ಅಮೆರಿಕ ಸಂಸತ್‌ನಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಗೌರವ; ವಿಮಾನ ಹೈಜಾಕ್ ಯತ್ನ ಖಂಡಿಸಿ ನಿರ್ಣಯ ಮಂಡನೆ

ಕಳೆದ ವಾರ ‘ಫ್ಲೈದುಬೈ’ ವಿಮಾನದಲ್ಲಾದ ಮಧ್ಯ-ಆಕಾಶದ ದಾಳಿಯನ್ನು ವಿಫಲಗೊಳಿಸಿ, ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಮತ್ತು ಶೌರ್ಯವನ್ನು ಗೌರವಿಸಿ ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ದ್ವಿಪಕ್ಷೀಯ ನಿರ್ಣಯ ಮಂಡಿಸಲಾಗಿದೆ. ಈ ದಾಳಿಯನ್ನು ಅಮೆರಿಕ ಸಂಸತ್ 'ಭಯೋತ್ಪಾದನಾ ಕೃತ್ಯ' ಹಾಗೂ ನಾಗರಿಕ ವಿಮಾನಯಾನದ ಮೇಲಿನ ದಾಳಿ ಎಂದು ತೀವ್ರವಾಗಿ ಖಂಡಿಸಿದೆ. ಅಕ್ಟೋಬರ್ 5ರಂದು ಮಂಡಿಸಲಾದ ಈ ನಿರ್ಣಯದಲ್ಲಿ, ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ 'ಫ್ಲೈದುಬೈ ಫ್ಲೈಟ್ 1073'ರ ಸಿಬ್ಬಂದಿ ಮತ್ತು ಪ್ರಯಾಣಿಕರ ಧೈರ್ಯವನ್ನು ಗುರುತಿಸಲಾಗಿದೆ.

ಅಮೆರಿಕ ಸಂಸತ್‌ನಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಗೌರವ; ವಿಮಾನ ಹೈಜಾಕ್ ಯತ್ನ ಖಂಡಿಸಿ ನಿರ್ಣಯ ಮಂಡನೆ
ಸ್ಮಿತ್ ಮಚ್ಚರ್
Image Credit source: AP

Updated on: Oct 06, 2026 | 11:08 PM

ವಾಷಿಂಗ್ಟನ್, ಅಕ್ಟೋಬರ್ 6: ‘ಫ್ಲೈದುಬೈ’ ವಿಮಾನದಲ್ಲಾದ ಭೀಕರ ದಾಳಿಯ ಯತ್ನವನ್ನು ವಿಫಲಗೊಳಿಸಿ, ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸ ಮತ್ತು ಶೌರ್ಯವನ್ನು ಗೌರವಿಸಿ ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ದ್ವಿಪಕ್ಷೀಯ ನಿರ್ಣಯ ಒಂದನ್ನು ಮಂಡಿಸಲಾಗಿದೆ. ಈ ಕೃತ್ಯವನ್ನು ‘ಭಯೋತ್ಪಾದನಾ ದಾಳಿಯ ಯತ್ನ’ ಎಂದು ಅಮೆರಿಕ ಸಂಸತ್ ತೀವ್ರವಾಗಿ ಖಂಡಿಸಿದೆ. ಜನಪ್ರತಿನಿಧಿ ಜೋಶ್ ಗಾಟ್‌ಹೈಮರ್, ಮೈಕಲ್ ಮೆಕ್‌ಕಾಲ್ ಮತ್ತು ಡಾನ್ ಬೇಕನ್ ಸೇರಿದಂತೆ ಹಲವು ಸಂಸದರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಈ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ.

ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ 27 ಮಕ್ಕಳು ಹಾಗೂ 4 ಅಮೆರಿಕನ್ ಪ್ರಜೆಗಳು ಸೇರಿದಂತೆ ಸುಮಾರು 174 ಪ್ರಯಾಣಿಕರಿದ್ದರು. ವಿಮಾನ ಮಧ್ಯ ಆಕಾಶದಲ್ಲಿದ್ದಾಗ, ಓಮನ್ ಮೂಲದ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ದಿಢೀರ್ ದಾಳಿ ನಡೆಸಿ ವಿಮಾನದ ನಿಯಂತ್ರಣ ಸಾಧಿಸಲು ಯತ್ನಿಸಿದ್ದ.

ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ

ಶೌರ್ಯ ಮೆರೆದ ಭಾರತೀಯ ಪೈಲಟ್:

ಕೋ-ಪೈಲಟ್​​ನ ದಾಳಿಯಿಂದ ತೀವ್ರ ರಕ್ತಸ್ರಾವ ಮತ್ತು ಗಾಯಗಳ ನಡುವೆಯೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಅತ್ಯಂತ ಸಾಹಸದಿಂದ ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ಇದರಿಂದಾಗಿ ವಿಮಾನದಲ್ಲಿದ್ದ ಇತರ ಆಫ್-ಡ್ಯೂಟಿ ಪೈಲಟ್‌ಗಳು ಮತ್ತು ಸಿಬ್ಬಂದಿ ಒಳಪ್ರವೇಶಿಸಿ ದಾಳಿಕೋರನನ್ನು ಕಟ್ಟಿಹಾಕಲು ಸಾಧ್ಯವಾಯಿತು. ಈ ವೇಳೆ ವಿಮಾನವು 14,000 ಅಡಿಗಳಷ್ಟು ಕೆಳಗೆ ಬಿದ್ದಿತ್ತಾದರೂ, ಪೈಲಟ್ ಮತ್ತು ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ವಿಮಾನವನ್ನು ಸೌದಿ ಅರೇಬಿಯಾದ ತಬುಕ್ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.

ಅಮೆರಿಕ ನಿರ್ಣಯದಲ್ಲೇನಿದೆ?:

ತನ್ನ ಜೀವದ ಬಗ್ಗೆ ಯೋಚನೆ ಮಾಡದೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಾಣ ರಕ್ಷಿಸಿದ ಸ್ಮಿತ್ ಮಚ್ಚರ್ ಅವರ ಸಾಹಸವನ್ನು ಅಮೆರಿಕದ ಸಂಸತ್​​ನಲ್ಲಿ ‘ಅಸಾಧಾರಣ ಶೌರ್ಯ’ ಎಂದು ಪ್ರಶಂಸಿಸಲಾಗಿದೆ. ಈ ಘಟನೆಯನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನದ ಮೇಲಿನ ದಾಳಿ ಹಾಗೂ ಅಪಾಯಕಾರಿ ಭಯೋತ್ಪಾದನಾ ಕೃತ್ಯ ಎಂದು ಘೋಷಿಸಲಾಗಿದೆ. ಈ ಘಟನೆಯ ಕುರಿತು ಸೌದಿ ಅರೇಬಿಯಾ ಮತ್ತು ಯುಎಇ ಸರ್ಕಾರಗಳು ಸಮಗ್ರ ಹಾಗೂ ತ್ವರಿತ ತನಿಖೆ ನಡೆಸಿ, ಅಮೆರಿಕ ಮತ್ತು ಇಸ್ರೇಲ್‌ಗೆ ಅಗತ್ಯ ಮಾಹಿತಿ ನೀಡಬೇಕೆಂದು ನಿರ್ಣಯದಲ್ಲಿ ಕೋರಲಾಗಿದೆ.

ಇದನ್ನೂ ಓದಿ: ‘ನಿಮ್ಮ ಬಗ್ಗೆ ಹೆಮ್ಮೆಯಿದೆ’; ಆಸ್ಪತ್ರೆಯಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಹಣೆಗೆ ಮುತ್ತನ್ನಿಟ್ಟ ಯುಎಇ ಉಪ ಪ್ರಧಾನಿ

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಪ್ರಜೆಯಾದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಪ್ರಸ್ತುತ ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಸ್ಪತ್ರೆಯಲ್ಲಿದ್ದ ಸ್ಮಿತ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಆರೋಗ್ಯ ವಿಚಾರಿಸಿದ್ದರು. ಗಂಭೀರ ಗಾಯಗಳ ನಡುವೆಯೂ ಕಾಕ್‌ಪಿಟ್ ಬಾಗಿಲು ತೆರೆದ ರೀತಿಯನ್ನು ಪೈಲಟ್ ಪ್ರಧಾನಿಯವರಿಗೆ ವಿವರಿಸಿದ್ದರು. ಗಂಭೀರವಾಗಿ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಯುಎಇಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅವರ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us