ವಾಷಿಂಗ್ಟನ್: 2022ರಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ಯುಎಸ್ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆ. ಈ ಮೂಲಕ ಒಲಿಂಪಿಕ್ಸ್ನಲ್ಲಿ ಅಮೆರಿಕ ಸರ್ಕಾರದ ಯಾವುದೇ ಅಧಿಕಾರಿಗಳೂ ಪಾಲ್ಗೊಳ್ಳುವುದಿಲ್ಲ ಎಂದು ಜೋ ಬೈಡನ್ ಆಡಳಿತ ಸ್ಪಷ್ಟಪಡಿಸಿದೆ. ಚೀನಾದ ಕ್ಸಿನ್ಜಿಯಾಂಗ್ನಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಕ್ರೈಂಗಳನ್ನು ತಡೆಯಲು ಚೀನಾ ಸರ್ಕಾರ ವಿಫಲವಾಗಿದೆ. ಅಲ್ಲಿ ಅವರ ನರಮೇಧ ನಡೆಯುತ್ತಿದ್ದು, ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹೀಗಿದ್ದಾಗ್ಯೂ ಕೂಡ ಚೀನಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಹೀಗಾಗಿ ಬೀಜಿಂಗ್ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕುತ್ತೇವೆ ಎಂದು ವೈಟ್ಹೌಸ್ ಹೇಳಿದೆ.
ಬೀಜಿಂಗ್ ಒಲಿಂಪಿಕ್ಸ್ ಬಹಿಷ್ಕಾರವನ್ನು ಅಮೆರಿಕ ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದರೂ, ಈ ವಿಚಾರ ಸಂಬಂಧ ಕಳೆದ ಐದಾರು ತಿಂಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮೇ ತಿಂಗಳಲ್ಲಿಯೇ ಈ ಬಗ್ಗೆ ಕರೆ ನೀಡಿದ್ದರು. ಡೆಮಾಕ್ರಟಿಕ್ ಪಕ್ಷದವರಾಗಿರುವ ನ್ಯಾನ್ಸಿ, 2022ರಲ್ಲಿ ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಹೀಗಾಗಿ 2022ರಲ್ಲಿ ಬೀಜಿಂಗ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಬೇಕು. ಕೇವಲ ಅಮೆರಿಕ ಮಾತ್ರವಲ್ಲ, ಜಗತ್ತಿನ ಯಾವುದೇ ನಾಯಕನೂ ಅದರಲ್ಲಿ ಪಾಲ್ಗೊಳ್ಳಬಾರು ಎಂದು ಹೇಳಿದ್ದರು. ಅದಕ್ಕೆ ಉಳಿದ ಜನಪ್ರತಿನಿಧಿಗಳೂ ದನಿ ಗೂಡಿಸಿದ್ದರು.
ಇನ್ನು ಅಮೆರಿಕದ ರಾಜತಾಂತ್ರಿಕ ಬಹಿಷ್ಕಾರಕ್ಕೆ ಚೀನಾ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಆದರೆ ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದ ಚೀನಾ, ಯಾವುದೇ ರಾಜತಾಂತ್ರಿಕ ಬಹಿಷ್ಕಾರ ಹಾಕಿದರೆ, ಅದರ ವಿರುದ್ಧ ಸೂಕ್ತ ಪ್ರತೀಕಾರ ತೆಗೆದುಕೊಳ್ಳುವುದಾಗಿ ಹೇಳಿತ್ತು. ಈ ಮಧ್ಯೆ ಜೋ ಬೈಡನ್ ಕಳೆದ ತಿಂಗಳೇ ತಮ್ಮ ನಿಲುವು ಪ್ರಕಟಿಸಿದ್ದರು. ಚೀನಾದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ನರಮೇಧ ನಡೆಯುತ್ತಿದೆ. ಆ ದೇಶ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವುದರ ವಿರುದ್ಧ ಪ್ರತಿಭಟನೆ ಸ್ವರೂಪವಾಗಿ ಇಂಥ ರಾಜತಾಂತ್ರಿಕ ಬಹಿಷ್ಕಾರವನ್ನು ಪರಿಗಣಿಸಲಾಗುವುದು ಎಂದಿದ್ದರು.
ಕ್ರೀಡಾಪಟುಗಳಿಗೆ ಸಮಸ್ಯೆಯಿಲ್ಲ
ಇಲ್ಲಿ ಅಮೆರಿಕ 2022ರ ಬೀಜಿಂಗ್ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಘೋಷಿಸಿದೆಯೇ ಹೊರತು ಸಂಪೂರ್ಣ ಬಹಿಷ್ಕಾರ ಹಾಕಿಲ್ಲ. ಹೀಗಾಗಿ ಬೀಜಿಂಗ್ನ ಒಲಿಂಪಿಕ್ಸ್ನಲ್ಲಿ ಅಮೆರಿಕ ಸರ್ಕಾರದ ಯಾವುದೇ ನಾಯಕ, ಅಧಿಕಾರಿಗಳು ಪಾಲ್ಗೊಳ್ಳುವುದಿಲ್ಲ. ಆದರೆ ಅಮೆರಿಕದ ಆಟಗಾರರು ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ. ಇನ್ನು 2028ರಲ್ಲಿ ಅಮೆರಿಕದ ಲಾಸ್ ಏಂಜಲಿನಸ್ನಲ್ಲಿ ಒಲಿಂಪಿಕ್ಸ್ ಇದ್ದು, ಈ ಬಗ್ಗೆ ಚೀನಾ ಪ್ರತಿಕ್ರಿಯೆ ಹೇಗಿರಲಿದೆ ಎಂಬ ಕುತೂಹಲವೂ ಇದೆ.
ಇದನ್ನೂ ಓದಿ: Viral Video: ಜಿಮ್ನಲ್ಲಿ ಹುಡುಗಿಯನ್ನು ಇಂಪ್ರೆಸ್ ಮಾಡಲು ಟ್ರೆಡ್‌ಮಿಲ್ ಮೇಲೆ ಕಾಲಿಟ್ಟ ಹುಡುಗ; ತಮಾಷೆಯ ವಿಡಿಯೋ ವೈರಲ್
Published On - 9:20 am, Tue, 7 December 21