ಫ್ಲೈದುಬೈ ದಾಳಿಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಭೀಕರ ದಾಳಿ ಹಾಗೂ ವಿಮಾನ ಪತನಗೊಳಿಸುವ ಪ್ರಯತ್ನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರ ಇಂದು ಅಧಿಕೃತವಾಗಿ 'ಭಯೋತ್ಪಾದನಾ ಕೃತ್ಯ' ಎಂದು ಘೋಷಿಸಿದೆ. ಈ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ ಮಾರನೇ ದಿನವೇ ಯುಎಇ ಸರ್ಕಾರ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. ಹಾಗೇ, ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರನ್ನು ಹೀರೋ ಎಂದು ಯುಎಇ ಬಣ್ಣಿಸಿದೆ.

ಫ್ಲೈದುಬೈ ದಾಳಿಯನ್ನು ಭಯೋತ್ಪಾದನಾ ಕೃತ್ಯ ಎಂದು ಘೋಷಿಸಿದ ಯುಎಇ; ಸ್ಮಿತ್ ಮಚ್ಚರ್ ಸಾಹಸಕ್ಕೆ ವಿಶ್ವಾದ್ಯಂತ ಪ್ರಶಂಸೆ
ಫ್ಲೈದುಬೈ
Image Credit source: AP

Updated on: Oct 02, 2026 | 7:25 PM

ದುಬೈ, ಅಕ್ಟೋಬರ್ 2: ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿ ಮತ್ತು ವಿಮಾನ ಪತನಗೊಳಿಸುವ ಯತ್ನವನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸರ್ಕಾರವು ಅಧಿಕೃತವಾಗಿ ‘ಭಯೋತ್ಪಾದನಾ ಕೃತ್ಯ’ ಎಂದು ಘೋಷಿಸಿದೆ. ಈ ಘಟನೆಯ ಹಿಂದೆ ಇರುವ ಉಗ್ರ ಸಂಚು ಹಾಗೂ ಮೂಲ ಉದ್ದೇಶದ ಕುರಿತು ತನಿಖೆ ತೀವ್ರಗೊಂಡಿದೆ.

ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಹಿರಿಯ ರಾಜಕೀಯ ಸಲಹೆಗಾರ ಅನ್ವರ್ ಗರ್ಗಾಶ್ ಈ ಕುರಿತು ಮಾಹಿತಿ ನೀಡಿದ್ದು, ತಮ್ಮ ಪ್ರಾಣ ಪಣಕ್ಕಿಟ್ಟು 174 ಪ್ರಯಾಣಿಕರ ಜೀವ ರಕ್ಷಿಸಿದ ಭಾರತದ ಸಾಹಸಿ ಕಮಾಂಡರ್ ಕ್ಯಾಪ್ಟನ್ ಸ್ಮಿತ್ ಮಚ್ಚರ್  ಅವರ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಅರೇಬಿಕ್ ಭಾಷೆಯಲ್ಲಿ ಪೋಸ್ಟ್ ಮಾಡಿರುವ ಅನ್ವರ್ ಗರ್ಗಾಶ್, ಕ್ಯಾಪ್ಟನ್ ಸ್ಮಿತ್ ಅವರನ್ನು ಒಬ್ಬ ‘ನಿಜವಾದ ರಿಯಲ್ ಹೀರೋ’ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಬಿಡದ ಸಂಕಲ್ಪ: ನೂರಾರು ಜನರ ಪ್ರಾಣ ಉಳಿಸಿದ ಪೈಲಟ್‌ ಸ್ಮಿತ್​ಗೆ ಅಷ್ಟು ಧೈರ್ಯ ಬಂದಿದ್ಹೇಗೆ? ಮೋದಿ ಬಳಿ ಹೇಳಿದ್ದೇನು?

“ಫ್ಲೈದುಬೈ ವಿಮಾನಯಾನ ಸಂಸ್ಥೆಯ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಪ್ರತಿಯೊಂದು ಹಂತದಲ್ಲೂ ಅತ್ಯುನ್ನತ ಗೌರವ ಮತ್ತು ಪ್ರಶಂಸೆಗೆ ಅರ್ಹರು. ಅಪಾಯಕಾರಿ ಭಯೋತ್ಪಾದನಾ ಕೃತ್ಯ ಮತ್ತು ಸಂಭವನೀಯ ಭೀಕರ ವಿಮಾನ ದುರಂತವನ್ನು ಎದುರಿಸುವಲ್ಲಿ ಅವರು ಧೈರ್ಯ ಮತ್ತು ಜವಾಬ್ದಾರಿಯ ನೈಜ ಅರ್ಥವನ್ನು ಜಗತ್ತಿಗೆ ತೋರಿಸಿದ್ದಾರೆ” ಎಂದಿದ್ದಾರೆ. “ಅತ್ಯಂತ ಕಠಿಣ ಹಾಗೂ ಕತ್ತಲೆಯ ಸನ್ನಿವೇಶದಲ್ಲೂ ಅವರು ಪ್ರದರ್ಶಿಸಿದ ವೃತ್ತಿಪರತೆ ಅವರನ್ನು ಒಬ್ಬ ನಿಜವಾದ ಹೀರೋ ಆಗಿಸಿದೆ” ಎಂದು ಅವರು ಕೊಂಡಾಡಿದ್ದಾರೆ.

ಈ ಭೀಕರ ಘಟನೆಯ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಿ ಯುಎಇ ಸರ್ಕಾರ ತನಿಖೆ ಆರಂಭಿಸಿದೆ. ಯುಎಇ ಧ್ವಜವನ್ನು ಹೊಂದಿರುವ ವಿಮಾನದಲ್ಲಿ ಈ ಅಪರಾಧ ನಡೆದಿರುವುದರಿಂದ, ಯುಎಇ ಕಾನೂನುಗಳ ಅಡಿಯಲ್ಲಿ ತನಿಖೆ ನಡೆಸಲು ತಮಗೆ ಸಂಪೂರ್ಣ ಕಾನೂನು ವ್ಯಾಪ್ತಿ ಇದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಫ್ಲೈದುಬೈ ಸಾಹಸಿ ಭಾರತೀಯ ಪೈಲಟ್‌ ಸ್ಮಿತ್ ಮಚ್ಛಾರ್‌ಗೆ ರಾಜ್ಯ ಪ್ರಶಸ್ತಿ ಘೋಷಿಸಿದ ಗುಜರಾತ್ ಸರ್ಕಾರ

174 ಜನರಿದ್ದ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಓಮನ್ ಮೂಲದ ಕೋ-ಪೈಲಟ್‌ನ ಮೂಲ ದುರುದ್ದೇಶ ಹಾಗೂ ಪ್ರೇರಣೆ ಏನು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಮಾನವು ಸೌದಿ ಅರೇಬಿಯಾದ ‘ತಬುಕ್’ ವಿಮಾನ ನಿಲುವಾಣದಲ್ಲಿ ತುರ್ತು ಲ್ಯಾಂಡಿಂಗ್ ಆಗಿದ್ದರಿಂದ, ಪ್ರಸ್ತುತ ಗುರುತು ಬಹಿರಂಗಪಡಿಸದ ಆ ದಾಳಿಕೋರ ಸೌದಿ ಪೊಲೀಸರ ವಶದಲ್ಲಿದ್ದಾನೆ. ತನಿಖೆಗೆ ನೆರವಾಗಲು ಇಸ್ರೇಲಿನ ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ಇಸ್ರೇಲ್ ಮತ್ತು ಸೌದಿ ಅರೇಬಿಯಾ ನಡುವೆ ಅಧಿಕೃತ ರಾಜತಾಂತ್ರಿಕ ಬಾಂಧವ್ಯವಿಲ್ಲದಿದ್ದರೂ, ಭದ್ರತಾ ಹಿತದೃಷ್ಟಿಯಿಂದ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅಕ್ಟೋಬರ್ 7ರ ಹಮಾಸ್ ದಾಳಿಯ ವಾರ್ಷಿಕೋತ್ಸವಕ್ಕೆ ಕೇವಲ ಒಂದು ವಾರ ಬಾಕಿ ಇರುವಾಗ ಈ ಘಟನೆ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us