ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆದಿದ್ದ ಮಹಿಳೆಯೊಬ್ಬಳನ್ನು ಲೈವ್ ಮಾಡುತ್ತಿದ್ದ ವೇಳೆ ಆಕೆಯ ಪತಿರಾಯ ಪೆಟ್ರೋಲ್ ಸುರಿದು ಸಜೀವವಾಗಿ ದಹನ ಮಾಡಿರುವ ಘಟನೆ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ನಡೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಖ್ಯಾತಿ ಪಡೆದಿದ್ದ 30 ವರ್ಷದ ಲಾಮು ಎಂಬ ಮಹಿಳೆ ಅಲ್ಲಿನ ಗ್ರಾಮೀಣ ಬದುಕಿನ ಬಗ್ಗೆ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮತ್ತು ಲೈವ್ ಸಹ ಮಾಡುತ್ತಿದ್ದಳು. ಈ ಮೂಲಕ ನೆಟ್ಟಿಗರಿಂದ ಸಾಕಷ್ಟು ಪ್ರಶಂಸೆ ಸಹ ಪಡೆದು ಅನೇಕ ಫಾಲೋವರ್ಸ್ ಸಹ ಹೊಂದಿದ್ದಳು.
ಕಳೆದ ಎರಡು ವಾರಗಳ ಹಿಂದೆ ಇಂಥದ್ದೇ ಒಂದು ಲೈವ್ ಸೆಷನ್ ಮಾಡುವ ವೇಳೆ ಆಕೆಯ ಮಾಜಿ ಪತಿ ಮನೆಗೆ ನುಗ್ಗಿ ಲಾಮು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಲಾಮುಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಆಕೆಯನ್ನ ಸ್ಥಳೀಯರು ಆಸ್ಪತ್ರೆಗೆ ಸಹ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಲಾಮು ಕೊನೆಯುಸಿರೆಳೆದಿದ್ದಾಳೆ.