ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಂತ್ರಣದ ಸಾಧ್ಯತೆಗಳು ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಈಗಾಗಲೇ ಕೈಮೀರಿದೆ. ಸಚಿವ ಸಂಪುಟದಲ್ಲಿದ್ದ ಎಲ್ಲ 26 ಸಚಿವರೂ ಒಮ್ಮೆಲೆ ರಾಜೀನಾಮೆ ಕೊಟ್ಟಿದ್ದು ರಾಜಕೀಯ ಬಿಕ್ಕಟ್ಟೂ ಸೃಷ್ಟಿಯಾಗಿದೆ. ಜನರು ದಿನದಿಂದ ದಿನಕ್ಕೆ ಸಹನೆ ಕಳೆದುಕೊಳ್ಳುತ್ತಿದ್ದಾರೆ. ರಾಜೀನಾಮೆಗಳನ್ನು ಪ್ರಧಾನಿ ಅಂಗೀಕರಿಸುತ್ತಾರೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಅಧ್ಯಕ್ಷ ಗೊಟಬಾಯ ರಾಜಪಕ್ಸ ಮನೆ ಎದುರು ಪ್ರತಿಭಟನೆ ನಡೆದ ನಂತರ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿದೆ. ದೇಶವ್ಯಾಪಿ 36 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಇದೀಗ ಸಚಿವ ಸಂಪುಟದ ಎಲ್ಲ ಮಂತ್ರಿಗಳೂ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಹೊಸದಾಗಿ ಮಂತ್ರಿಮಂಡಲ ರಚಿಸಲು ಪ್ರಧಾನಿಗೆ ಅವಕಾಶ ಸಿಕ್ಕಿದೆ. ಆದರೆ ಪ್ರಧಾನಿಯ ಮುಂದಿನ ನಡೆ ಏನು ಎಂಬುದು ಇನ್ನೂ ನಿಗೂಢವಾಗಿಯೇ ಇದೆ. ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಮಾಹಿತಿಗಳಿವು…
- ನಾವೆಲ್ಲರೂ ಪ್ರಧಾನಿಗೆ ರಾಜೀನಾಮೆ ಪತ್ರಗಳನ್ನು ರವಾನಿಸಿದ್ದೇವೆ. ಯಾವುದೇ ಕ್ಷಣದಲ್ಲಿ ಅಧಿಕಾರ ತ್ಯಜಿಸಲು ಸಿದ್ಧರಿದ್ದೇವೆ. ಅಧ್ಯಕ್ಷರೊಂದಿಗೆ ಮಾತನಾಡಿದ ನಂತರ ಮುಂದಿನ ನಡೆ ನಿರ್ಧರಿಸುತ್ತೇವೆ ಎಂದು ಶಿಕ್ಷಣ ಸಚಿವ ದಿನೇಶ್ ಗುಣವರ್ಧನೆ ಹೇಳಿದರು.
- ರಾಜೀನಾಮೆ ನೀಡಿರುವವರಲ್ಲಿ ಶ್ರೀಲಂಕಾ ಪ್ರಧಾನಿಯ ಪುತ್ರ ನಮಲ್ ರಾಜಪಕ್ಸ ಸಹ ಸೇರಿದ್ದಾರೆ. ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ನಾನು ನಿರ್ವಹಿಸುತ್ತಿರುವ ಎಲ್ಲ ಜವಾಬ್ದಾರಿಗಳಿಂದಲೂ ಹಿಂದೆ ಸರಿಯುತ್ತಿರುವುದಾಗಿ ಅಧ್ಯಕ್ಷರ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದೇನೆ. ನನ್ನ ಪಕ್ಷ ಮತ್ತು ಕ್ಷೇತ್ರದ ಮತದಾರರಿಗೆ ನಿಷ್ಠನಾಗಿಯೇ ಮುಂದಿನ ಜೀವನ ನಡೆಸುತ್ತೇನೆ. ದೇಶ ಎದುರಿಸುತ್ತಿರುವ ಬಿಕ್ಕಟ್ಟು ನಿರ್ವಹಿಸಲು ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಸಹಕರಿಸುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
- ಕಳೆದ ಭಾನುವಾರ ಶ್ರೀಲಂಕಾದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಿದ ನಂತರ ನಮಲ್ ರಾಜಪಕ್ಸ ಅಧಿಕಾರಿಗಳಿಗೆ ಪ್ರಗತಿಪರವಾಗಿ ಯೋಚಿಸುವಂತೆ ಮನವಿ ಮಾಡಿದ್ದರು. ‘ವಿಪಿಎನ್ ಬಳಕೆ ಸಾಧ್ಯವಿರುವ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸುವ ಕ್ರಮಕ್ಕೆ ಯಾವುದೇ ಅರ್ಥವಿಲ್ಲ. ನಿಮ್ಮ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸಿ. ದೇಶವನ್ನು ಬಿಕ್ಕಟ್ಟಿನಿಂದ ಪಾರುಮಾಡಲು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಿ’ ಎಂದು ಹೇಳಿದ್ದರು.
- ಸರ್ಕಾರದ ವಿರುದ್ಧ ಜನರು ನಡೆಸುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶದಿಂದ ಫೇಸ್ಬುಕ್, ಟ್ವಿಟರ್, ಯುಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳನ್ನು ನಿರ್ಬಂಧಿಸಲು ಸರ್ಕಾರ ಆದೇಶ ಹೊರಡಿಸಿತ್ತು. 15 ಗಂಟೆಗಳ ನಂತರ ಸಾಮಾಜಿಕ ಮಾಧ್ಯಮಗಳ ಮೇಲಿನ ನಿರ್ಬಂಧ ಹಿಂಪಡೆಯಲಾಯಿತು.
- ಶ್ರೀಲಂಕಾದಲ್ಲಿ ಒಂದು ದಿನಕ್ಕೆ ಸರಾಸರಿ 13 ಗಂಟೆಗಳ ಲೋಡ್ಶೆಡಿಂಗ್ ಇದೆ. ಇದರ ಜೊತೆಗೆ ಇಂಧನ ಕೊರತೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಜೀವನ ಸಂಕಷ್ಟ ಅನುಭವಿಸುತ್ತಿದೆ.
- ಕಳೆದ ಮಾರ್ಚ್ ತಿಂಗಳಿನಿಂದ ಶ್ರೀಲಂಕಾ ಸತತವಾಗಿ ತನ್ನ ಕರೆನ್ಸಿ ಅಪಮೌಲ್ಯ ಮಾಡುತ್ತಲೇ ಇತ್ತು. ಇತರ ದೇಶಗಳ ಬಳಿ ಸಾಲವನ್ನೂ ಕೇಳುತ್ತಿತ್ತು. ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
- ಕಳೆದ ಗುರುವಾರ ಸಾವಿರಾರು ಜನರು ಅಧ್ಯಕ್ಷರ ಮನೆ ಎದುರು ಸೇರಿ ರಾಜೀನಾಮೆಗೆ ಆಗ್ರಹಿಸಿದ್ದರು.
- ಇದಾದ ಮಾರನೇ ದಿನವೇ ಅಧ್ಯಕ್ಷ ಗೊಟಬಾಯ ರಾಜಪಕ್ಸ ಸಾರ್ವಜನಿಕ ತುರ್ತು ಪರಿಸ್ಥಿತಿ ಘೋಷಿಸಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನೆಪದಲ್ಲಿ ಅಧ್ಯಕ್ಷರ ಅಧಿಕಾರ ಮತ್ತಷ್ಟು ಹೆಚ್ಚಾಯಿತು. ಅಗತ್ಯ ವಸ್ತುಗಳ ಪೂರೈಕೆಗೆ ಸೇನೆಯನ್ನು ಬಳಸಲಾಗುತ್ತಿದೆ.
- ಶ್ರೀಲಂಕಾದ ಜನರಿಗೆ ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕು ಇದೆ. ಸರ್ಕಾರ ಅದನ್ನು ಹತ್ತಿಕ್ಕಬಾರದು ಎಂದು ಶ್ರೀಲಂಕಾದಲ್ಲಿರುವ ಅಮೆರಿಕ ರಾಯಭಾರಿ ಜೂಲಿ ಚುಂಗ್ ಹೇಳಿದ್ದರು. ದೇಶದಲ್ಲಿ ಶೀಘ್ರವೇ ಆರ್ಥಿಕ ಸ್ಥಿರತೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
- ವಿಶ್ವ ಹಣಕಾಸು ನಿಧಿ ಸಂಘಟನೆಯೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಅಧ್ಯಕ್ಷರು ಕಳೆದ ತಿಂಗಳು ಹೇಳಿದ್ದರು. ಇದರ ಜೊತೆಗೆ ಭಾರತ ಮತ್ತು ಚೀನಾದಿಂದ ಹೆಚ್ಚುವರಿ ಸಾಲ ಕೇಳಿರುವುದಾಗಿ ತಿಳಿಸಿದ್ದರು. ಇಂಧನ ಮತ್ತು ವಿದ್ಯುಚ್ಛಕ್ತಿಯನ್ನು ಕಡಿಮೆ ಬಳಸುವ ಮೂಲಕ ದೇಶಕ್ಕೆ ನೆರವಾಗಬೇಕು ಎಂದು ಜನರಲ್ಲಿ ವಿನಂತಿ ಮಾಡಿದ್ದರು.
ಇದನ್ನೂ ಓದಿ: Crisis in Sri Lanka 1ಕೆಜಿ ಅಕ್ಕಿಗೆ ₹220, ಹಾಲಿನ ಪುಡಿಗೆ ₹1900, ಒಂದು ಮೊಟ್ಟೆಗೆ ₹30; ಶ್ರೀಲಂಕಾದಲ್ಲಿ ದಿನಸಿ ಬೆಲೆ ಧುತ್ತನೆ ಏರಿಕೆ
ಇದನ್ನೂ ಓದಿ: ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ: ಪುರುಷೋತ್ತಮ ಬಿಳಿಮಲೆ ಬರಹ