
ವಾಷಿಂಗ್ಟನ್, ಜೂನ್ 02: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಮಹತ್ವದ ರಾಜತಾಂತ್ರಿಕ ಯಶಸ್ಸು ಸಿಕ್ಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೀವ್ರ ಪ್ರಯತ್ನಗಳ ಫಲವಾಗಿ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಸಂಘಟನೆಗಳು ಪರಸ್ಪರ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿವೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸರಣಿ ಮಿಲಿಟರಿ ದಾಳಿಗಳು ಮತ್ತು ನಾಗರಿಕ ಸಾವುನೋವುಗಳ ಕುರಿತು ಅಮೆರಿಕದ ಅಧಿಕಾರಿಗಳು ಆರಂಭದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇಸ್ರೇಲ್ ಕ್ರಮಗಳು ಇರಾನ್ ಜೊತೆಗಿನ ಅಮೆರಿಕದ ಮಾತುಕತೆಗಳಿಗೆ ಅಡ್ಡಿಪಡಿಸುತ್ತವೆ ಎಂದು ಟ್ರಂಪ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಆರಂಭದಲ್ಲಿ ಅತ್ಯಂತ ಕಠಿಣ ಮಾತುಕತೆ ನಡೆಸಿದ್ದರು ಎನ್ನಲಾಗಿತ್ತು. ಆದರೆ, ಈ ಎಲ್ಲಾ ಉದ್ವಿಗ್ನತೆಗಳಿಗೆ ಟ್ರಂಪ್ ಈಗ ಸೌಹಾರ್ದಯುತ ತೆರೆ ಎಳೆದಿದ್ದಾರೆ.
ಟ್ರಂಪ್ ಸಂಧಾನದ ಪ್ರಮುಖ ಅಂಶಗಳು
ಇಸ್ರೇಲ್ ಸೇನೆ ವಾಪಸ್: ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಅತ್ಯಂತ ಯಶಸ್ವಿ ಮಾತುಕತೆ ನಡೆಸಲಾಗಿದ್ದು, ಇಸ್ರೇಲ್ ಇನ್ನು ಮುಂದೆ ಬೈರುತ್‌ಗೆ ಯಾವುದೇ ಸೈನಿಕರನ್ನು ಕಳುಹಿಸುವುದಿಲ್ಲ ಮತ್ತು ಈಗಾಗಲೇ ಹೊರಟಿದ್ದ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಟ್ರಂಪ್ ದೃಢಪಡಿಸಿದ್ದಾರೆ.
ಹಿಜ್ಬುಲ್ಲಾ ಒಪ್ಪಿಗೆ: ಉನ್ನತ ಪ್ರತಿನಿಧಿಗಳ ಮೂಲಕ ಹಿಜ್ಬುಲ್ಲಾ ಸಂಘಟನೆಯೊಂದಿಗೂ ಉತ್ತಮ ಸಂಪರ್ಕ ಸಾಧಿಸಲಾಗಿದ್ದು, ಅವರು ಇನ್ಮುಂದೆ ಇಸ್ರೇಲ್ ಮೇಲೆ ಯಾವುದೇ ರೀತಿಯ ಶೂಟಿಂಗ್ ಮಾಡದೆ ಸಂಪೂರ್ಣ ಕದನ ವಿರಾಮ ಪಾಲಿಸಲು ಒಪ್ಪಿಕೊಂಡಿದ್ದಾರೆ.
ಮತ್ತಷ್ಟು ಓದಿ: ಇರಾನ್ ಮೇಲೆ ಮತ್ತೆ ಅಮೆರಿಕದ ‘ಆತ್ಮರಕ್ಷಣಾ ದಾಳಿ’: ಸೈನಿಕರು ಸುರಕ್ಷಿತ
ಡೊನಾಲ್ಡ್ ಟ್ರಂಪ್ ಹೇಳಿಕೆ: ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೆ ನಾನು ಬಹಳ ಫಲಪ್ರದವಾದ ಮಾತುಕತೆ ನಡೆಸಿದ್ದೇನೆ. ಇಸ್ರೇಲ್ ಇನ್ನು ಹಿಜ್ಬುಲ್ಲಾ ಮೇಲೆ ದಾಳಿ ಮಾಡುವುದಿಲ್ಲ ಮತ್ತು ಹಿಜ್ಬುಲ್ಲಾ ಕೂಡ ಇಸ್ರೇಲ್ ಮೇಲೆ ದಾಳಿ ನಡೆಸುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಮಹತ್ವದ ಬೆಳವಣಿಗೆಯಿಂದಾಗಿ ಲೆಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಬಿಕ್ಕಟ್ಟು ಶಮನಗೊಂಡಿದ್ದು, ಪ್ರಾದೇಶಿಕ ಶಾಂತಿ ಪುನಃಸ್ಥಾಪನೆಯಾಗುವ ನಿರೀಕ್ಷೆ ಮೂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ