ವಿಡಿಯೋ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ: 18 ಸಾವು, 46 ಮಂದಿಗೆ ಗಾಯ, 300ಕ್ಕೂ ಹೆಚ್ಚು ಮನೆಗಳು ನೆಲಸಮ
ಟಿಬೆಟ್‌ನಲ್ಲಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 18 ಜನರು ಮೃತಪಟ್ಟು, 46 ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಅವಶೇಷಗಳಡಿ ಸಿಲುಕಿದವರ ರಕ್ಷಣೆಗೆ 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ. ಭಾರತದ ಗಡಿ ಭಾಗದಲ್ಲೂ ಕಂಪನದ ಅನುಭವವಾಗಿದೆ. ಟಿಬೆಟ್ ಭೂಕಂಪನ ಸೂಕ್ಷ್ಮ ವಲಯವಾಗಿದ್ದು, ಇಂತಹ ದುರಂತಗಳು ಸಾಮಾನ್ಯ.

ಬೀಜಿಂಗ್, ಅಕ್ಟೋಬ್ರ 23: ಚೀನಾದ ದೂರದ ಪರ್ವತ ಪ್ರಾಂತ್ಯವಾದ ಟಿಬೆಟ್‌ನಲ್ಲಿ ಗುರುವಾರ ತಡರಾತ್ರಿ ಸಂಭವಿಸಿದ 7.0 ತೀವ್ರತೆಯ ಪ್ರಬಲ ಭೂಕಂಪಕ್ಕೆ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 46 ಮಂದಿ ಗಾಯಗೊಂಡಿದ್ದಾರೆ. ನೂರಾರು ಕಟ್ಟಡಗಳು ಕುಸಿದುಬಿದ್ದಿದ್ದು, ಹಲವೆಡೆ ಅವಶೇಷಗಳಡಿ ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಗುರುವಾರ ರಾತ್ರಿ 10.33 ಕ್ಕೆ (ಸ್ಥಳೀಯ ಕಾಲಮಾನ) ಭೂಮಿ ಕಂಪಿಸಿದೆ. ಈ ಭೂಕಂಪದ ಕೇಂದ್ರಬಿಂದು ನಾಗ್ಕ್ವು ನಗರದಿಂದ ಪೂರ್ವ-ಈಶಾನ್ಯಕ್ಕೆ ಸುಮಾರು 190 ಕಿಲೋಮೀಟರ್ ಹಾಗೂ ಟಿಬೆಟ್‌ನ ರಾಜಧಾನಿ ಲಾಸಾದಿಂದ ಈಶಾನ್ಯಕ್ಕೆ ಸುಮಾರು 390 ಕಿಲೋಮೀಟರ್ ದೂರದ ಪರ್ವತ ಪ್ರದೇಶದಲ್ಲಿದೆ ಎಂದು ಗುರುತಿಸಲಾಗಿದೆ.
ಹಾನಿ ಮತ್ತು ರಕ್ಷಣಾ ಕಾರ್ಯಾಚರಣೆ ಕುಸಿದ ಮನೆಗಳು: ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 339 ಮನೆಗಳು ಸಂಪೂರ್ಣವಾಗಿ ಅಥವಾ ಭಾಗಶಃ ಕುಸಿದುಬಿದ್ದಿವೆ. ಗಾಯಗೊಂಡಿರುವ 46 ಮಂದಿಯಲ್ಲಿ 11 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಅವರನ್ನು ತುರ್ತು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭೂಕಂಪದ ತೀವ್ರತೆಗೆ ರೆಸ್ಟೋರೆಂಟ್‌ಗಳು, ಮನೆಗಳು ಹಾಗೂ ಅಂಗಡಿಗಳಿಂದ ಜನ ರಕ್ಷಣೆಗೆ ಬೀದಿಗೆ ಓಡಿಬಂದಿದ್ದಾರೆ. ಸೂಪರ್‌ಮಾರ್ಕೆಟ್‌ಗಳ ಕಪಾಟುಗಳಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬೀಳುತ್ತಿರುವ ಮತ್ತು ವಿದ್ಯುತ್ ಕಂಬಗಳು ಅಲುಗಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪೊಲೀಸ್ ಮತ್ತು ರಕ್ಷಣಾ ಪಡೆಗಳ ನಿಯೋಜನೆ: ಅವಶೇಷಗಳನ್ನು ತೆರವುಗೊಳಿಸಲು ಮತ್ತು ಗಾಯಾಳುಗಳನ್ನು ರಕ್ಷಿಸಲು 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ; 45 ನಿಮಿಷದಲ್ಲಿ 2 ಬಾರಿ ಕಂಪಿಸಿದ ಭೂಮಿ!
ಭಾರತದ ಗಡಿ ಭಾಗದಲ್ಲೂ ಕಂಪನದ ಅನುಭವ ಟಿಬೆಟ್‌ನಲ್ಲಿ ಮುಖ್ಯ ಭೂಕಂಪ ಸಂಭವಿಸಿದ ಬೆನ್ನಲ್ಲೇ, ಭಾರತೀಯ ಕಾಲಮಾನ (IST) ರಾತ್ರಿ ಸುಮಾರು 8.29ಕ್ಕೆ ಚೀನಾ ಭಾಗದಲ್ಲಿ 5.2 ತೀವ್ರತೆಯ ಮತ್ತೊಂದು ಭೂಕಂಪನ ದಾಖಲಾಗಿದೆ. ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿದ ಮಾಹಿತಿಯ ಪ್ರಕಾರ, ಇದು ಅರುಣಾಚಲ ಪ್ರದೇಶದ ಪ್ಯಾಂಗಿನ್‌ನಿಂದ ವಾಯುವ್ಯಕ್ಕೆ 505 ಕಿಲೋಮೀಟರ್ ದೂರದಲ್ಲಿ, ಭೂಮಿಯ 15 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ವಿಡಿಯೋ
A major magnitude 7 earthquake recently struck northern Tibet. The epicentre of the widely felt quake was in Nagqu.
Reports coming in of possible fatalities, buildings collapsed and ground/wall cracks. Aftershocks are ongoing. https://t.co/73toOSyPSu
— Pacific Wire (@JMChyno) October 22, 2026
ಹಿಮಾಲಯನ್ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ನೈಸರ್ಗಿಕ ವಿಕೋಪಗಳು ಭೂಕಂಪನ ಸೂಕ್ಷ್ಮ ವಲಯ: ಟಿಬೆಟ್ ಪರ್ವತ ಶ್ರೇಣಿಯು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್‌ಗಳ ಸಂಧಿಸುವ ಸ್ಥಳದಲ್ಲಿದ್ದು, ಜಗತ್ತಿನ ಅತ್ಯಂತ ಸೂಕ್ಷ್ಮ ಭೂಕಂಪನ ವಲಯಗಳಲ್ಲಿ ಒಂದಾಗಿದೆ. ಈ ಹಿಂದೆ ಜನವರಿ 2025 ರಲ್ಲೂ ಟಿಬೆಟ್‌ನ ಟಿಂಗ್ರಿ ಕೌಂಟಿಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 126 ಜನರು ಮೃತಪಟ್ಟಿದ್ದರು. ಕಳೆದ ಆಗಸ್ಟ್‌ನಲ್ಲಿ ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿದ ಪ್ರಳಯಸದೃಶ ಹಠಾತ್ ಪ್ರವಾಹದಲ್ಲಿ 1,400ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ನೂರಾರು ಕಟ್ಟಡಗಳು ಕೊಚ್ಚಿಹೋಗಿದ್ದವು. ಆ ದುರಂತ ಮಾಸುವ ಮುನ್ನವೇ ಈ ಪ್ರಬಲ ಭೂಕಂಪ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:47 am, Fri, 23 October 26
