ಟಿಬೆಟ್‌ನಲ್ಲಿ ಮತ್ತೆ ಭೂಕಂಪ: 18 ಮಂದಿ ಬಲಿಪಡೆದ ಭೀಕರ ದುರಂತದ ಬೆನ್ನಲ್ಲೇ 4.5 ತೀವ್ರತೆಯ ಮತ್ತೊಂದು ಆಘಾತ
ಟಿಬೆಟ್‌ನಲ್ಲಿ 18 ಮಂದಿ ಬಲಿಯಾದ 7.0 ತೀವ್ರತೆಯ ಭೀಕರ ಭೂಕಂಪದ ಬೆನ್ನಲ್ಲೇ 4.5 ತೀವ್ರತೆಯ ಮತ್ತೊಂದು ಆಘಾತ ಸಂಭವಿಸಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಪ್ರಮುಖ ರಸ್ತೆ, ರೈಲು ಸಂಚಾರ ಸ್ಥಗಿತಗೊಂಡಿದ್ದು, ಸಂವಹನ ವ್ಯವಸ್ಥೆ ವ್ಯತ್ಯಯವಾಗಿದೆ. 12,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು, ಡ್ರೋನ್, ಉಪಗ್ರಹಗಳ ಮೂಲಕ ರಕ್ಷಣಾ ಕಾರ್ಯಚರಣೆ ಮುಂದುವರಿದಿದೆ.

ಲಾಸಾ, ಅಕ್ಟೋಬರ್ 24: ಎರಡು ದಿನಗಳ ಹಿಂದಷ್ಟೇ 18 ಜನರನ್ನು ಬಲಿಪಡೆದು ನೂರಾರು ಮನೆಗಳನ್ನು ನೆಲಸಮ ಮಾಡಿದ್ದ 7.0 ತೀವ್ರತೆಯ ಪ್ರಬಲ ಭೂಕಂಪದ ಬೆನ್ನಲ್ಲೇ, ಚೀನಾದ ಟಿಬೆಟ್ ಪ್ರಾಂತ್ಯದಲ್ಲಿ ಶನಿವಾರ ಬೆಳಗ್ಗೆ 4.5 ತೀವ್ರತೆಯ ಮತ್ತೊಂದು ಭೂಕಂಪ ದಾಖಲಾಗಿದೆ. ಇದು ದುರಂತದಿಂದ ಚೇತರಿಸಿಕೊಳ್ಳುತ್ತಿದ್ದ ಸ್ಥಳೀಯ ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಮತ್ತು ಭೀತಿಯನ್ನು ಹುಟ್ಟುಹಾಕಿದೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿದ ಮಾಹಿತಿಯ ಪ್ರಕಾರ, ಶನಿವಾರ ಬೆಳಗ್ಗೆ ಸಂಭವಿಸಿದ ಈ ಭೂಕಂಪವು 31.485 ಉತ್ತರ ಅಕ್ಷಾಂಶ ಮತ್ತು 93.528 ಪೂರ್ವ ರೇಖಾಂಶದಲ್ಲಿ, ಭೂಮಿಯ ಕೇವಲ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಈ ಹೊಸ ಕಂಪನದಿಂದ ಯಾವುದೇ ತಾಜಾ ಸಾವುನೋವುಗಳು ಅಥವಾ ಭಾರೀ ಹಾನಿ ವರದಿಯಾಗಿಲ್ಲ.
ಸಾವಿನ ಸಂಖ್ಯೆ ಮತ್ತು ಗಾಯಾಳುಗಳು: ಗುರುವಾರ ರಾತ್ರಿ ನಾಗ್ಕ್ವು ನಗರದ ವ್ಯಾಪ್ತಿಯಲ್ಲಿರುವ ಬಕೆನ್ ಕೌಂಟಿಯಲ್ಲಿ ಸಂಭವಿಸಿದ 7.0 ತೀವ್ರತೆಯ ವಿನಾಶಕಾರಿ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18 ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸಂಖ್ಯೆ 76 ಕ್ಕೆ ತಲುಪಿದೆ.
ಇದನ್ನೂ ಓದಿ: ಟಿಬೆಟ್‌ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ; 45 ನಿಮಿಷದಲ್ಲಿ 2 ಬಾರಿ ಕಂಪಿಸಿದ ಭೂಮಿ!
12,000 ಜನರ ಸ್ಥಳಾಂತರ: ವಿಪತ್ತು ಪೀಡಿತ ದುರ್ಗಮ ಪ್ರದೇಶಗಳಿಂದ ಈಗಾಗಲೇ 12,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಹೈಟೆಕ್ ಶೋಧ ಕಾರ್ಯ: ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ರಕ್ಷಣಾ ಪಡೆಗಳು ಡ್ರೋನ್‌ಗಳು, ಮಾನವರಹಿತ ವೈಮಾನಿಕ ವಾಹನಗಳು (UAVs) ಹಾಗೂ ಉಪಗ್ರಹ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿವೆ. ನಿರಾಶ್ರಿತರಿಗಾಗಿ ಚೀನಾ ಸರ್ಕಾರವು 1,000 ಪ್ರಿಫ್ಯಾಬ್ರಿಕೇಟೆಡ್ (ಪೂರ್ವನಿರ್ಮಿತ) ಮನೆಗಳು, 3,239 ಟೆಂಟ್‌ಗಳು, 2,821 ಮಡಚುವ ಹಾಸಿಗೆಗಳು ಮತ್ತು 4,280 ಕ್ಕೂ ಹೆಚ್ಚು ಬೆಚ್ಚಗಿನ ಹೊದಿಕೆಗಳನ್ನು ರವಾನಿಸಿದೆ.
ಪೋಸ್ಟ್
⚠️ UPDATE: Tibet’s Oct 22 M7.0 earthquake in Baqing County, Nagqu, has left 16 dead and 76 injured, including 11 seriously injured.
Around 339 homes collapsed or were damaged, and over 12,000 people were evacuated.
China – Tibet – #地震 – Sismo – Terremoto – Temblor
— GeoTechWar (@geotechwar) October 23, 2026
ಸಾರಿಗೆ ಸಂಪರ್ಕ ಅಸ್ತವ್ಯಸ್ತ ಚೀನಾದ ಅಧಿಕೃತ ಸುದ್ದಿ ಸಂಸ್ಥೆ ‘ಕ್ಸಿನ್ಹುವಾ’ ವರದಿಯ ಪ್ರಕಾರ, ಭೂಕಂಪದಿಂದಾಗಿ ಪರ್ವತ ಭಾಗದಲ್ಲಿ ಬೃಹತ್ ಬಂಡೆಗಳು ಮತ್ತು ಮಣ್ಣು ಕುಸಿದಿದೆ. ಇದರಿಂದಾಗಿ ಪ್ರಮುಖ ಸಂಪರ್ಕ ಕೊಂಡಿಯಾದ ರಾಷ್ಟ್ರೀಯ ಹೆದ್ದಾರಿ 317 ರ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ರಸ್ತೆ ಸಂಚಾರ ಬಂದ್ ಆಗಿದೆ.
ಹಳಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಭಾಗದಲ್ಲಿ ಚಲಿಸುವ ರೈಲು ಸಂಚಾರವನ್ನು ಸ್ಥಳೀಯ ರೈಲ್ವೆ ಇಲಾಖೆ ತಕ್ಷಣವೇ ರದ್ದುಗೊಳಿಸಿದೆ. ದೂರಸಂಪರ್ಕ ಮತ್ತು ಮೊಬೈಲ್ ನೆಟ್‌ವರ್ಕ್ ಟವರ್‌ಗಳು ಹಾನಿಗೊಳಗಾಗಿದ್ದು, ಸಂವಹನ ವ್ಯವಸ್ಥೆ ತೀವ್ರ ವ್ಯತ್ಯಯ ಕಂಡಿದೆ.
ಅಧ್ಯಕ್ಷ ಷಿ ಜಿನ್‌ಪಿಂಗ್ ಸೂಚನೆ ಹಾಗೂ ಐತಿಹಾಸಿಕ ಹಿನ್ನೆಲೆ ಪೂರ್ಣ ಪ್ರಮಾಣದ ಕಾರ್ಯಾಚರಣೆಗೆ ಆದೇಶ: ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಸ್ವತಃ ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿದ್ದು, ಸಾವುನೋವುಗಳು ಹೆಚ್ಚಾಗದಂತೆ ತುರ್ತು ಕ್ರಮ ಕೈಗೊಳ್ಳಲು ಮತ್ತು ಸಂತ್ರಸ್ತರಿಗೆ ತ್ವರಿತ ವಸತಿ-ಆಹಾರ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ, ಹಿಮಾಲಯನ್ ಗಡಿ ಭಾಗದಲ್ಲಿ ಮುಂದಿನ ಸಂಭಾವ್ಯ ಭೂಕಂಪನಗಳ ಮೇಲೆ ತೀವ್ರ ನಿಗಾ ಇರಿಸಲು ತಾಕೀತು ಮಾಡಿದ್ದಾರೆ.
ಭೂಕಂಪಗಳ ಇತಿಹಾಸ: 1900ರಿಂದೀಚೆಗೆ ಟಿಬೆಟ್‌ನ ಈ ನಿರ್ದಿಷ್ಟ ವಲಯದಲ್ಲಿ 7 ಅಥವಾ ಅದಕ್ಕಿಂತ ಹೆಚ್ಚಿನ ತೀವ್ರತೆಯ ಆರು ಪ್ರಮುಖ ಭೂಕಂಪಗಳು ಸಂಭವಿಸಿವೆ. ಇದರಲ್ಲಿ ನವೆಂಬರ್ 8, 1997 ರಂದು ಶುವಾಂಗ್ಹು ಪ್ರದೇಶದಲ್ಲಿ ಸಂಭವಿಸಿದ 7.5 ತೀವ್ರತೆಯ ಭೂಕಂಪವು ಈ ಪ್ರಾಂತ್ಯ ಕಂಡ ಅತ್ಯಂತ ವಿನಾಶಕಾರಿ ಭೂಕಂಪವಾಗಿ ದಾಖಲಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
