ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕದಿಂದ ವಾಯು ದಾಳಿ, ಹೊಸ ಯುದ್ಧಕ್ಕೆ ನಾಂದಿ ಹಾಡಿದರೇ ಟ್ರಂಪ್?

ಅಮೆರಿಕ ಸಿರಿಯಾದಲ್ಲಿರುವ 70 ಐಸಿಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ. ಸಿರಿಯಾದ ಪಾಲ್ಮಿರಾ ಬಳಿ ಅಮೆರಿಕದ ಸೈನಿಕರ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ದಾಳಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಕೋರರನ್ನು ನಿರ್ಮೂಲನೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದು ಹೊಸ ಯುದ್ಧವಲ್ಲ, ಬದಲಾಗಿ ಸೈನಿಕರ ಸಾವಿಗೆ ನೀಡಿದ ತೀಕ್ಷ್ಣ ಪ್ರತಿಕ್ರಿಯೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಸಿರಿಯಾದ ಐಸಿಸ್ ನೆಲೆಗಳ ಮೇಲೆ ಅಮೆರಿಕದಿಂದ ವಾಯು ದಾಳಿ, ಹೊಸ ಯುದ್ಧಕ್ಕೆ ನಾಂದಿ ಹಾಡಿದರೇ ಟ್ರಂಪ್?
ಡೊನಾಲ್ಡ್​ ಟ್ರಂಪ್
Image Credit source: Firstpost

Updated on: Dec 20, 2025 | 11:31 AM

ಸಿರಿಯಾ, ಡಿಸೆಂಬರ್ 20: ಅಮೆರಿಕ(America)ವು ಮಧ್ಯರಾತ್ರಿ ಸಿರಿಯಾದ 70 ಐಸಿಸ್ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿರಿಯಾದಲ್ಲಿ ಅಮೆರಿಕದ ಸೈನಿಕರ ಮೇಲಿನ ದಾಳಿಯ ನಂತರ ಅಮೆರಿಕವು ಈ ಪ್ರತೀಕಾರದ ಕ್ರಮವನ್ನು ಕೈಗೊಂಡಿದೆ. ಅಮೆರಿಕದ ಅಧಿಕಾರಿಗಳ ಪ್ರಕಾರ, ಕಳೆದ ವಾರ ಅಮೆರಿಕದ ಮಿಲಿಟರಿ ಸಿಬ್ಬಂದಿಯ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದರು.

ಡಿಸೆಂಬರ್ 13 ರಂದು ಮಧ್ಯ ಸಿರಿಯಾದ ಪಾಲ್ಮಿರಾ ಪ್ರದೇಶದಲ್ಲಿ ಅಮೆರಿಕ ಮತ್ತು ಮಿತ್ರ ಪಡೆಗಳ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಾಚರಣೆಯಡಿಯಲ್ಲಿ, 70 ಕ್ಕೂ ಹೆಚ್ಚು ಐಸಿಸ್ ಭಯೋತ್ಪಾದಕ ನೆಲೆಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ನೇರವಾಗಿ ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ಹೆಗ್ಸೆತ್ ಹೇಳಿದರು.

ಹೊಸ ಯುದ್ಧ ಹುಟ್ಟುಹಾಕಿತೇ ಅಮೆರಿಕ?
ಇದು ಹೊಸ ಯುದ್ಧದ ಆರಂಭವಲ್ಲ, ಬದಲಾಗಿ ಅಮೆರಿಕದ ಸೈನಿಕರ ಮೇಲಿನ ದಾಳಿಗೆ ಪ್ರತೀಕಾರ ಎಂದು ಹೆಗ್ಸತ್ ಸ್ಪಷ್ಟವಾಗಿ ಹೇಳಿದ್ದಾರೆ. ವಿಶ್ವದ ಎಲ್ಲಿಯಾದರೂ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ದಾಳಿಕೋರರನ್ನು ಬೇಟೆಯಾಡಿ ನಿರ್ಮೂಲನೆ ಮಾಡುತ್ತದೆ ಎಂದು ಹೆಗ್ಸೆತ್ ಎಚ್ಚರಿಸಿದ್ದಾರೆ. ಅವರ ಪ್ರಕಾರ, ಯುಎಸ್ ಮಿಲಿಟರಿ ತನ್ನ ಶತ್ರುಗಳನ್ನು ಕೊಂದಿದೆ ಮತ್ತು ಈ ಪ್ರವೃತ್ತಿ ಮುಂದುವರಿಯುತ್ತದೆ. ಯುಎಸ್ ಅಧಿಕಾರಿಗಳ ಪ್ರಕಾರ, ಮಧ್ಯ ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಲಾಯಿತು.

ಮತ್ತಷ್ಟು ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

ಅಮೆರಿಕ ಏಕೆ ಕೋಪಗೊಂಡಿದೆ?
ಕಳೆದ ಶನಿವಾರ, ಮಧ್ಯ ಸಿರಿಯಾದ ಪಾಲ್ಮಿರಾ ನಗರದಲ್ಲಿ ಒಂದು ಪ್ರಮುಖ ದಾಳಿ ನಡೆದಿತ್ತು. ಇಬ್ಬರು ಅಮೆರಿಕ ಸೈನಿಕರು ಮತ್ತು ಸ್ಥಳೀಯ ಭಾಷಾಂತರಕಾರ ಸಾವನ್ನಪ್ಪಿದ್ದರು. ದಾಳಿಕೋರ ಯುಎಸ್ ಮತ್ತು ಸಿರಿಯನ್ ಪಡೆಗಳನ್ನು ಸಾಗಿಸುತ್ತಿದ್ದ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ.
ಪ್ರತೀಕಾರದ ಗುಂಡಿನ ದಾಳಿಯಲ್ಲಿ ದಾಳಿಕೋರ ಕೊಲ್ಲಲ್ಪಟ್ಟಿದ್ದ. ದಾಳಿಯಲ್ಲಿ ಇತರ ಮೂವರು ಅಮೆರಿಕ ಸೈನಿಕರು ಸಹ ಗಾಯಗೊಂಡಿದ್ದರು. ಯುಎಸ್ ಮಿಲಿಟರಿಯ ಪ್ರಕಾರ, ದಾಳಿಕೋರನು ಸಿರಿಯನ್ ಭದ್ರತಾ ಪಡೆಗಳಿಗೆ ಹೊಸದಾಗಿ ನೇಮಕಗೊಂಡ ಸದಸ್ಯನಾಗಿದ್ದು, ಐಸಿಸ್‌ನೊಂದಿಗೆ ಸಂಬಂಧ ಹೊಂದಿದ್ದಾನೆಂದು ಶಂಕಿಸಲಾಗಿದೆ.

ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ಈ ಕ್ರಮದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಬಲವಾದ ಹೇಳಿಕೆ ನೀಡಿದ್ದಾರೆ. ಸಿರಿಯಾದಲ್ಲಿ ಐಸಿಸ್ ನಿಂದ ಅಮೆರಿಕ ಸೈನಿಕರ ಕ್ರೂರ ಹತ್ಯೆಯ ನಂತರ, ಈಗ ಪ್ರತೀಕಾರ ಆರಂಭವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಹುತಾತ್ಮರಾದ ಸೈನಿಕರ ಮೃತದೇಹವನ್ನು ಪೂರ್ಣ ಮಿಲಿಟರಿ ಗೌರವಗಳೊಂದಿಗೆ ಮನೆಗೆ ಕರೆತರಲಾಗಿದೆ ಮತ್ತು ಅವರ ಗೌರವಾರ್ಥವಾಗಿ ಈ ಪ್ರತೀಕಾರದ ದಾಳಿಯನ್ನು ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸಿರಿಯಾದಲ್ಲಿರುವ ಐಸಿಸ್ ನೆಲೆಗಳ ಮೇಲೆ ಅಮೆರಿಕ ತೀವ್ರವಾಗಿ ದಾಳಿ ಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ಅವರ ಪ್ರಕಾರ, ಸಿರಿಯಾ ದೀರ್ಘಕಾಲದವರೆಗೆ ಹಿಂಸಾಚಾರ ಮತ್ತು ಸಂಘರ್ಷದಿಂದ ಹೋರಾಡುತ್ತಿದೆ. ಐಸಿಸ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದರೆ ದೇಶದ ಭವಿಷ್ಯವನ್ನು ಸುಧಾರಿಸಬಹುದು. ಸಿರಿಯನ್ ಸರ್ಕಾರವೂ ಈ ಅಭಿಯಾನವನ್ನು ಬೆಂಬಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ