
ವನವಾಟು, ಅಕ್ಟೋಬರ್ 24: ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ಪುಟ್ಟ ದ್ವೀಪ ರಾಷ್ಟ್ರವಾದ ವನವಾಟು (ಆಸ್ಟ್ರೇಲಿಯಾ ಸಮೀಪ) ಶನಿವಾರ ಮುಂಜಾನೆ ಮೂರು ಪ್ರಬಲ ಭೂಕಂಪಗಳಿಂದ ನಡುಗಿಹೋಗಿದೆ. ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 7.2, 6.9 ಹಾಗೂ 6.3 ತೀವ್ರತೆಯ ಭೂಕಂಪಗಳು ಕೆಲವೇ ನಿಮಿಷಗಳ ಅಂತರದಲ್ಲಿ ಸಂಭವಿಸಿದ್ದು, ಸ್ಥಳೀಯ ಜನರಲ್ಲಿ ಭಾರಿ ಆತಂಕ ಸೃಷ್ಟಿಸಿದೆ. ಪ್ರಬಲ ಕಂಪನದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ.
ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (USGS) ಮಾಹಿತಿ ಪ್ರಕಾರ, ಮೊದಲ ಹಾಗೂ ಅತ್ಯಂತ ಪ್ರಬಲವಾದ 7.2 ತೀವ್ರತೆಯ ಭೂಕಂಪವು ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 8.12 ಕ್ಕೆ ಸಂಭವಿಸಿತು. ಇದರ ಕೇಂದ್ರಬಿಂದು ಟೋರ್ಬಾ ಪ್ರಾಂತ್ಯದ ರಾಜಧಾನಿ ಸೋಲಾ ಪಟ್ಟಣದ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿ ಸಮುದ್ರದ ಆಳದಲ್ಲಿ ಪತ್ತೆಯಾಗಿದೆ.
ಕೆಲವೇ ನಿಮಿಷಗಳ ಅಂತರದಲ್ಲಿ ಮೂರು ಆಘಾತಗಳು
ಮೊದಲ ಕಂಪನ (7.2 ತೀವ್ರತೆ): ಬೆಳಗ್ಗೆ 8:12 ಕ್ಕೆ ಸೋಲಾ ಕರಾವಳಿಯ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿ ಸಮುದ್ರದಾಳದಲ್ಲಿ ದಾಖಲಾಯಿತು.
ಇದನ್ನೂ ಓದಿ: ವಿಡಿಯೋ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೂಕಂಪ: 18 ಸಾವು, 46 ಮಂದಿಗೆ ಗಾಯ, 300ಕ್ಕೂ ಹೆಚ್ಚು ಮನೆಗಳು ನೆಲಸಮ
ಎರಡನೇ ಕಂಪನ (6.9 ತೀವ್ರತೆ): ಮೊದಲ ಕಂಪನ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಸನ್ಮಾ ಪ್ರಾಂತ್ಯದ ಎಸ್ಪಿರಿಟು ಸ್ಯಾಂಟೋ ದ್ವೀಪದಲ್ಲಿರುವ ಪೋರ್ಟ್ ಓಲ್ರಿ ಗ್ರಾಮದ ವಾಯುವ್ಯಕ್ಕೆ 197 ಕಿ.ಮೀ ದೂರದಲ್ಲಿ ಭೂಮಿ ಅಲುಗಾಡಿತು.
ಮೂರನೇ ಕಂಪನ (6.3 ತೀವ್ರತೆ): ಎರಡನೇ ಆಘಾತ ಸಂಭವಿಸಿದ ಕೇವಲ 11 ನಿಮಿಷಗಳಲ್ಲಿ ಅದೇ ಪೋರ್ಟ್ ಓಲ್ರಿಯಿಂದ 170 ಕಿ.ಮೀ ದೂರದಲ್ಲಿ 10 ಕಿ.ಮೀ ಆಳದಲ್ಲಿ ಮತ್ತೊಂದು ಕಂಪನ ದಾಖಲಾಯಿತು. ಇದು ಆಳವಿಲ್ಲದ ಭೂಕಂಪವಾಗಿದ್ದರಿಂದ (ಸಮುದ್ರದ ಮೇಲ್ಮೈ ಮತ್ತು ವಿಶಾಲ ಕರಾವಳಿ ಪ್ರದೇಶದಲ್ಲಿ ಪ್ರಬಲ ಅಲೆಗಳ ಭೀತಿ ಮೂಡಿಸಿತು.
ತಪ್ಪಿದ ಭಾರೀ ಅನಾಹುತ: ಸತತ ಕಂಪನಗಳಿಂದ ಕಡಲ ತೀರದಲ್ಲಿ ಸುನಾಮಿ ಭೀತಿ ಉಂಟಾಗಿ ಮುನ್ನೆಚ್ಚರಿಕೆ ಸೈರನ್ ಮೊಳಗಿಸಲಾಯಿತಾದರೂ, ಅದೃಷ್ಟವಶಾತ್ ಈವರೆಗೆ ಯಾವುದೇ ದೊಡ್ಡ ಅಲೆಗಳು ದಡಕ್ಕೆ ಅಪ್ಪಳಿಸಿಲ್ಲ. ಕಟ್ಟಡಗಳು ಕುಸಿದಿರುವ ಅಥವಾ ಸಾವುನೋವುಗಳು ಸಂಭವಿಸಿರುವ ಯಾವುದೇ ವರದಿಗಳು ತಕ್ಷಣಕ್ಕೆ ಬಂದಿಲ್ಲ. ಆದಾಗ್ಯೂ, ಸಮುದ್ರ ತೀರದಿಂದ ದೂರವಿದ್ದು, ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸ್ಥಳೀಯ ಆಡಳಿತ ಜನರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ವನವಾಟುವಿನಲ್ಲಿ ಪದೇ ಪದೇ ಭೂಕಂಪ ಏಕೆ?
ನ್ಯೂ ಹೆಬ್ರೈಡ್ಸ್ ಕಂದಕ ಮತ್ತು ರಿಂಗ್ ಆಫ್ ಫೈರ್: ವನವಾಟು ಪೆಸಿಫಿಕ್ ಮಹಾಸಾಗರದ ಕುಖ್ಯಾತ ‘ರಿಂಗ್ ಆಫ್ ಫೈರ್’ (Pacific Ring of Fire) ವಲಯದಲ್ಲಿದೆ. ಇಲ್ಲಿ ಆಸ್ಟ್ರೇಲಿಯನ್ ಟೆಕ್ಟೋನಿಕ್ ಪ್ಲೇಟ್ ಪೆಸಿಫಿಕ್ ಪ್ಲೇಟ್‌ನ ಕೆಳಗೆ ಸರಿಯುವ (Subduction Zone) ನ್ಯೂ ಹೆಬ್ರೈಡ್ಸ್ ಕಂದಕವಿದೆ. ಈ ಭೂಫಲಕಗಳ ನಿರಂತರ ಘರ್ಷಣೆಯಿಂದಾಗಿ ಇದು ಜಗತ್ತಿನ ಅತ್ಯಂತ ಸಕ್ರಿಯ ಭೂಕಂಪನ ಸೂಕ್ಷ್ಮ ಪ್ರದೇಶವಾಗಿದೆ.
ತಿಂಗಳಲ್ಲಿ 70ಕ್ಕೂ ಹೆಚ್ಚು ಕಂಪನಗಳು: ಭೂಕಂಪಗಳ ಮೇಲ್ವಿಚಾರಣೆ ನಡೆಸುವ ಜಿಯೋಶೇಕ್ ಸಂಸ್ಥೆಯ ವರದಿ ಪ್ರಕಾರ, ಕಳೆದ 30 ದಿನಗಳಲ್ಲಿ ವನವಾಟು ಪ್ರದೇಶದಲ್ಲಿ 70 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ಭೂಕಂಪನಗಳು ದಾಖಲಾಗಿವೆ. ಶನಿವಾರ ಬೆಳಗ್ಗೆ ಸಂಭವಿಸಿದ 7.2 ತೀವ್ರತೆಯ ಭೂಕಂಪವು ಈ ತಿಂಗಳಲ್ಲೇ ಅತ್ಯಂತ ಪ್ರಬಲವಾದುದಾಗಿದೆ.
ಅಕ್ಟೋಬರ್ 20 ರಂದಷ್ಟೇ ಮತ್ತೊಂದು ಕಂಪನ: ಕೇವಲ ನಾಲ್ಕು ದಿನಗಳ ಹಿಂದಷ್ಟೇ (ಅಕ್ಟೋಬರ್ 20) ಇದೇ ಪೋರ್ಟ್ ಓಲ್ರಿ ಬಳಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ