ಒಬ್ಬನನ್ನು ಸೆರೆ ಹಿಡಿಯುವುದಕ್ಕಾಗಿ ಭಾರತ ಸಾಮೂಹಿಕವಾಗಿ ದಮನ ಕಾರ್ಯ ಮಾಡಿದೆ. ಸರಿಯಾದ ಸುದ್ದಿಯನ್ನು ತೋರಿಸಲು ಭಾರತದ ಮಾಧ್ಯಮಗಳು ವಿಫಲವಾಗಿವೆ ಎಂಬ ಶೀರ್ಷಿಕೆಯಲ್ಲಿ ಟೈಮ್ ಲೇಖನವೊಂದನ್ನು (TIME) ಪ್ರಕಟಿಸಿದೆ. ಮಾರ್ಚ್ 28ರಂದು ಪ್ರಕಟವಾದ ಈ ಲೇಖನ ಬರೆದವರು ಸಿಮ್ರಾನ್ ಜೀತ್ ಸಿಂಗ್. ಲೇಖಕರ ಪರಿಚಯ ಹೀಗಿದೆ: ಸಿಂಗ್ ಅವರು ಆಸ್ಪೆನ್ ಇನ್‌ಸ್ಟಿಟ್ಯೂಟ್‌ನ ರಿಲಿಜನ್ ಮತ್ತು ಸೊಸೈಟಿ ಕಾರ್ಯಕ್ರಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ದಿ ಲೈಟ್ ವಿ ಗಿವ್: ಹೌ ಸಿಖ್ ವಿಸ್ಡಮ್ ಕ್ಯಾನ್ ಟ್ರಾನ್ಸ್‌ಫಾರ್ಮ್ ಯುವರ್ ಲೈಫ್‌ನ ಲೇಖಕರು ಇವರು. ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ನೆಲ್ಸನ್ ಮಂಡೇಲಾ ಫೌಂಡೇಶನ್‌ನೊಂದಿಗೆ ರೇಸಿಯಲ್ ಇಕ್ವಿಟಿಗಾಗಿ ಅಟ್ಲಾಂಟಿಕ್ ಫೆಲೋ ಮತ್ತು ಓಪನ್ ಸೊಸೈಟಿ ಫೌಂಡೇಶನ್ಸ್ ನೊಂದಿಗೆ ಸೊರೊಸ್ ಈಕ್ವಾಲಿಟಿ ಫೆಲೋ ಆಗಿದ್ದಾರೆ.
ಭಾರತದ ಪಂಜಾಬ್‌ನಲ್ಲಿ ಅಮೃತಪಾಲ್ ಸಿಂಗ್‌ನ್ನು (Amritpal Singh) ಸೆರೆ ಹಿಡಿಯುವುದಕ್ಕಾಗಿ ಮಾಡಿದ ಕಾರ್ಯಾಚರಣೆಗಳ ಬಗ್ಗೆ ವಿವರಿಸುತ್ತಾ ಲೇಖಕರು ಮಾನವ ಹಕ್ಕುಗಳನ್ನು ಇಲ್ಲಿ ಯಾವ ರೀತಿ ದಮನಿಸಲಾಗಿದೆ ಎಂದು ಬರೆದಿದ್ದಾರೆ. ಕಳೆದ ವಾರ, ಭಾರತ ಸರ್ಕಾರವು 27 ಮಿಲಿಯನ್ ಜನರಿಗೆ ಇಂಟರ್ನೆಟ್ ಸ್ಥಗಿತಗೊಳಿಸಿತು. ಉತ್ತರ ಭಾರತದ ರಾಜ್ಯವಾದ ಪಂಜಾಬ್‌ನಲ್ಲಿ ಮುಕ್ತವಾಗಿ ಸೇರುವ ಹಕ್ಕನ್ನು ನಿರಾಕರಿಸಿತು. ಯಾಕೆಂದರೆ ಅಮೃತಪಾಲ್ ಸಿಂಗ್ ಎಂಬ 30 ವರ್ಷದ-ಸಿಖ್ ರಾಜಕೀಯ ಕಾರ್ಯಕರ್ತನನ್ನು ಸೆರೆಹಿಡಿಯುವುದು ಜನರ ಮಾನವ ಹಕ್ಕುಗಳಿಗಿಂತ ಮುಖ್ಯವಾಗಿದೆ ಎಂದು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಲೇಖಕರು ಬರೆದಿದ್ದಾರೆ. ಸಿಂಗ್ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಲೇಖಕರು ಭಾರತದ ಸಿಖ್ಖರ ಹಕ್ಕು ನಿರಾಕರಣೆ ಮತ್ತು ಭಾರತದಲ್ಲಿನ ಇತರ ಅಲ್ಪಸಂಖ್ಯಾತರ ವಿರುದ್ಧ ಸರ್ಕಾರ ಮಾಡಿದ ಅನ್ಯಾಯದ ಬಗ್ಗೆ ತನ್ನ ದನಿಯುತ್ತುತ್ತಾರೆ ಎಂದಿದ್ದಾರೆ.
ನಂತರ ಅಮೃತಪಾಲ್ ಸಿಂಗ್ ಸೆರೆ ಹಿಡಿಯುವ ಕಾರ್ಯಾಚರಣೆ ಬಗ್ಗೆ ಉಲ್ಲೇಖಿಸಿದ ಲೇಖಕರು ವಾಸ್ತವ ಏನೇ ಇರಲಿ, ಸಿಂಗ್‌ನ್ನು ಸೆರೆಹಿಡಿಯುವುದಕ್ಕಾಗಿ 100 ಕ್ಕೂ ಹೆಚ್ಚು ಜನರನ್ನು ಬಂಧಿಸಿತು. ಈ ಕಾರ್ಯಾಚರಣೆ ಸಂದರ್ಭದಲ್ಲಿ ಸಭೆ ಸೇರುವ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ತೀವ್ರವಾದ ನಿರ್ಬಂಧಗಳನ್ನು ಒಳಗೊಂಡಂತೆ ಮೂಲಭೂತ ಮಾನವ ಹಕ್ಕುಗಳನ್ನು ಭಾರತ ಸರ್ಕಾರ ದುರುಪಯೋಗ ಪಡಿಸಿಕೊಂಡಿತು. ಸರ್ಕಾರವು ಪಂಜಾಬ್‌ನಾದ್ಯಂತ ಇಂಟರ್ನೆಟ್ ಸಂವಹನ ಮತ್ತು ಪಠ್ಯ ಸಂದೇಶ ಕಳುಹಿಸುವಿಕೆಯನ್ನು ಸ್ಥಗಿತ ಮಾಡಿತು. ಹೀಗೆ ಮಾಡುವುದು ಮಾನವ ಹಕ್ಕುಗಳ ವ್ಯಾಪ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಸ್ವತಃ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯೇ ಹೇಳಿದೆ ಎಂದು ಲೇಖಕರು ಬರೆದಿದ್ದಾರೆ.
ಮಾಧ್ಯಮಗಳು ಸರ್ಕಾರದ ದಮನಕಾರಿ ತಂತ್ರಗಳ ಮೇಲೆ ಕೇಂದ್ರೀಕರಿಸುವ ಬದಲು, ಭಾರತ ಮತ್ತು ವಿದೇಶಗಳಲ್ಲಿ ಸಿಂಗ್ ಅವರ ರಾಜಕೀಯ ದೃಷ್ಟಿಕೋನಗಳ ಬಗ್ಗೆಯೇ ಸುದ್ದಿ ಮಾಡಿದೆ. ಅಷ್ಟೇ ಅಲ್ಲದೆ ಕಾರ್ಯಚರಣೆ ವೇಳೆ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಇವುಗಳು ಮಾತಾಡಿಲ್ಲ. ಇಂದು, ನಾವು ಡಜನ್ಗಟ್ಟಲೆ ಔಟ್ಲೆಟ್ಗಳು, ನೂರಾರು ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಹೊಂದಿದ್ದೇವೆ. ನಾವು ರಾಜ್ಯದ ಘಟನೆಗಳ ಆವೃತ್ತಿಗೆ ಸೀಮಿತವಾಗಿರಲು ಯಾವುದೇ ಕಾರಣವಿಲ್ಲ. ಇಂದು ಅನೇಕ ಸ್ಥಳಗಳಲ್ಲಿ ದೇಶಗಳು ಮತ್ತು ನಾಯಕರು ಫ್ಯಾಸಿಸಂ ಮತ್ತು ನಿರಂಕುಶವಾದಿಗಳಾಗಿರುವಾಗ, ಪತ್ರಕರ್ತರ ಪ್ರಶ್ನೆಗಳು ಹೆಚ್ಚು ಅಗತ್ಯ ಮತ್ತು ತುರ್ತು ಕೂಡಾ ಆಗಿದೆ.
ಈ ಲೇಖನವು ದುರುದ್ದೇಶಪೂರಿತ ಸುಳ್ಳು ಮತ್ತು ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ. ಪಂಜಾಬ್‌ನಲ್ಲಿ ನಡೆದಿರುವ ಸಂಗತಿಗಳೇ ಬೇರೆ ಲೇಖನದಲ್ಲಿರುವುದೇ ಬೇರೆ ಎಂದು ಟ್ವೀಟಿಗರು ಟೀಕಿಸಿದ್ದಾರೆ.ಅರುಣ್ ಪುದುರ್ ಎಂಬ ಟ್ವೀಟಿಗರು ಈ ಕೃತಿಯ ಲೇಖಕರು ಹಾರ್ಡ್‌ಕೋರ್ ಖಲಿಸ್ತಾನಿ. ಇದು ಅಲ್ ಖೈದಾ ಸದಸ್ಯ ಒಸಾಮಾ ಬಿನ್ ಲಾಡೆನ್ ಅನ್ನು ಬೆಂಬಲಿಸಲು ಬರೆಯುವಂತಿದೆ ಎಂದಿದ್ದಾರೆ. ಜೆಎಚ್ ಎಂಬ ಟ್ವಿಟರ್ ಬಳಕೆದಾರರು ಭಯೋತ್ಪಾದಕರ ಯಾವುದೇ ಹಕ್ಕುಗಳಿಗಿಂತ ಭಾರತದ ಸಾರ್ವಭೌಮತ್ವ ಮುಖ್ಯವಾಗಿದೆ. ಅಮೃತಪಾಲ್ ಒಬ್ಬ ಪಲಾಯನವಾದಿ, ಸುಲಿಗೆಕೋರ, ಬ್ಲಾಕ್ ಮೇಲ್ ಮಾಡುವವ ಮತ್ತು ಭಯೋತ್ಪಾದಕ ಎಂದಿದ್ದಾರೆ. ‘ಕಾರ್ಯಕರ್ತ’ ಪದದ ಬಳಕೆಯನ್ನು ಗಮನಿಸಿ. ಈ ‘ಆಕ್ಟಿವಿಸ್ಟ್’ ಪ್ರತಿಪಾದಿಸುವಂತಹ ಯಾವುದೇ ಪ್ರತ್ಯೇಕತಾವಾದಿ/ಉಗ್ರವಾದ ಸಿದ್ಧಾಂತವು ಭಾರತದ ಸಾಮಾಜಿಕ ರಚನೆಯನ್ನು ನಾಶಮಾಡಲು ಸಾಧ್ಯವಿಲ್ಲ ಎಂದು ತೋರಿಸಲು ಭಾರತೀಯರು ಹೇಗೆ ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂಬ ಲೇಖನ ಯಾಕಿರಬಾರದು ಎಂದು ಸೌರವ್ ದತ್ತಾ ಎಂಬವರು ಕೇಳಿದ್ದಾರೆ. ಇನ್ನು ಕೆಲವರು ನೇರವಾಗಿಯೇ ಟೈಮ್ ನ್ನು ಟೀಕಿಸಿದ್ದು, ಅಮೆರಿಕನ್ ಪ್ರಕಟಣೆಗಳಿಂದ ನೀವು ಇನ್ನೇನಾದರೂ ನಿರೀಕ್ಷಿಸಬಹುದೇ.ಆಡಳಿತ ಬದಲಾವಣೆ ಮತ್ತು ಪ್ರತ್ಯೇಕತಾವಾದದ ಕಲ್ಪನೆಗಳನ್ನು ಯಾವಾಗಲೂ ಬೆಂಬಲಿಸಲಾಗುತ್ತದೆ ಎಂದು @conscienceisimp ಎಂಬ ಬಳಕೆದಾರರು ಕಾಮೆಂಟಿಸಿದ್ದಾರೆ.
ಸೊರೊಸ್ ಜತೆ ಸಂಬಂಧ ಹೊಂದಿರುವ ಈ ವ್ಯಕ್ತಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ?
ಓಪನ್ ಸೊಸೈಟಿ ಫೌಂಡೇಶನ್ಸ್ ನೊಂದಿಗೆ ಸೊರೊಸ್ ಈಕ್ವಾಲಿಟಿ ಫೆಲೋ ಎಂದು ಸಿಮ್ರಾನ್ ಪರಿಚಯದಲ್ಲಿ ಉಲ್ಲೇಖಿಸಲಾಗಿದೆ. ಸೊರೊಸ್ ಜತೆ ಸಂಬಂಧ ಹೊಂದಿರುವ ಈ ವ್ಯಕ್ತಿಯಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದು ನೆಟ್ಟಿಗರು ಕೇಳಿದ್ದಾರೆ. ಅಂದಹಾಗೆ ಇಲ್ಲಿ ಹೇಳಿರುವ ಸೊರೊಸ್ ಯಾರು ಅಂತ ಗೊತ್ತಾ? ಅಮೆರಿಕದ ಶ್ರೀಮಂತ ಉದ್ಯಮಿ ಜಾರ್ಜ್ ಸೊರೊಸ್ (George Soros). ತಿಂಗಳ ಹಿಂದೆ ಈ ಹೆಸರು ಭಾರತದಲ್ಲಿ ಟ್ರೆಂಡಿಂಗ್ ಆಗಿತ್ತು. ಅದಾನಿ ವಿಚಾರದಲ್ಲಿ ಭಾರತದಲ್ಲಿ ನಂಬಿಕೆಯೇ ಕಳಚಿ ಬಿದ್ದಿದೆ. ಹೂಡಿಕೆದಾರರ ವಿಶ್ವಾಸ ಉಡುಗಿದೆ. ಪ್ರಧಾನಿ ಮೋದಿ ವಿದೇಶೀ ಹೂಡಿಕೆದಾರರಿಗೆ (Foreign Portfolio Investors) ಮತ್ತು ದೇಶದ ಸಂಸತ್ತಿಗೆ ಉತ್ತರ ಕೊಡಬೇಕು ಎಂದು ಜಾರ್ಜ್ ಸೊರೊಸ್ ಗುಡುಗಿದ್ದಾರೆ. ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಪುನಶ್ಚೇತನ (Democratic Revival) ಆಗಬೇಕು ಎಂದೂ ಅವರು ಜರ್ಮನಿಯ ಮ್ಯೂನಿಕ್ ನಗರದಲ್ಲಿ ಕರೆ ಕೊಟ್ಟಿದ್ದರು. ಜಾರ್ಜ್ ಸೊರೊಸ್ ವಿಶ್ವದ ಅಗ್ರ 10 ಉದ್ಯಮಿಗಳ ಪೈಕಿಯವರೂ ಅಲ್ಲ. ಆದರೂ ಬಹಳಷ್ಟು ಸಂಪತ್ತು ಹೊಂದಿರುವ ವ್ಯಕ್ತಿ. ತಮ್ಮ ಸಂಪತ್ತಿನಲ್ಲಿ ಹೆಚ್ಚಿನ ಭಾಗವನ್ನು ವಿಶ್ವಾದ್ಯಂತ ವಿವಿಧ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ವಿನಿಯೋಗಿಸುತ್ತಾರೆ. ಇವರ ಓಪನ್ ಸೊಸೈಟಿ ಫೌಂಡೇಶನ್ ಎಂಬ ಎನ್ಜಿಒ ವಿಶ್ವಾದ್ಯಂತ ಶಾಖೆಗಳನ್ನು ಹೊಂದಿದೆ. ತಮ್ಮ ಸಂಪತ್ತಿನ ಶೇ. 64 ಭಾಗದ ಹಣವನ್ನು ಈ ಎನ್ಜಿಒಗೆ ಧಾರೆ ಎರೆದಿದ್ದಾರೆ. ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆದಿದ್ದು, ಅದರ ಹಿಂದೆಯೂ ಸೊರೊಸ್ ಪಾತ್ರ ಇದೆ ಎಂದು ಮೋದಿ ಬೆಂಬಲಿಗರು ಹೇಳುತ್ತಾರೆ. ಸೊರೊಸ್ ಅವರ ಎನ್ಜಿಒ ವನ್ನು ಕೇಂದ್ರ ಕಟ್ಟಿಹಾಕಿದೆ. ಹೀಗಿರುವಾಗ ಸಿಮ್ರಾನ್ನಂಥಾ ಲೇಖಕರಿಂದ ಮತ್ತೇನು ನಿರೀಕ್ಷಿಸಬಹುದು?
ಭಾರತದ ಪಂಜಾಬ್‌ನಲ್ಲಿ ಸಿಖ್ಖರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಬಗ್ಗೆ ಗಮನ ಹರಿಸದವರಿಗೆ ಸಂಕ್ಷಿಪ್ತ ಟಿಪ್ಪಣಿ ಎಂದು ಮಾರ್ಚ್ 22ರಂದು ಸಿಮ್ರಾನ್ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. ಅದರಲ್ಲಿ ಅವರು ಈ ರೀತಿ ಹೇಳಿದ್ದಾರೆ. ಇದೀಗ, ಭಾರತವು ಪತ್ರಕರ್ತರು, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಚುನಾಯಿತ ಅಧಿಕಾರಿಗಳು ಸೇರಿದಂತೆ ವಾಕ್ ಸ್ವಾತಂತ್ರ್ಯವನ್ನು ಸೆನ್ಸಾರ್ ಮಾಡುತ್ತಿದೆ. ಭಾರತವು ಲಕ್ಷಾಂತರ ಜನರಿಗೆ ಮೊಬೈಲ್ ಇಂಟರ್ನೆಟ್ ಮತ್ತು ಪಠ್ಯವನ್ನು ಸ್ಥಗಿತಗೊಳಿಸಿದೆ ಮತ್ತು ಜನರು ಸೇರುವ ಹಕ್ಕನ್ನು ನಿರಾಕರಿಸುತ್ತಿದೆ. ಭಾರತ ನೂರಾರು ಸಿಖ್ ಕಾರ್ಯಕರ್ತರನ್ನು ಬಂಧಿಸಿದೆ. ನಾನು ಅನೇಕ ಕಾರಣಗಳಿಗಾಗಿ ಚಿಂತಿತನಾಗಿದ್ದೇನೆ. ದಬ್ಬಾಳಿಕೆ ಪ್ರಾರಂಭವಾದಾಗ ನನ್ನ ಪೋಷಕರು ಮತ್ತು ಸಹೋದರ ಅಲ್ಲಿದ್ದರು ಮತ್ತು ಅವರ ಸುರಕ್ಷತೆ ಬಗ್ಗೆ ನಾನು ಚಿಂತಿತನಾಗಿದ್ದೆ. ವಿಶೇಷವಾಗಿ ಇಂತಹ ಕ್ಷಣಗಳಲ್ಲಿ ಅವರಿಗೆ ಏನಾಗಬಹುದು ಎಂದು ಹೇಳಲು ಸಾಧ್ಯವಿಲ್ಲ.
ಕಳೆದ ಕೆಲವು ದಶಕಗಳಲ್ಲಿ ಪಂಜಾಬ್ ಸೇರಿದಂತೆ ಮಾಧ್ಯಮಗಳನ್ನು ಮುಚ್ಚುವ ಮತ್ತು ಹಿಂಸಾಚಾರವನ್ನು ಹೆಚ್ಚಿಸಿದ ಇತಿಹಾಸವನ್ನು ಭಾರತ ಹೊಂದಿರುವುದರಿಂದ ನಾನು ಸಹ ಕಳವಳಗೊಂಡಿದ್ದೇನೆ. ಭಾರತ ಸರ್ಕಾರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ತಿಳಿದಿರುವವರಿಗೆ ಮಾನವ ಹಕ್ಕುಗಳ ಉಲ್ಲಂಘನೆಯ ತಕ್ಷಣದ ಸಂಭವನೀಯತೆ ತಿಳಿದಿದೆ. ಸಾರ್ವಜನಿಕ ತಿಳುವಳಿಕೆಯ ಕೊರತೆಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇದರ ಮೇಲೆ ಬರೆಯಲಾದ ಜನಪ್ರಿಯ ಮಾಧ್ಯಮ ತುಣುಕುಗಳು ರಾಜ್ಯದ ನಿರೂಪಣೆಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏನಾಗುತ್ತಿದೆ ಎಂಬುದರ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ಭಾರತದ ಮುಂದುವರಿದ ಮಾನವ ಹಕ್ಕುಗಳ ಉಲ್ಲಂಘನೆಯು ಪ್ರಪಂಚದಾದ್ಯಂತ ಜನರಿಗೆ ಕಳವಳಕಾರಿಯಾಗಿದೆ.
ಪಂಜಾಬ್‌ನಲ್ಲಿ ಏನಾಗುತ್ತಿದೆ ಎಂಬುದು ರಾಷ್ಟ್ರಗಳು ತಮ್ಮ ದೌರ್ಜನ್ಯಗಳಿಗೆ ಹೊಣೆಗಾರರಾಗದಿದ್ದಾಗ ಏನಾಗಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಏನಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ ಇಲ್ಲಿ ಸಮುದಾಯಗಳು ಮತ್ತು ಸಮಾಜಗಳು ಹೆಚ್ಚು ದುರ್ಬಲವಾಗಿರುವಂತಹ ಕ್ಷಣಗಳು ಎಂದು ಹೇಳಬಹುದು.ಮೂಲಭೂತ ಮಾನವ ಹಕ್ಕುಗಳನ್ನು ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಾದ ಸ್ಪಷ್ಟತೆ ಮತ್ತು ತುರ್ತುಸ್ಥಿತಿಯೊಂದಿಗೆ ಏನಾಗುತ್ತಿದೆ ಎಂಬುದನ್ನು ನಾವು ನೋಡುವುದು ನಿರ್ಣಾಯಕವಾಗಿದೆ.
ಒಟ್ಟಿನಲ್ಲಿ ಲೇಖನ ಮತ್ತು ಲೇಖಕರ ನಿಲುವುಗಳನ್ನು ನೋಡಿದಾಗ ಪ್ರಸ್ತುತ ದೇಶದಲ್ಲಿ ಸಂಭವಿಸುತ್ತಿರುವ ವಿದ್ಯಮಾನಗಳನ್ನು ದೂರದೇಶದಲ್ಲಿ ಕುಳಿತು ತಮ್ಮ ಮನಸ್ಸಿಗೆ ತೋಚಿದ್ದನ್ನು ಗೀಚುವ ಮೂಲಕ ದೇಶದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಸ್ಪಷ್ಟವಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:28 pm, Fri, 31 March 23