ವಿಶ್ವದಲ್ಲಿ ಕೊವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿವೆ. ಅದರಲ್ಲೂ ಅಮೇರಿಕಾ, ಫ್ರಾನ್ಸ್ ಹಾಗೂ ಬ್ರಿಟನ್ಗಳಲ್ಲಿ ಮೊದಲಿಗಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಆತಂಕ ಹುಟ್ಟಿಸಿದೆ. ಅಮೇರಿಕಾದಲ್ಲಿ ನಿನ್ನೆ ಒಂದೇ ದಿನ 3,80,751 ಪ್ರಕರಣಗಳು ವರದಿಯಾಗಿವೆ. ಅಲ್ಲದೇ ಪ್ರಕರಣದ ಸರಾಸರಿಯು 2,66,430ಕ್ಕೆ ತಲುಪಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಈ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಅಮೇರಿಕಾದ ರಾಜ್ಯಗಳಲ್ಲಿ ಇನ್ನೂ ಹಲವು ರಾಜ್ಯಗಳು ಕೊವಿಡ್ ಅಂಕಿಅಂಶದ ಕುರಿತ ಮಾಹಿತಿ ನೀಡಬೇಕಿದೆ. ಆದ್ದರಿಂದ ಪ್ರಕರಣದ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಒಮಿಕ್ರಾನ್ ಪ್ರಕರಣಗಳಲ್ಲೂ ಏರಿಕೆ ಕಂಡುಬಂದಿದ್ದು, ಕೊರೊನಾ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ನ್ಯೂಯಾರ್ಕ್ ಸೇರಿದಂತೆ ಅಮೇರಿಕಾದ ವಿವಿದೆಡೆ ರೋಗಿಗಳು ಬೆಡ್ ಸಿಗೆದೆ ಪರದಾಡುತ್ತಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
ಫ್ರಾನ್ಸ್ನಲ್ಲಿ ಕೊವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆ:
ಫ್ರಾನ್ಸ್ ಕೋವಿಡ್ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 208,000 ಪ್ರಕರಣಗಳು ವರದಿಯಾಗಿದ್ದು, ಇದು ರಾಷ್ಟ್ರೀಯ ಮತ್ತು ಯುರೋಪ್ ರಾಷ್ಟ್ರಗಳಲ್ಲೇ ದಾಖಲೆಯಾಗಿದೆ ಎಂದು ಆರೋಗ್ಯ ಸಚಿವ ಒಲಿವಿಯರ್ ವೆರಾನ್ ಬುಧವಾರ ಶಾಸಕರಿಗೆ ತಿಳಿಸಿದರು. ಕೊವಿಡ್ ಟ್ರಾಕರ್ ದಾಖಲೆಗಳ ಪ್ರಕಾರ ಫ್ರಾನ್ಸ್ನಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಯುರೋಪಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ 180,000 ಪ್ರಕರಣಗಳು ಪತ್ತೆಯಾಗಿತ್ತು.
ಫ್ರಾನ್ಸ್ನ ಜನಸಂಖ್ಯೆಗೆ ಹೋಲಿಸಿದರೆ ಪ್ರಕರಣಗಳ ಏರಿಕೆ ಪ್ರಮಾಣ ತೀವ್ರ ಆತಂಕಕಾರಿಯಾಗಿದೆ ಎಂದು ಆರೋಗ್ಯ ಸಚಿವ ವೆರಾನ್ ಹೇಳಿದ್ದಾರೆ. ‘‘ದಿನದ 24 ಗಂಟೆಗಳ ಹಗಲು ರಾತ್ರಿಗಳಲ್ಲಿ ಫ್ರಾನ್ಸ್ನಲ್ಲಿ ಪ್ರತಿ ಸೆಕೆಂಡಿಗೆ, ಇಬ್ಬರು ನಾಗರಿಕರು ಕೊವಿಡ್ಗೆ ತುತ್ತಾಗುತ್ತಿದ್ದಾರೆ’’ ಎಂದು ವೆರಾನ್ ಹೇಳಿದ್ದಾರೆ. ಮತ್ತು ಇಂತಹ ಪರಿಸ್ಥಿತಿ ಹಿಂದೆಂದೂ ಎದುರಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. ಡೆಲ್ಟಾ ರೂಪಾಂತರದ ಕಾರಣದಿಂದಾಗಿ ಫ್ರೆಂಚ್ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯು ಈಗಾಗಲೇ ಚಿಂತಾಜನಕವಾಗಿದೆ ಎಂದು ವೆರಾನ್ ನುಡಿದಿದ್ದು, ಒಮಿಕ್ರಾನ್ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಇಟಲಿ, ಸ್ಪೇನ್, ಪೋರ್ಚುಗಲ್, ಗ್ರೀಸ್, ಸೈಪ್ರಸ್ ಮತ್ತು ಮಾಲ್ಟಾಗಳಲ್ಲೂ ದಾಖಲೆ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿವೆ.
ಬ್ರಿಟನ್ನಲ್ಲೂ ಹೆಚ್ಚಾಗುತ್ತಿದೆ ಪ್ರಕರಣಗಳು:
ಬ್ರಿಟನ್ನಲ್ಲಿ ಕಳೆದ ಕೆಲವು ದಿನದಿಂದ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ. ಬುಧವಾರ 1,83,037 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದು ಹೊಸ ದಾಖಲೆಯಾಗಿದ್ದು, ಹಿಂದಿನ ಅತ್ಯಧಿಕ ಅಂಕಿಅಂಶಕ್ಕಿಂತ 50,000 ಏರಿಕೆಯಾಗಿದೆ ಎಂದು ಅಂಕಿಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಚೀನಾದ ಕ್ಸಿಯಾನ್ನಲ್ಲಿ ಏಳನೇ ದಿನಕ್ಕೆ ಕಾಲಿಟ್ಟ ಲಾಕ್ಡೌನ್:
ಚೀನಾದ ಕ್ಸಿಯಾನ್ ನಗರದಲ್ಲಿ ಸುಮಾರು 13 ಮಿಲಿಯನ್ ಜನರಿದ್ದಾರೆ. ಅಲ್ಲಿ ಲಾಕ್ಡೌನ್ ಹೇರಲಾಗಿದ್ದು, ಎಂಟನೇ ದಿನಕ್ಕೆ ಕಾಲಿಟ್ಟಿದೆ. ಅಗತ್ಯ ವಸ್ತುಗಳನ್ನು ಕೊಳ್ಳಲು ವಿನಾಯಿತಿ ನೀಡಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ ಮತ್ತು ಡೆಲ್ಟಾ ಕೊವಿಡ್ 19 ಪ್ರಕರಣಗಳ ಕುರಿತು ಈಗಾಗಲೇ ಆತಂಕ ಹೊರಹಾಕಿದೆ. ಇದರಿಂದ ಆರೋಗ್ಯ ವ್ಯವಸ್ಥೆಗೆ ಒತ್ತಡ ಹೆಚ್ಚಾಗಬಹುದು ಎಂದು ಅದು ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ:
ದಕ್ಷಿಣ ಕಾಶ್ಮೀರ: 2 ಸ್ಥಳೀಯ ಉಗ್ರರೂ ಸೇರಿದಂತೆ 6 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು
Published On - 9:41 am, Thu, 30 December 21