George Soros: ಮೋದಿಗೆ ಶಾಪ ಹಾಕುವ ಈ ಸೊರೊಸ್ ಯಾರು?

Adani Group Modi Controversy: ಜಾರ್ಜ್ ಸೊರೊಸ್​ಗೆ ವ್ಯವಹಾರಕ್ಕಿಂತ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಯತ್ತ ಹೆಚ್ಚು ಆಸಕ್ತಿ ಇದೆ. ಇವರು ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿವೆ. ಪ್ರಗತಿಪರ ಮತ್ತು ಉದಾರ ರಾಜಕೀಯ ವರ್ಗಕ್ಕೆ ಇವರ ಬೆಂಬಲ ಇದೆ.

George Soros: ಮೋದಿಗೆ ಶಾಪ ಹಾಕುವ ಈ ಸೊರೊಸ್ ಯಾರು?
ಜಾರ್ಜ್ ಸೊರೊಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 17, 2023 | 6:44 PM

ಅಮೆರಿಕದ ಶ್ರೀಮಂತ ಉದ್ಯಮಿ ಜಾರ್ಜ್ ಸೊರೊಸ್ (George Soros) ಹೆಸರು ಈಗ ಭಾರತದಲ್ಲಿ ಟ್ರೆಂಡಿಂಗ್​ಗೆ ಬಂದಿದೆ. ಅದಾನಿ ವಿಚಾರದಲ್ಲಿ ಭಾರತದಲ್ಲಿ ನಂಬಿಕೆಯೇ ಕಳಚಿ ಬಿದ್ದಿದೆ. ಹೂಡಿಕೆದಾರರ ವಿಶ್ವಾಸ ಉಡುಗಿದೆ. ಪ್ರಧಾನಿ ಮೋದಿ ವಿದೇಶೀ ಹೂಡಿಕೆದಾರರಿಗೆ (Foreign Portfolio Investors) ಮತ್ತು ದೇಶದ ಸಂಸತ್ತಿಗೆ ಉತ್ತರ ಕೊಡಬೇಕು ಎಂದು ಜಾರ್ಜ್ ಸೊರೊಸ್ ಗುಡುಗಿದ್ದಾರೆ. ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆಯ ಪುನಶ್ಚೇತನ (Democratic Revival) ಆಗಬೇಕು ಎಂದೂ ಅವರು ಜರ್ಮನಿಯ ಮ್ಯೂನಿಕ್ ನಗರದಲ್ಲಿ ಕರೆ ಕೊಟ್ಟಿದ್ದಾರೆ.

ಜಾರ್ಜ್ ಸೊರೊಸ್​ನ ಈ ಹೇಳಿಕೆ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಸಿಡಿಗುಟ್ಟಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರೂ ಧ್ವನಿಗೂಡಿಸಿದ್ದಾರೆ. ಅದಾನಿ ಹಗರಣದಿಂದ ಭಾರತದಲ್ಲಿ ಪ್ರಜಾತಂತ್ರೀಯ ಪುನಶ್ಚೇತನ ಆಗುವುದಿದ್ದರೆ ಅದು ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಮತ್ತು ನಮ್ಮ ಚುನಾವಣಾ ವ್ಯವಸ್ಥೆ ಮೂಲಕವೇ ಆಗಬೇಕು. ಜಾರ್ಜ್ ಸೊರೊಸ್​ಗೆ ಇಲ್ಲೇನೂ ಕೆಲಸ ಇಲ್ಲ. ಸೊರೊಸ್​ನಂಥ ಜನರು ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಮೂಗು ತೂರಿಸಲು ಅವಕಾಶ ಇಲ್ಲ ಎಂಬರ್ಥದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಇಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡರು ಜಾರ್ಜ್ ಸೊರೊಸ್ ವಿರುದ್ಧ ಹೇಳಿಕೆ ನೀಡಿದ್ದಾರಾದರೂ ಸೊರೊಸ್​ಗೆ ಸೇರಿದ ಎನ್​ಜಿಒ ಓಪನ್ ಸೊಸೈಟಿ ಫೌಂಡೇಶನ್​ನ (Open Society Foundation) ಉಪಾಧ್ಯಕ್ಷ ಸಲೀಲ್ ಶೆಟ್ಟಿ ಎಂಬುವವರು ಕೆಲ ತಿಂಗಳ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತೊಡಗಿದೆ.

ಯಾರು ಈ ಜಾರ್ಜ್ ಸೊರೊಸ್?

ಜಾರ್ಜ್ ಸೊರೊಸ್ ಎಂಬ ಉದ್ಯಮಿಯ ಮಾತುಗಳಿಗೆ ಯಾಕೆ ಇಷ್ಟು ಮಹತ್ವ ಸಿಗುತ್ತಿದೆ ಎನಿಸಬಹುದು. ಜಾರ್ಜ್ ಸೊರೊಸ್ ವಿಶ್ವದ ಅಗ್ರ 10 ಉದ್ಯಮಿಗಳ ಪೈಕಿಯವರೂ ಅಲ್ಲ. ಆದರೂ ಬಹಳಷ್ಟು ಸಂಪತ್ತು ಹೊಂದಿರುವ ವ್ಯಕ್ತಿ. ತಮ್ಮ ಸಂಪತ್ತಿನಲ್ಲಿ ಹೆಚ್ಚಿನ ಭಾಗವನ್ನು ವಿಶ್ವಾದ್ಯಂತ ವಿವಿಧ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ವಿನಿಯೋಗಿಸುತ್ತಾರೆ. ಇವರ ಓಪನ್ ಸೊಸೈಟಿ ಫೌಂಡೇಶನ್ ಎಂಬ ಎನ್​ಜಿಒ ವಿಶ್ವಾದ್ಯಂತ ಶಾಖೆಗಳನ್ನು ಹೊಂದಿದೆ. ತಮ್ಮ ಸಂಪತ್ತಿನ ಶೇ. 64 ಭಾಗದ ಹಣವನ್ನು ಈ ಎನ್​ಜಿಒಗೆ ಧಾರೆ ಎರೆದಿದ್ದಾರೆ.

ಇದನ್ನೂ ಓದಿ: Adani Row: ಅದಾನಿಯಿಂದ ಭಾರತದ ಹೂಡಿಕೆಗೆ ಘಾಸಿ ಎಂದಿದ್ದ ಜಾರ್ಜ್​ ಸೊರಸ್​ಗೆ ಖಡಕ್ ಉತ್ತರ ಕೊಟ್ಟ ಸಚಿವೆ ಸ್ಮೃತಿ ಇರಾನಿ

92 ವರ್ಷದ ಜಾರ್ಜ್ ಸೊರೊಸ್ ಅವರ ಈಗಿನ ಸಂಪತ್ತು 8.6 ಬಿಲಿಯನ್ ಡಾಲರ್ ಇದೆ. ಅದಾನಿ, ಅಂಬಾನಿ ಮೊದಲಾದವರಿಗೆ ಹೋಲಿಸಿದರೆ ಇದು ತೀರಾ ಅಲ್ಪ. ಆದರೆ, 32 ಬಿಲಿಯನ್ ಡಾಲರ್​ನಷ್ಟು ಹಣವನ್ನು ಇವರು ತಮ್ಮ ಎನ್​ಜಿಒಗಳಿಗೆ ಕೊಟ್ಟಿರುವುದು ಗಮನಾರ್ಹ.

ಸೊರೊಸ್ ವ್ಯವಹಾರವೇನು?

ಜಾರ್ಜ್ ಸೊರೊಸ್ ತಮ್ಮ ಹೆಚ್ಚಿನ ಸಂಪಾದನೆಯನ್ನು ಹೆಡ್ಜ್ ಫಂಡ್ ಕಂಪನಿ (Hedge Fund Company) ಮೂಲಕ ಮಾಡಿದ್ದಾರೆ. ಹೆಡ್ಜ್ ಫಂಡ್ ಎಂಬುದು ಖಾಸಗಿ ಹೂಡಿಕೆದಾರರ ಸಂಯೋಜನೆಯಾಗಿದೆ. ಇದರಲ್ಲಿನ ಹೂಡಿಕೆದಾರರ ಹಣವನ್ನು ವೃತ್ತಿಪರ ಫಂಡ್ ಮ್ಯಾನೇಜರ್​ಗಳು ನಿರ್ವಹಿಸುತ್ತಾರೆ. ಭಾರೀ ಶ್ರೀಮಂತ ವ್ಯಕ್ತಿಗಳನ್ನು ಹೂಡಿಕೆದಾರರಾಗಿ ಪಡೆಯಲಾಗುತ್ತದೆ. ಮಾಮೂಲಿಯ ಫಂಡ್​ಗಳು ಕೊಡುವ ರಿಟರ್ನ್​ಗಿಂತಲೂ ಬಹಳ ಹೆಚ್ಚು ರಿಟರ್ನ್ ಅನ್ನು ಈ ಹೆಡ್ಜ್ ಫಂಡ್​ಗಳು ತರಬಲ್ಲುವು. ಇಂಥ ಒಂದು ಹೆಡ್ಜ್ ಫಂಡ್ ಮೂಲಕ ಜಅರ್ಜ್ ಸೊರೋಸ್ ತಮ್ಮ ಹೆಚ್ಚಿನ ಸಂಪಾದನೆ ಗಳಿಸಿರುವುದು.

ಹಂಗೆರಿಯ ಯಹೂದಿ

ಯಹೂದಿ ಜನಾಂಗದ ಜಾರ್ಜ್ ಸೊರೊಸ್ ಹುಟ್ಟಿದ್ದು ಈಗಿನ ಹಂಗೆರಿಯ ಬುಡಾಪೆಸ್ಟ್​ನಲ್ಲಿ. ಹಂಗೆರಿಯ ಮೇಲೆ ನಾಜಿ ಆಕ್ರಮಣ ಮಾಡಿದ ಬಳಿಕ ಇವರು ತಪ್ಪಿಸಿಕೊಂಡು ಬ್ರಿಟನ್​ಗೆ ಹೋದರು. ಹೆಡ್ಜ್ ಫಂಡ್ ಆರಂಭಿಸುವ ಮುನ್ನ ಅವರು ವಿವಿಧ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದರು. ಷೇರುಪೇಟೆಯ ಆಳ ಅಗಲ ಚೆನ್ನಾಗಿ ಬಲ್ಲವರು ಅವರು. ಷೇರುಪೇಟೆ ಏರಬಹುದು, ಅಥವಾ ಇಳಿಯಬಹುದು ಎಂದು ಇವರು ಮಾಡುವ ಅಂದಾಜುಗಳಿಗೆ ಬಹಳ ಜನರು ಬೆಲೆ ಕೊಡುತ್ತಾರೆ. ಇಂಥ ಹಲವು ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಈಗ ಇವೆ. ಸೊರೊಸ್ ಯಾಕೆ ವಿವಾದಾತ್ಮಕ ಎನಿಸಿದ್ದಾರೆ ಎಂಬುದಕ್ಕೆ ಅವರ ಪೊಲಿಟಿಕಲ್ ಫಂಡಿಂಗ್​ನತ್ತ ಬೊಟ್ಟು ಮಾಡಬಹುದು.

ರಾಜಕೀಯ ಆಟ

ಜಾರ್ಜ್ ಸೊರೊಸ್​ಗೆ ವ್ಯವಹಾರಕ್ಕಿಂತ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಯತ್ತ ಹೆಚ್ಚು ಆಸಕ್ತಿ ಇದೆ. ಇವರು ಸ್ಥಾಪಿಸಿದ ಓಪನ್ ಸೊಸೈಟಿ ಫೌಂಡೇಶನ್ 70ಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿವೆ. ಪ್ರಗತಿಪರ ಮತ್ತು ಉದಾರ ರಾಜಕೀಯ ವರ್ಗಕ್ಕೆ ಇವರ ಬೆಂಬಲ ಇದೆ. ಅಮೆರಿಕದಲ್ಲಿ ಜಾರ್ಜ್ ಒಬಾಮ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾಗ ಅವರ ಡೆಮಾಕ್ರಟಿಕ್ ಪಕ್ಷಕ್ಕೆ ಸೊರೊಸ್ ಫಂಡಿಂಗ್ ಮಾಡಿದ್ದರು. ಡೊನಾಲ್ಡ್ ಟ್ರಂಪ್ ಅವರನ್ನು ಬಹಿರಂಗವಾಗಿಯೇ ವಿರೋಧ ಮಾಡಿದ್ದಾರೆ.

ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಬೀಳಿಸಲು ಪಿತೂರಿ ನಡೆದಿದ್ದು, ಅದರ ಹಿಂದೆಯೂ ಸೊರೊಸ್ ಪಾತ್ರ ಇದೆ ಎಂದು ಮೋದಿ ಬೆಂಬಲಿಗರು ಹೇಳುತ್ತಾರೆ. ಸೊರೊಸ್ ಅವರ ಎನ್​ಜಿಒ ವನ್ನು ಕೇಂದ್ರ ಕಟ್ಟಿಹಾಕಿದೆ. ಹೀಗಾಗಿ, ಜಾರ್ಜ್ ಸೊರೊಸ್ ವ್ಯಗ್ರಗೊಂಡು ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ ಎಂಬ ವಾದ ಮುಂದಿಡಲಾಗುತ್ತಿದೆ.

Published On - 6:44 pm, Fri, 17 February 23