ಈ ಗಂಡನ ಜತೆ ಸಂಸಾರ ಮಾಡಿದ್ದು ಸಾಕೆಂದು, ಹೊಸ ಗೆಳೆಯನ ಜತೆ ಸೇರಿ ಪತಿ ಹತ್ಯೆಗೆ ಸಂಚು, ಮಹಿಳೆಗೆ 19 ವರ್ಷ ಜೈಲು
ಗಂಡನೊಂದಿಗೆ ಸಂಸಾರ ಸಾಕಾಗಿ ಹೊಸ ಗೆಳೆಯನೊಂದಿಗೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿದ್ದ 46 ವರ್ಷದ ಮಹಿಳೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ತನ್ನ ಪ್ರೇಮಿ ಹಾಗೂ ಸಹಚರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಲು ಪ್ರಯತ್ನಿಸಿದ್ದಳು. ಆದರೆ, ನಿವೃತ್ತ ಯೋಧನಾಗಿದ್ದ ಪತಿ ದಾಳಿಕೋರರ ವಿರುದ್ಧ ಹೋರಾಡಿ ಬದುಕುಳಿದಿದ್ದಾರೆ. ಈ ಅಪರಾಧಕ್ಕಾಗಿ ಮಹಿಳೆ ಮತ್ತು ಆಕೆಯ ಪ್ರೇಮಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.

ಲಂಡನ್, ಡಿಸೆಂಬರ್ 20: ಈ ಗಂಡನ ಜತೆ ಸಂಸಾರ ಮಾಡಿದ್ದು ಸಾಕೆಂದು ಹೊಸ ಗೆಳೆಯನ ಜತೆ ಸೇರಿ ಪತಿ ಹತ್ಯೆ(Murder)ಗೆ ಸಂಚು ರೂಪಿಸಿದ್ದ ಮಹಿಳೆಗೆ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಗಾರ್ಡಿಯನ್ ಪ್ರಕಾರ, 46 ವರ್ಷದ ಮಿಚೆಲ್ ಮಿಲ್ಸ್ ಮತ್ತು ಆಕೆಯ ಪ್ರೇಮಿ ಗೆರೈಂಟ್ ಬೆರ್ರಿ ಸೇರಿ ಕ್ರಿಸ್ಟೋಫರ್ ಮಿಲ್ಸ್ ಅವರ ಕೊಲೆಗೆ ಸಂಚು ರೂಪಿಸಿದ್ದರು. ಈ ಘಟನೆ ಯುಕೆಯಲ್ಲಿ ನಡೆದಿದೆ.
ಕಳೆದ ವರ್ಷ ಸೆಪ್ಟೆಂಬರ್ 20ರಂದು ದಾಳಿಯನ್ನು ನಡೆಸಲು ಸಹಾಯ ಮಾಡಲು ಬೆರ್ರಿ ಸ್ಟೀವನ್ ಥಾಮಸ್ ಎಂಬುವವನನ್ನು ಕೂಡ ತನ್ನೊಂದಿಗೆ ಸೇರಿಸಿಕೊಂಡಿದ್ದ. ಅಕ್ಟೋಬರ್‌ನಲ್ಲಿ ಸ್ವಾನ್ಸೀ ಕ್ರೌನ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ನಂತರ ಅವರು ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ತಪ್ಪಿತಸ್ಥರೆಂದು ತೀರ್ಪು ನೀಡಲಾಗಿದೆ.
ಈ ಜೋಡಿ 2024ರಲ್ಲಿ ಪ್ರೀತಿಯಲ್ಲಿ ಬಿದ್ದಿತ್ತು, ತಮ್ಮ ಹೊಸ ಜೀವನ ಆರಂಭಿಸುವ ಹೆಬ್ಬಯಕೆಯಿಂದ ಗಂಡನನ್ನು ಕೊಲೆ ಮಾಡಲು ನಿರ್ಧರಿದ್ದಳು. ಮೂರು ತಿಂಗಳುಗಳ ಕಾಲ ಕ್ರಿಸ್ಟೋಫರ್ ಅನ್ನು ಕೊಲ್ಲುವ ವಿವಿಧ ಮಾರ್ಗಗಳ ಬಗ್ಗೆ ಚರ್ಚಿಸಿ ಪರಸ್ಪರ ಸಂದೇಶಗಳನ್ನು ಕಳುಹಿಸಿಕೊಂಡಿದ್ದರು. ಗ್ರೇವಿಗೆ ಆಂಟಿಫ್ರೀಜ್‌ನಿಂದ ವಿಷ ಹಾಕುವುದು ಅಥವಾ ದಿಂಬಿನಿಂದ ಅವನನ್ನು ಉಸಿರುಗಟ್ಟಿಸಿ ಕೊಲ್ಲುವುದು ಕೂಡಾ ಅದರಲ್ಲಿ ಸೇರಿತ್ತು.
ಮತ್ತಷ್ಟು ಓದಿ: ಬಾಡಿಗೆಗಿದ್ದ ದಂಪತಿಯಿಂದ ಮನೆ ಮಾಲೀಕರ ಹತ್ಯೆ, ಸೂಟ್ಕೇಸ್ನಲ್ಲಿ ತುಂಡು ತುಂಡಾದ ದೇಹ ಪತ್ತೆ
ದಾಳಿ ನಡೆದಿದ್ದು ಯಾವಾಗ? ಸೆಪ್ಟೆಂಬರ್ 20, 2024 ರಂದು, ಬೆರ್ರಿ ಮತ್ತು ಅವನ ಸಹಚರ ಸ್ಟೀವನ್ ಥಾಮಸ್, ಕಾರ್ಮಾರ್ಥೆನ್‌ಶೈರ್‌ನ ಸೆನಾರ್ಥ್‌ನಲ್ಲಿರುವ ಮನೆಗೆ ಮುಖವಾಡ ಧರಿಸಿ ದಾಳಿ ನಡೆಸಿದ್ದ. ಕ್ರಿಸ್ಟೋಫರ್‌ನನ್ನು ಕೊಂದು ಅವನ ಸಾವು ಆತ್ಮಹತ್ಯೆ ಎಂದು ತೋರಿಸುವುದು ಅವರ ಉದ್ದೇಶವಾಗಿತ್ತು. ದಾಳಿಕೋರರು ಬಂದೂಕುಗಳು, ಗ್ಯಾಸ್ ಮಾಸ್ಕ್‌ಗಳನ್ನು ಧರಿಸಿದ್ದರು ಮತ್ತು ಕೇಬಲ್ ಟೈಗಳನ್ನು ಹೊತ್ತಿದ್ದರು.
ನಿವೃತ್ತ ಯೋಧ ಕ್ರಿಸ್ಟೋಫರ್, ಮುಸುಕುಧಾರಿ ದಾಳಿಕೋರರ ವಿರುದ್ಧ ಹೋರಾಡಿದ್ದರು, ಮುಖಕ್ಕೆ ಹೊಡೆತ ಬಿದ್ದಿದ್ದರೂ ಅವರು ಬಂದೂಕುಗಳನ್ನು ಹಿಮ್ಮೆಟ್ಟಿಸಿದ್ದರು. ದಾಳಿಯ ನಂತರ, ಮಿಚೆಲ್ ಮಿಲ್ಸ್ 999 ಗೆ ಕರೆ ಮಾಡಿ, ತನ್ನ ಪತಿಯ ತಲೆಗೆ ಗಾಯವಾಗಿದೆ ಎಂದು ಮಾಹಿತಿ ನೀಡಿದ್ದರು.
ಶಿಕ್ಷೆ ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಮಿಚೆಲ್ ಮಿಲ್ಸ್‌ಗೆ 19 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಜೊತೆಗೆ ನ್ಯಾಯದ ಹಾದಿಯನ್ನು ತಿರುಚಿದ್ದಕ್ಕಾಗಿ 18 ತಿಂಗಳ ಏಕಕಾಲಿಕ ಶಿಕ್ಷೆಯನ್ನು ವಿಧಿಸಲಾಯಿತು. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಗೆರೈಂಟ್ ಬೆರ್ರಿ ಅವರಿಗೆ 19 ವರ್ಷಗಳ ಜೈಲು ಶಿಕ್ಷೆ ಮತ್ತು ಬಂದೂಕನ್ನು ಹೊಂದಿದ್ದಕ್ಕಾಗಿ 18 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಕೊಲೆಗೆ ಸಂಚು ರೂಪಿಸಿದ್ದಕ್ಕಾಗಿ ಸ್ಟೀವನ್ ಥಾಮಸ್ ಅವರನ್ನು ಖುಲಾಸೆಗೊಳಿಸಲಾಯಿತು ಆದರೆ ಬಂದೂಕು ಅಪರಾಧಕ್ಕಾಗಿ 12 ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




