‘ಎಐ ಸಂಪೂರ್ಣವಾಗಿ ಮಾನವ ನಿಯಂತ್ರಣದಲ್ಲೇ ಇರಬೇಕು’; ಅಮೆರಿಕದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂದೇಶ

ಅಮೆರಿಕದ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಮಾತನಾಡಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಸಂಪೂರ್ಣವಾಗಿ ಮಾನವನ ನಿಯಂತ್ರಣದಲ್ಲೇ ಬೆಳೆಯಬೇಕು ಹಾಗೂ ಅದನ್ನು ಜಾಗತಿಕ ಒಳಿತಿಗಾಗಿ ಮಾತ್ರ ಬಳಸಬೇಕು ಎಂದು ಪ್ರತಿಪಾದಿಸಿದ್ದಾರೆ. ಜಗತ್ತಿನ 2 ಅತ್ಯಂತ ಬೃಹತ್ ಆರ್ಥಿಕತೆ ಹಾಗೂ ತಂತ್ರಜ್ಞಾನ ದೈತ್ಯ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾಗಳು ಈ ತಂತ್ರಜ್ಞಾನವನ್ನು ಮಾನವಕುಲದ ಕಲ್ಯಾಣಕ್ಕಾಗಿ ಜವಾಬ್ದಾರಿಯುತವಾಗಿ ಮುನ್ನಡೆಸುವ ಸಾಮರ್ಥ್ಯ ಮತ್ತು ಜಂಟಿ ಕರ್ತವ್ಯವನ್ನು ಹೊಂದಿವೆ ಎಂದು ಜಿನ್‌ಪಿಂಗ್ ಹೇಳಿದ್ದಾರೆ.

‘ಎಐ ಸಂಪೂರ್ಣವಾಗಿ ಮಾನವ ನಿಯಂತ್ರಣದಲ್ಲೇ ಇರಬೇಕು; ಅಮೆರಿಕದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಂದೇಶ
ಅಮೆರಿಕದಲ್ಲಿ ಕ್ಸಿ ಜಿನ್‌ಪಿಂಗ್
Image Credit source: AP

Updated on: Sep 24, 2026 | 10:45 PM

ವಾಷಿಂಗ್ಟನ್, ಸೆಪ್ಟೆಂಬರ್ 24: ಅಮೆರಿಕ ಮತ್ತು ಚೀನಾ ಎರಡೂ ದೇಶಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಸಂಪೂರ್ಣವಾಗಿ ಮಾನವ ನಿಯಂತ್ರಣದಲ್ಲೇ ಬೆಳೆಯುವುದನ್ನು ಹಾಗೂ ಅದು ಮಾನವಕುಲದ ಕಲ್ಯಾಣಕ್ಕಾಗಿ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ. ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆದ ದ್ವಿಪಕ್ಷೀಯ ಶೃಂಗಸಭೆಯ ವೇಳೆ ಅವರು ಈ ಹೇಳಿಕೆ ನೀಡಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಜಿನ್‌ಪಿಂಗ್, ಅಮೆರಿಕ ಮತ್ತು ಚೀನಾ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಗಳಾಗಿದ್ದು, ಈ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಜಂಟಿ ಜವಾಬ್ದಾರಿ ಎರಡೂ ದೇಶಗಳ ಮೇಲಿದೆ ಎಂದರು.

“ಚೀನಾ ಮತ್ತು ಅಮೆರಿಕ ಎರಡೂ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಪ್ರಪಂಚದ ಮುಂಚೂಣಿ ರಾಷ್ಟ್ರಗಳಾಗಿವೆ. ಎಐ ಅನ್ನು ಒಳ್ಳೆಯ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸುವ ಮತ್ತು ನಿರ್ವಹಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ತಂತ್ರಜ್ಞಾನದ ಪ್ರತಿ ಹಂತದ ಬೆಳವಣಿಗೆಯೂ ಸಂಪೂರ್ಣವಾಗಿ ಮಾನವ ನಿಯಂತ್ರಣದಲ್ಲೇ ಇರುವುದನ್ನು ಮತ್ತು ಅದು ಜನರ ಕ್ಷೇಮಾಭಿವೃದ್ಧಿಗೆ ಮಾತ್ರ ಬಳಕೆಯಾಗಬೇಕು” ಎಂದಿದ್ದಾರೆ.

ಇದನ್ನೂ ಓದಿ: ವೈಟ್‌ಹೌಸ್‌ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ಧೂರಿ ಸ್ವಾಗತ

ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ನಿರಂತರ ಸಂವಹನ ಮತ್ತು ಸಮಾಲೋಚನೆ ನಡೆಯುವ ಅಗತ್ಯವನ್ನು ಒತ್ತುಕೊಟ್ಟು ಹೇಳಿದ ಚೀನಾ ಅಧ್ಯಕ್ಷರು, ಉಭಯ ದೇಶಗಳು ಭಿನ್ನಾಪ್ರಾಯಗಳನ್ನು ಬದಿಗಿಟ್ಟು ಸಹಮತದ ಹಾದಿ ಕಂಡುಕೊಳ್ಳಬೇಕು ಎಂದರು. ಚೀನಾದಲ್ಲಿ ಟ್ರಂಪ್ ಅವರೊಂದಿಗೆ ನಡೆದಿದ್ದ ಹಿಂದಿನ ಭೇಟಿಯನ್ನು ಸ್ಮರಿಸಿದ ಜಿನ್‌ಪಿಂಗ್, “ಅಮೆರಿಕ-ಚೀನಾ ಬಾಂಧವ್ಯದ ಈ ಬೃಹತ್ ನೌಕೆಯನ್ನು ಭವಿಷ್ಯದತ್ತ ಸುರಕ್ಷಿತವಾಗಿ ಮತ್ತು ಸ್ಥಿರವಾಗಿ ಮುನ್ನಡೆಸಲು ನಾನು ನಿಮ್ಮೊಂದಿಗೆ ಕೆಲಸ ಮಾಡಲು ಸಿದ್ಧನಿದ್ದೇನೆ” ಎಂದರು.


ಮಾನವನ ನಿಯಂತ್ರಣ ಮೀರುವ ಅಥವಾ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವ ತಂತ್ರಜ್ಞಾನಗಳು ಮಿಲಿಟರಿ ಮತ್ತು ಗಂಭೀರ ವಲಯಗಳಲ್ಲಿ ಬಳಕೆಯಾಗದಂತೆ ತಡೆಯಲು ಶಾಸನಬದ್ಧ ಚೌಕಟ್ಟು ರೂಪಿಸಲು ಚೀನಾ ಆಸಕ್ತಿ ವಹಿಸಿದೆ. ಎಐ ಸಂಬಂಧಿತ ತುರ್ತು ಅಹಿತಕರ ಘಟನೆಗಳು ಸಂಭವಿಸಿದಾಗ ಪರಸ್ಪರ ತಕ್ಷಣ ಮಾಹಿತಿ ಹಂಚಿಕೊಳ್ಳಲು ಉಭಯ ದೇಶಗಳ ಹಣಕಾಸು ಮತ್ತು ತಂತ್ರಜ್ಞಾನ ಸಚಿವಾಲಯಗಳು ಜಂಟಿ ಯೋಜನೆಯನ್ನು ಸಿದ್ಧಪಡಿಸುತ್ತಿವೆ.

ಇದನ್ನೂ ಓದಿ: ‘ಚೀನಾ-ಅಮೆರಿಕದ ನಡುವಿನ ಸ್ಪರ್ಧೆ ಆರೋಗ್ಯಕರವಾಗಿರಲಿ’; ಶ್ವೇತಭವನದಲ್ಲಿ ಟ್ರಂಪ್ ಪ್ರತಿಪಾದನೆ

ಅಮೆರಿಕ-ಚೀನಾ ನಡುವಿನ ಸಂಬಂಧವು ‘ಒಬ್ಬರ ಸೋಲು ಮತ್ತೊಬ್ಬರ ಗೆಲುವು’ ಎಂಬ ಕುಸ್ತಿಯಾಗಬಾರದು, ಬದಲಿಗೆ ಆರೋಗ್ಯಕರ ಸ್ಪರ್ಧೆಯಾಗಿರಬೇಕು ಎಂದು ಜಿನ್‌ಪಿಂಗ್ ಕರೆ ನೀಡಿದರು. ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಬೇಕಿದ್ದ ವಾಣಿಜ್ಯ ಒಪ್ಪಂದವನ್ನು 2 ತಿಂಗಳುಗಳ ಕಾಲ ವಿಸ್ತರಿಸಲು ಟ್ರಂಪ್ ಮತ್ತು ಕ್ಸಿ ಜಿನ್​ಪಿಂಗ್ ಸಮ್ಮತಿಸಿದರು.

ಫೆಂಟನಿಲ್ ಸೇರಿದಂತೆ ಅಕ್ರಮ ಮಾದಕದ್ರವ್ಯ ಜಾಲವನ್ನು ತಡೆಯಲು ಜಂಟಿ ಕಾರ್ಯಾಚರಣೆ ಹಾಗೂ ಉಭಯ ದೇಶಗಳ ನಡುವೆ ನೇರ ವಿಮಾನ ಸೇವೆಗಳ ಹೆಚ್ಚಳಕ್ಕೆ ನಿರ್ಧರಿಸಲಾಯಿತು.

ಮಾತುಕತೆಯ ಪ್ರಮುಖ ವಿಷಯಗಳು ಹಾಗೂ ಕೈಗೊಂಡ ನಿರ್ಧಾರಗಳು:

– ನವೆಂಬರ್ 10ಕ್ಕೆ ಮುಕ್ತಾಯಗೊಳ್ಳಬೇಕಿದ್ದ ತಾತ್ಕಾಲಿಕ ಶಸ್ತ್ರವಿರಾಮ ಅಥವಾ ವ್ಯಾಪಾರ ಒಪ್ಪಂದವನ್ನು 2 ತಿಂಗಳ ಕಾಲ ವಿಸ್ತರಿಸಲು ಎರಡೂ ದೇಶಗಳು ಸಮ್ಮತಿಸಿವೆ.

– ಕಳೆದ ವರ್ಷ ಶೇ. 145ರಷ್ಟಿದ್ದ ಅಮೆರಿಕದ ಸುಂಕವು ಪ್ರಸ್ತುತ ಶೇ. 47ಕ್ಕೆ ಹಾಗೂ ಚೀನಾದ ಸುಂಕ ಶೇ. 125ರಿಂದ ಶೇ. 30ರ ಆಸುಪಾಸಿಗೆ ಇಳಿಕೆಯಾಗಿದೆ.

– ಕೃತಕ ಬುದ್ಧಿಮತ್ತೆ (AI) ಎಐ ತಂತ್ರಜ್ಞಾನವನ್ನು ಮಾನವ ನಿಯಂತ್ರಣದಲ್ಲೇ ಇರಿಸಲು ಮತ್ತು ಸುರಕ್ಷಿತವಾಗಿ ಬಳಸಲು ಎರಡೂ ದೇಶಗಳ ಹಣಕಾಸು ಸಚಿವರು ಸೂಚನಾ ವ್ಯವಸ್ಥೆ ರೂಪಿಸಲು ನಿರ್ಧರಿಸಿದ್ದಾರೆ.

– ತೈವಾನ್​ಗೆ ಅಮೆರಿಕ ನೀಡಲಿರುವ 14 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಪೂರೈಕೆಯನ್ನು ಟ್ರಂಪ್ ಸದ್ಯಕ್ಕೆ ತಡೆಹಿಡಿದಿದ್ದು, ಇದನ್ನು ರಾಜತಾಂತ್ರಿಕ ಮಾತುಕತೆಯ ದಾಳವಾಗಿ ಬಳಸುತ್ತಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us