ವಿಶ್ವದ ಗಮನ ಸೆಳೆದಿರೋ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೀತಿರೋ ಚುನಾವಣೆಗೆ ಮತದಾನ ನಡೀತಿದೆ. ಈಗಾಗಲೇ ಸುಮಾರು 10 ಕೋಟಿ ಜನ ಪೋಸ್ಟಲ್ ಬ್ಯಾಲಟ್ಗಳು ಅಥವಾ ಮತದಾನ ದಿನಕ್ಕೂ ಮುನ್ನ ತಮ್ಮ ಮತ ಚಲಾಯಿಸಿದ್ದಾರೆ. ಇದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಆಧುನಿಕ ಪ್ರಪಂಚದ ಅತ್ಯಂತ ಹಳೆಯ ಪ್ರಜಾಪ್ರಭುತ್ವಗಳಲ್ಲಿ ಒಂದಾದ, ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಇಂದು ಪ್ರಜಾಪ್ರಭುತ್ವದ ಹಬ್ಬ.. ಅಂದ್ರೆ, ಅಮೆರಿಕದಲ್ಲಿ ಮತದಾನ ನಡೀತಿದೆ. ದೊಡ್ಡಣ್ಣನ ಮುನ್ನಡೆಸೋ ವಿಚಾರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಎದುರಾಗಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರತಿಸ್ಪರ್ಧಿ ಜೋ ಬಿಡೆನ್ ನಡುವೆ ಭಾರಿ ಸಮರ ಏರ್ಪಟ್ಟಿದೆ. ಸಾಮಾನ್ಯವಾಗಿ ಅಮೆರಿಕದಲ್ಲಿ ಮತದಾನ ನಡೆದ ದಿನವೇ ಬಹುತೇ ಫಲಿತಾಂಶ ಗೊತ್ತಾಗುತ್ತಿತ್ತು. ಆದ್ರೆ, ಈ ಬಾರಿ ಕೊರೊನಾ ಅಬ್ಬರದಿಂದ ಪರಿಸ್ಥಿತಿ ಬದಲಾಗಿದ್ದು.. ಇಂದು ಸಂಜೆ.. ಅಥವಾ ಗುರುವಾರ ಇಲ್ಲ ಶುಕ್ರವಾರ ಅಂತಿಮ ಫಲಿತಾಂಶ ಬರಬಹುದು ಅಂತಾ ಚುನಾವಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.
ಮತ್ತೆ ದೊಡ್ಡಣ್ಣ ಆಗ್ತಾರಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್..?
ಅಮೆರಿಕದ ಅಧ್ಯಕ್ಷರ ಗದ್ದುಗೆಗೇರಲು ಈ ಬಾರಿಯಷ್ಟು ಜಿದ್ದಾಜಿದ್ದಿನ ಪೈಪೋಟಿ ಇತ್ತೀಚಿನ ವರ್ಷಗಳಲ್ಲಿ ಕಂಡು ಬಂದಿರಲಿಲ್ಲ. ವಿಶ್ವದಲ್ಲಿ ಕೊರೊನಾ ಅಬ್ಬರ ಶುರುವಾಗೋ ಮೊದಲು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಗಾದಿಗೇರೋದನ್ನ ತಡೆಯೋದು ಯಾರಿಂದಲೂ ಸಾಧ್ಯವಿಲ್ಲ ಅನ್ನೋ ಪರಿಸ್ಥಿತಿ ಇತ್ತು. ಆದ್ರೆ, ಕೊರೊನಾ ಅಬ್ಬರ ಶುರುವಾದ ಮೇಲೆ ಈ ಅಂದಾಜು ತಲೆ ಕೆಳಗಾಗಿದೆ.
ಯಾರೂ ಊಹಿಸದ ರೀತಿಯಲ್ಲಿ ಅವರ ಪ್ರತಿಸ್ಪರ್ಧಿ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್, ಟ್ರಂಪ್ಗೆ ತೀವ್ರ ಪೈಪೋಟಿ ನೀಡಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಟ್ರಂಪ್ ತೋರಿದ ನಿರ್ಲಕ್ಷ್ಯಕ್ಕೆ ಅಮೆರಿಕನ್ನರು ಕುಪಿತಗೊಂಡಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ಗೆ ಮತ್ತೊಂದು ಅವಧಿ ಆಡಳಿತ ನಡೆಸಲು ಅವಕಾಶ ಕೊಡಲು ಸಿದ್ಧರಿಲ್ಲ ಅಂತಾ ಬಹುತೇಕ ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಹೀಗಾಗಿಯೇ, ಒಂದು ವೇಳೆ ಫಲಿತಾಂಶ ತಮ್ಮ ವಿರುದ್ಧವಾಗಿ ಬಂದ್ರೆ, ಅದರ ವಿರುದ್ಧ ಕಾನೂನು ಸಮರ ಸಾರಲು ಟ್ರಂಪ್ ಸಿದ್ಧರಾಗಿದ್ದಾರೆ.
ಚುನಾವಣೆಯಲ್ಲಿ ಗೆದ್ದು ಚರಿತ್ರೆ ಸೃಷ್ಟಿಸ್ತಾರಾ ಕಮಲಾ ಹ್ಯಾರಿಸ್?
ಅಮೆರಿಕದಲ್ಲಿ ನಡೀತಿರೋ ಚುನಾವಣೆ ಭಾರತದ ಮಟ್ಟಿಗೆ ಬಹಳ ಮಹತ್ವದ್ದಾಗಿದೆ. ಅಲ್ದೆ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಅಥವಾ ಭಾರತೀಯ ಮೂಲದವರ ಪಾತ್ರವೂ ನಿರ್ಣಾಯಕವಾಗಿದೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಮೂಲದವರ ಮತ ಸೆಳೆಯಲು ಪ್ರಧಾನಿ ಮೋದಿಯನ್ನ ಅಮೆರಿಕಕ್ಕೆ ಆಹ್ವಾನಿಸಿ, ಹೌಡಿ ಮೋದಿ ಕಾರ್ಯಕ್ರಮ ಮಾಡಿದ್ರು.
ಇದಕ್ಕೆ ಪ್ರತಿಯಾಗಿ ಡೆಮಾಕ್ರಟಿಕ್ ಪಕ್ಷ, ಭಾರತೀಯ ಮೂಲದ ಕಮಲಾ ಹ್ಯಾರಿಸ್ರನ್ನ ಉಪಾಧ್ಯಕ್ಷರ ಚುನಾವಣೆಗೆ ಆರಿಸಿದೆ. ಒಂದು ವೇಳೆ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆದ್ದರೆ, ಹೊಸದೊಂದು ಇತಿಹಾಸ ನಿರ್ಮಾಣವಾಗಲಿದೆ. ಕಮಲಾ ಗೆದ್ರೆ, ಏಷ್ಯಾ ಮೂಲದ ಮತ್ತು ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದಲ್ಲಿ ಅತ್ಯಂತ ಉನ್ನತ ಹುದ್ದೆಗೆ ಹಿರಿಮೆಗೆ ಅವರು ಪಾತ್ರರಾಗಲಿದ್ದಾರೆ. ಹೀಗಾಗಿ ಭಾರತೀಯ ಮೂಲದ ಬಹುತೇಕರು ಡೆಮಾಕ್ರಟಿಕ್ ಪಕ್ಷದ ಪರ ಮತ ಚಲಾಯಿಸೋ ಸಾಧ್ಯತೆಗಳಿವೆ.
ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ನಡೀತಿರೋ ಚುನಾವಣೆ ಇಡೀ ವಿಶ್ವದ ಗಮನವನ್ನ ಸೆಳೆದಿದೆ. ವಿಶ್ವದಲ್ಲಿ ಕೊರೊನಾ ಅಬ್ಬರ, ಜಾಗತಿಕವಾಗಿ ಚೀನಾ ಪ್ರಾಬಲ್ಯ ಸಾಧಿಸ್ತಿರೋದು, ಶೀತಲ ಸಮರದ ಬಳಿಕ ಜಗತ್ತಿನಲ್ಲಿ ರಷ್ಯಾ ಮತ್ತೆ ತನ್ನ ಸ್ಥಾನವನ್ನ ಆಕ್ರಮಿಸ್ತಿರೋದು ಸೇರಿದಂತೆ ಹತ್ತು ಹಲವು ವಿಚಾರಗಳು ಈ ಬಾರಿಯ ಅಮೆರಿಕದ ಚುನಾವಣೆ ಮೇಲೆ ಪ್ರಭಾವ ಬೀರಿವೆ. ಅಮೆರಿಕದ ವರ್ಚಸ್ಸು ಇಮ್ಮಡಿಸುವಂತೆ ಮಾಡಲು ಸಮರ್ಥ ನಾಯಕನ ಆಯ್ಕೆಗೆ ಅಮೆರಿಕನ್ನರು ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ಅಮೆರಿಕದ ಚುನಾವಣೆಯತ್ತ ವಿಶ್ವದ ಜನರ ಚಿತ್ತ ನೆಟ್ಟಿದೆ.
Published On - 7:05 am, Wed, 4 November 20