಲೇ ಹಿಂಜರಿತದತ್ತ ಸುಳಿಯುತ್ತಿರುವ ವಿಶ್ವ ಆರ್ಥಿಕತೆಯ ಮೇಲೆ ಬೀರುವ ಪರಿಣಾಮ ಮಾತ್ರ ಅನೂಹ್ಯವಾದುದು.
ಇದನ್ನೂ ಓದಿ: Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್ ಬೆಂಬಲಕ್ಕೆ ಸಬ್ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ
ಇದನ್ನೂ ಓದಿ: ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ