ಕೆನಡಾದ ಬೃಹತ್ ಬೀದಿ ಉತ್ಸವದಲ್ಲಿ ರಕ್ತಪಾತ: ಮನಬಂದಂತೆ ಗುಂಡು ಹಾರಿಸಿದ ದುಷ್ಕರ್ಮಿ, ಇಬ್ಬರು ಸಾವು, ಹಲವರಿಗೆ ಗಾಯ
ಕೆನಡಾದ ಟೊರೊಂಟೊದಲ್ಲಿ ನಡೆದ ಜನಪ್ರಿಯ 'ಸಾಲ್ಸಾ ಆನ್ ಸೇಂಟ್ ಕ್ಲೇರ್' ಬೀದಿ ಉತ್ಸವದಲ್ಲಿ ಭೀಕರ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಕೆನಡಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸಾಮೂಹಿಕ ಗುಂಡಿನ ದಾಳಿಗಳ ಬಗ್ಗೆ ವ್ಯಾಪಕ ಆತಂಕ ವ್ಯಕ್ತವಾಗಿದೆ.

ಟೊರೊಂಟೊ, ಜುಲೈ 12: ಕೆನಡಾದ ಅತ್ಯಂತ ಜನಪ್ರಿಯ ಮತ್ತು ಬೃಹತ್ ಲ್ಯಾಟಿನ್ ಸಂಸ್ಕೃತಿಯ ಬೀದಿ ಉತ್ಸವದಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿ(Mass Shooting) ನಡೆದಿದೆ. ಟೊರೊಂಟೊ ನಗರದ ಮಿಡ್‌ಟೌನ್‌ನಲ್ಲಿ ನಡೆಯುತ್ತಿದ್ದ ವಾರ್ಷಿಕ ‘ಸಾಲ್ಸಾ ಆನ್ ಸೇಂಟ್ ಕ್ಲೇರ್’ಉತ್ಸವದ ವೇಳೆ ದುಷ್ಕರ್ಮಿಯೊಬ್ಬ ಮನಬಂದಂತೆ ಗುಂಡಿನ ಮಳೆಗರೆದಿದ್ದಾನೆ. ಇಬ್ಬರು ಸ್ಥಳದಲ್ಲೇ ಬಲಿಯಾಗಿದ್ದು, ಕನಿಷ್ಠ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ಸ್ಥಳೀಯ ಸಮಯ ಸುಮಾರು 8.12 ರ ವೇಳೆಗೆ, ಇಡೀ ಉತ್ಸವ ಜನದಟ್ಟಣೆಯಿಂದ ಕೂಡಿದ್ದಾಗ ಈ ಕ್ರೂರ ಘಟನೆ ನಡೆದಿದೆ.
ಸಡಗರದ ನಡುವೆ ಕೇಳಿಸಿತು ಗುಂಡಿನ ಸದ್ದು
ಕೆನಡಾದಲ್ಲಿ ಲ್ಯಾಟಿನ್ ಅಮೆರಿಕನ್ ಸಂಸ್ಕೃತಿ, ಲೈವ್ ಮ್ಯೂಸಿಕ್, ಜಗಮಗಿಸುವ ನೃತ್ಯ ಪ್ರದರ್ಶನ ಹಾಗೂ ಬಗೆಬಗೆಯ ಆಹಾರ ಮಳಿಗೆಗಳಿಗೆ ಹೆಸರುವಾಸಿಯಾದ ಈ ಸಾಲ್ಸಾ ಉತ್ಸವದ 22 ನೇ ಆವೃತ್ತಿ ಇದಾಗಿತ್ತು. ಬೇಸಿಗೆಯ ಬೆಚ್ಚಗಿನ ಸಂಜೆಯನ್ನು ಆನಂದಿಸಲು ‘ಸೇಂಟ್ ಕ್ಲೇರ್ ಅವೆನ್ಯೂ ವೆಸ್ಟ್’ ರಸ್ತೆಯ ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳ ಮುಂದೆ ಸಾವಿರಾರು ಜನ ಜಮಾಯಿಸಿದ್ದರು.
ಈ ಹರ್ಷೋಲ್ಲಾಸದ ನಡುವೆ ಹಠಾತ್ತಾಗಿ ಬಂದ ಬಂದೂಕುಧಾರಿಯೊಬ್ಬ ಸಾರ್ವಜನಿಕರ ಮೇಲೆ ಸರಣಿ ಗುಂಡಿನ ದಾಳಿ ನಡೆಸಿದ್ದಾನೆ. ಟೊರೊಂಟೊ ಪೊಲೀಸರು ಇದನ್ನು ‘ಸಕ್ರಿಯ ಗುಂಡಿನ ದಾಳಿ’ ಎಂದು ಘೋಷಿಸಿ, ತಕ್ಷಣವೇ ಇಡೀ ಪ್ರದೇಶವನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು.
ಮತ್ತಷ್ಟು ಓದಿ: Video: ಸಿಡ್ನಿಯ ಬೊಂಡಿ ಬೀಚ್ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸ್ಥಳದಲ್ಲೇ ಬಿದ್ದವು ಎರಡು ಹೆಣಗಳು
ಪೊಲೀಸ್ ಅಧಿಕಾರಿಗಳು ಮತ್ತು ತುರ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದಾಗ ಒಟ್ಟು ಆರು ಜನರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವರಲ್ಲಿ ಇಬ್ಬರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಉಳಿದ ನಾಲ್ಕು ಮಂದಿ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯ ಬಗ್ಗೆ ಪೊಲೀಸರು ಸದ್ಯಕ್ಕೆ ಯಾವುದೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.
ವಿಡಿಯೋ
DEVELOPING: Massive police response after shooter opens fire at Salsa on St. Clair festival in Toronto, Canada; at least 2 killed pic.twitter.com/u0sX1eqb7F
— Rapid Report (@RapidReport2025) July 12, 2026
ತಲೆಮರೆಸಿಕೊಂಡ ಶೂಟರ್: ಹೈ ಅಲರ್ಟ್ ಘೋಷಣೆ
ಅತ್ಯಂತ ಆತಂಕಕಾರಿ ವಿಷಯವೆಂದರೆ, ಇಷ್ಟೊಂದು ಜನದಟ್ಟಣೆಯ ನಡುವೆ ಭೀಕರ ಕೃತ್ಯ ಎಸಗಿದ ಹಂತಕ ಅಥವಾ ಹಂತಕರು ಪೊಲೀಸರ ಕಣ್ಣು ತಪ್ಪಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಇಡೀ ಟೊರೊಂಟೊ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ತನಿಖೆ ಮುಂದುವರಿದಿದೆ.
ದಾಳಿ ನಡೆದ ಪ್ರದೇಶದಲ್ಲಿ ಭಾರಿ ಪ್ರಮಾಣದ ಸಶಸ್ತ್ರ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಘಟನಾ ಸ್ಥಳದ ಆಸುಪಾಸಿಗೆ ಬರದಂತೆ ಮತ್ತು ಸುರಕ್ಷಿತವಾಗಿ ಮನೆಗಳಲ್ಲೇ ಇರುವಂತೆ ಪೊಲೀಸರು ‘ಎಕ್ಸ್’ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ. ಈ ದಾಳಿಗೆ ನಿಖರ ಕಾರಣ ಏನೆಂಬುದು ಇನ್ನೂ ಪತ್ತೆಯಾಗಿಲ್ಲ.
ಕೆನಡಾದಲ್ಲಿ ಹೆಚ್ಚುತ್ತಿರುವ ಗನ್ ಕಲ್ಚರ್?
ಬದಲಾಗುತ್ತಿರುವ ಕೆನಡಾ: ಒಂದು ಕಾಲದಲ್ಲಿ ಅತ್ಯಂತ ಸುರಕ್ಷಿತ ಮತ್ತು ಶಾಂತಿಯುತ ದೇಶವೆಂದು ಪರಿಗಣಿಸಲ್ಪಟ್ಟಿದ್ದ ಕೆನಡಾದಲ್ಲಿ, ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ಮಾದರಿಯಲ್ಲಿ ಗ್ಯಾಂಗ್ ವಾರ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಗುಂಡಿನ ದಾಳಿ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.
ಭಾರತೀಯ ಮೂಲದವರಿಗೂ ಆತಂಕ: ಟೊರೊಂಟೊ ನಗರ ಮತ್ತು ಅದರ ಸುತ್ತಮುತ್ತಲಿನ ಮಿಡ್‌ಟೌನ್ ಪ್ರದೇಶಗಳಲ್ಲಿ ಲಕ್ಷಾಂತರ ಭಾರತೀಯ ಮೂಲದ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ನೆಲೆಸಿದ್ದಾರೆ. ಇಂತಹ ಸಾರ್ವಜನಿಕ ಸಾಂಸ್ಕೃತಿಕ ಉತ್ಸವಗಳಲ್ಲಿ ಒಮ್ಮಿಂದೊಮ್ಮೆಲೇ ನಡೆದಿರುವ ಈ ರಕ್ತಪಾತವು ಅಲ್ಲಿನ ಭಾರತೀಯ ಸಮುದಾಯದಲ್ಲೂ ಭಿನ್ನ ಭೀತಿಯನ್ನು ಹುಟ್ಟುಹಾಕಿದೆ. ಬಂದೂಕು ನಿಯಂತ್ರಣ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಅಲ್ಲಿನ ಸ್ಥಳೀಯ ಸರ್ಕಾರಗಳ ಮೇಲೆ ಸಾರ್ವಜನಿಕ ಒತ್ತಡ ಹೆಚ್ಚಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:58 am, Sun, 12 July 26




