ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್​ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ

ರಷ್ಯಾ ವಶಕ್ಕೆ ಮರಿಯುಪೋಲ್: ಉಕ್ರೇನ್​ನಲ್ಲಿ ರಷ್ಯಾ ಗೆಲ್ಲಲು ಬಿಡುವುದಿಲ್ಲ ಎಂದ ಅಮೆರಿಕ, ಹೆಚ್ಚಾಗ್ತಿದೆ ಅಣ್ವಸ್ತ್ರ ದಾಳಿ ಭೀತಿ
ರಷ್ಯಾ-ಉಕ್ರೇನ್ ಸೇನಾಪಡೆಗಳ ಸಂಘರ್ಷದಲ್ಲಿ ಹಾಳಾಗಿರುವ ವಾಹನ, ಮನೆಗಳು

ಕ್ರೇನ್​ನಿಂದ ಈ ಹಿಂದೆ ವಶಪಡಿಸಿಕೊಂಡಿದ್ದ ಕ್ರಿಮಿಯಾ ಮತ್ತು ಇತರ ಪ್ರದೇಶಗಳನ್ನು ಪರಸ್ಪರ ಬೆಸೆಯಲು ಮರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಅನಿವಾರ್ಯವಾಗಿತ್ತು

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 22, 2022 | 7:27 AM

ಕೀವ್: ಉಕ್ರೇನ್​ನ ಪ್ರಮುಖ ಬಂದರು ನಗರಿ ಮರಿಯುಪೋಲ್ ತನ್ನ ವಶಕ್ಕೆ ಬಂದಿದೆ ಎಂದು ರಷ್ಯಾ ಘೋಷಿಸಿದೆ. ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ‘ಎರಡು ತಿಂಗಳ ಹೋರಾಟದ ನಂತರ ಮರಿಯುಪೋಲ್ ನಗರವನ್ನು ವಿಮೋಚನೆಗೊಳಿಸಲಾಗಿದೆ. ಅಲ್ಲಿರುವ ಉಕ್ರೇನ್ ಹೋರಾಟಗಾರರು ಭೂಗತರಾಗಿದ್ದಾರೆ’ ಎಂದು ಹೇಳಿದ್ದಾರೆ. ಉಕ್ರೇನ್​ನಿಂದ ಈ ಹಿಂದೆ ವಶಪಡಿಸಿಕೊಂಡಿದ್ದ ಕ್ರಿಮಿಯಾ ಮತ್ತು ಇತರ ಪ್ರದೇಶಗಳನ್ನು ಪರಸ್ಪರ ಬೆಸೆಯಲು ಮರಿಯುಪೋಲ್ ನಗರವನ್ನು ವಶಪಡಿಸಿಕೊಳ್ಳುವುದು ರಷ್ಯಾಕ್ಕೆ ಅನಿವಾರ್ಯವಾಗಿತ್ತು. ರಷ್ಯಾ ಸೇನೆಯ ಈ ಜಯದಿಂದ ಉಕ್ರೇನ್​ಗೆ ಪ್ರಮುಖ ಕೈಗಾರಿಕೆ ಪ್ರದೇಶಗಳು ಮತ್ತು ಕರಾವಳಿಯಿಂದ ಸಂಪರ್ಕ ಕಡಿತಗೊಂಡಂತೆ ಆಗಿದೆ.

ರಷ್ಯಾದ ಮುನ್ನಡೆಯಿಂದ ಎಚ್ಚೆತ್ತುಕೊಂಡಿರುವ ಅಮೆರಿಕಾ ಸಹ ಉಕ್ರೇನ್​ ಸಂಘರ್ಷದಲ್ಲಿ ಹಸ್ತಕ್ಷೇಪ ಹೆಚ್ಚಿಸಿದೆ. ಉಕ್ರೇನ್​ಗೆ ಹೊಸದಾಗಿ 80 ಕೋಟಿ ಡಾಲರ್ ನೆರವು ಘೋಷಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಡ್ರೋಣ್ ಮತ್ತು ವೈಮಾನಿಕ ಯುದ್ಧೋಪಕರಣಗಳನ್ನು ಒದಗಿಸುವ ಭರವಸೆ ನೀಡಿದೆ. ‘ರಷ್ಯಾ ಎಂದಿಗೂ ಉಕ್ರೇನ್​ನಲ್ಲಿ ಗೆಲುವು ಸಾಧಿಸಲು ಅವಕಾಶ ಕೊಡುವುದಿಲ್ಲ. ನಮ್ಮೆಲ್ಲ ಮಿತ್ರದೇಶಗಳು ಮತ್ತು ಸಹವರ್ತಿಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಉಕ್ರೇನ್​ನ ಜನರಿಗೆ ಬೇಕಿರುವ ಅಗತ್ಯ ವಸ್ತುಗಳನ್ನು ನಿರಂತರ ಸರಬರಾಜು ಮಾಡುತ್ತಿದ್ದೇವೆ’ ಎಂದು ಅಮೆರಿಕ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಈ ನಡುವೆ ಉಕ್ರೇನ್​ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ‘ಜನರಿಗೆ ಆಹಾರ ಮತ್ತು ಜೀವನಾವಶ್ಯಕ ಔಷಧಿಗಳು ಸಿಗುತ್ತಿಲ್ಲ. ಜನರು ನಿಶ್ಯಕ್ತಿಯಿಂದ ಬಳಲುತ್ತಿದ್ದಾರೆ’ ಎಂದು ಉಕ್ರೇನ್​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಮರಿಯುಪೋಲ್​ನಿಂದ ಜೀವ ಉಳಿಸಿಕೊಂಡು ಅಕ್ಕಪಕ್ಕದ ನಗರಗಳಿಗೆ ಬಂದಿರುವ ಜನರು, ತಾವು ಎದುರಿಸಿದ ಸಂಕಷ್ಟವನ್ನು ವಿವರಿಸಿದ್ದಾರೆ. ‘ನನ್ನ ಮತ್ತು ನನ್ನ ಮಗನ ಅಪಾರ್ಟ್​ಮೆಂಟ್​ ಮೇಲೆ ಬಾಂಬ್ ದಾಳಿ ನಡೆಯಿತು. ಮರಿಯುಪೋಲ್​ ಮೇಲೆ ದಾಳಿ ಆರಂಭವಾದ ಮೊದಲ ದಿನದಿಂದಲೂ ನಾವು ಬೇಸ್​ಮೆಂಟ್​ನಲ್ಲಿ ಚಳಿಯಲ್ಲಿ ನಡುಗುತ್ತಾ ಕಾಲ ಕಳೆದೆ. ನಮ್ಮನ್ನು ಕಾಪಾಡಬೇಕೆಂದು ದೇವರಿಗೆ ಮೊರೆಯಿಡುತ್ತಿದ್ದೆ’ ಎಂದು ಸಂತ್ರಸ್ತರೊಬ್ಬರು ಹೇಳಿದರು.

ಮರಿಯುಪೋಲ್ ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 2000 ಉಕ್ರೇನ್ ಯೋಧರು ಸಿಲುಕಿದ್ದಾರೆ. ಈ ಪ್ರದೇಶಕ್ಕೆ ಪ್ರವೇಶಿಸಲು ರಷ್ಯಾ ಸೇನೆಗೆ ಈವರೆಗೆ ಸಾಧ್ಯವಾಗಿಲ್ಲ. ಸುರಂಗಗಳ ಜಾಲ ಹೆಣೆದಿರುವ ಉಕ್ರೇನ್ ಯೋಧರು ರಷ್ಯಾ ಮುನ್ನಡೆಗೆ ತೀವ್ರ ಪ್ರತಿರೋಧ ತೋರುತ್ತಿದ್ದಾರೆ. ಇವರು ಸೈನಿಕರಲ್ಲ, ಸಾಮಾನ್ಯ ಜನ ಎಂದು ಉಕ್ರೇನ್ ಆಡಳಿತ ಹೇಳಿಕೊಂಡಿದೆ. ಕೈಗಾರಿಕಾ ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸುವ ಆಲೋಚನೆ ಕೈಬಿಡಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ಪಷ್ಟಪಡಿಸಿದ್ದಾರೆ. ‘ನಮ್ಮ ಸೈನಿಕರು ಕೈಗಾರಿಕೆಗಳ ಕಾಂಪೌಂಡ್ ಹಾರಿ ದಾಳಿ ನಡೆಸಬೇಕಿಲ್ಲ. ಅಲ್ಲಿ ವಿರೋಧಿಗಳು ಮಾಡಿಕೊಂಡಿರುವ ಸುರಂಗಗಳಲ್ಲಿ ತೆವಳಿ ಹೋರಾಡಬೇಕಿತ್ತು. ಇಡೀ ಪ್ರದೇಶಕ್ಕೆ ಸೊಳ್ಳೆ ಕೂಡ ಹೊರಗೆ ಹೋಗದ ಹಾಗೆ ಕಟ್ಟುನಿಟ್ಟಿನ ದಿದ್ಬಂಧನ ಹಾಕಿ. ಎಲ್ಲ ದಾರಿಗೆ ಬರುತ್ತೆ’ ಎಂದು ಸೂಚನೆ ನೀಡಿದ್ದಾರೆ.

ಈ ನಡುವೆ ತಾವು ಉಕ್ರೇನ್ ಪರವಾಗಿರುವುದನ್ನು ಘೋಷಿಸುವ ಸಲುವಾಗಿ ಸ್ಪೇನ್ ಮತ್ತು ಹಾಲೆಂಡ್​ ಪ್ರಧಾನಿಗಳು ಕೀವ್ ನಗರಕ್ಕೆ ಭೇಟಿ ನೀಡಿ, ವೊಲೊಡಿಮಿರ್ ಝೆಲೆನ್​ಸ್ಕಿ ಅವರನ್ನು ಭೇಟಿಯಾದರು. ಉಕ್ರೇನ್​ಗೆ ಮತ್ತಷ್ಟು ಸೇನಾ ನೆರವು ಒದಗಿಸುವ ಭರವಸೆ ನೀಡಿದರು.

ರಷ್ಯಾ ದಾಳಿಯಿಂದ ಹೆದರಿರುವ ಪೂರ್ವ ಯೂರೋಪ್​ನ ಹಲವು ದೇಶಗಳು ಬಹಿರಂಗವಾಗಿಯೇ ಉಕ್ರೇನ್​ಗೆ ಯುದ್ಧಟ್ಯಾಂಕ್, ಸಶಸ್ತ್ರ ವಾಹನಗಳು ಮತ್ತು ಇತರ ಬೃಹತ್ ಯುದ್ಧೋಪಕರಣಗಳನ್ನು ಒದಗಿಸುತ್ತಿವೆ. ಇಷ್ಟುದಿನ ಉಕ್ರೇನ್​ ಸಂಘರ್ಷದಿಂದ ತುಸು ಅಂತರ ಕಾಯ್ದುಕೊಂಡಿದ್ದ ಯೂರೋಪ್​ನ ಪ್ರಮುಖ ಬಲಾಢ್ಯ ದೇಶ ಜರ್ಮನಿ ಸಹ ಇದೀಗ ಉಕ್ರೇನ್ ಪರವಾಗಿ ದೃಢ ನಿಲುವು ತಳೆದಿದೆ. ‘ಉಕ್ರೇನ್​ಗೆ ನೆರವಾಗುತ್ತಿರುವ ದೇಶಗಳ ಪ್ಲಾನ್ ಏನು ಎಂದು ನಾವು ಪರಿಶೀಲಿಸುತ್ತೇವೆ. ಇಂಥ ದೇಶಗಳ ಮೂಲಕ ಉಕ್ರೇನ್​ಗೆ ಅಗತ್ಯ ನೆರವು ಒದಗಿಸುತ್ತೇವೆ’ ಎಂದು ಜರ್ಮನಿಯ ರಕ್ಷಣಾ ಸಚಿವ ಕ್ರೈಸ್ಟೈನ್ ಲ್ಯಾಬ್ರೆಟ್ ಹೇಳಿದರು.

ಉಕ್ರೇನ್ ಮೇಲೆ ಫೆಬ್ರುವರಿ 24ರಂದು ರಷ್ಯಾ ದಾಳಿ ಆರಂಭವಾದ ನಂತರ 2,345 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಹೇಳಲಾಗಿದೆ. 1020 ನಾಗರಿಕರ ಶವಗಳನ್ನು ರಾಜಧಾನಿ ಕೀವ್​ ಸುತ್ತಮುತ್ತಲ ಆಸ್ಪತ್ರೆಗಳ ಶವಾಗಾರಗಳಲ್ಲಿ ಕಾಯ್ದಿರಿಸಲಾಗಿದೆ. ಉಕ್ರೇನ್ ನಾಗರಿಕರ ಮೇಲೆ ರಷ್ಯಾ ಸೈನಿಕರು ಹಿಂಸಾಚಾರ ನಡೆಸಿರುವ ಪ್ರಕರಣಗಳೂ ಬೆಳಕಿಗೆ ಬಂದಿವೆ. ಮೃತ ನಾಗರಿಕರ ಮೇಲೆ ಹಿಂಸಾಚಾರ ನಡೆದಿರುವ ಸಾಕ್ಷಿಗಳನ್ನು ಉಕ್ರೇನ್ ಸಂಗ್ರಹಿಸಿದೆ. ಉಕ್ರೇನ್​ನಿಂದ ಸುಮಾರು 50 ಲಕ್ಷ ಜನರು ಇತರ ದೇಶಗಳಿಗೆ ವಲಸೆ ಹೋಗಿದ್ದರೆ, ಆಂತರಿಕವಾಗಿ 77 ಲಕ್ಷ ಜನರು ಸ್ಥಳಾಂತರಗೊಂಡಿದ್ದಾರೆ. 2ನೇ ಮಹಾಯುದ್ಧದ ನಂತರ ಜಗತ್ತು ಕಂಡ ಅತ್ಯಂತ ಕೆಟ್ಟ ನಿರಾಶ್ರಿತರ ಬಿಕ್ಕಟ್ಟು ಇದು ಎಂದು ವಿಶ್ವಸಂಸ್ಥೆ ಹೇಳಿದೆ.

ಇದನ್ನೂ ಓದಿ: Watch ರಷ್ಯಾ- ಉಕ್ರೇನ್  ಸಂಘರ್ಷದಲ್ಲಿ ಬುಲೆಟ್ ತಡೆದು ಉಕ್ರೇನ್ ಯೋಧನ ಪ್ರಾಣ ಉಳಿಸಿದ ಮೊಬೈಲ್ ಫೋನ್

ಇದನ್ನೂ ಓದಿ: Russia Ukraine War: ಅಣ್ವಸ್ತ್ರ ದಾಳಿ ಭೀತಿಯಲ್ಲಿ ಜಗತ್ತು, ಉಕ್ರೇನ್​ ಬೆಂಬಲಕ್ಕೆ ಸಬ್​ಮರೀನ್ ಕಳುಹಿಸಿದ ಬ್ರಿಟನ್, ಕೆರಳಿದ ರಷ್ಯಾ

Follow us on

Related Stories

Most Read Stories

Click on your DTH Provider to Add TV9 Kannada