ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಳಕೆಯಾಗುತ್ತಿರುವ Z ಸಂಕೇತದ ಅರ್ಥವೇನು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 08, 2022 | 11:01 AM

ರಷ್ಯಾದ ಸಿದ್ಧಾಂತ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ Z ಅಕ್ಷರವನ್ನು ಬಳಸಲು ರಷ್ಯಾ ಸರ್ಕಾರ ನಿರ್ಧರಿಸಿದಂತಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ಬೆಂಬಲಿಸುವವರು ಈ ಸಂಕೇತ ಬಳಸುತ್ತಿದ್ದಾರೆ.

ರಷ್ಯಾ ಮಿಲಿಟರಿ ವಾಹನಗಳಲ್ಲಿ ಬಳಕೆಯಾಗುತ್ತಿರುವ Z ಸಂಕೇತದ ಅರ್ಥವೇನು
ರಷ್ಯಾ ವಾಹನಗಳ ಮೇಲೆ Z ಸಂಕೇತ
Follow us on

ಉಕ್ರೇನ್ ಮೇಲಿನ ಆಕ್ರಮಣಕ್ಕೆಂದು ರಷ್ಯಾ ಬಳಸುತ್ತಿರುವ ಸೇನಾ ವಾಹನಗಳ ಮೇಲೆ ಎದ್ದು ಕಾಣುವಂತೆ ಇಂಗ್ಲಿಷ್​ನ ಝೆಡ್ (Z) ಸಂಕೇತವನ್ನು ಬಳಸಲಾಗುತ್ತಿದೆ. ಇದರ ಅರ್ಥ ಏನು ಎಂಬ ಬಗ್ಗೆ ವಿಶ್ವದ ಹಲವೆಡೆ ಕುತೂಹಲ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಬಗ್ಗೆ ವ್ಯಾಪಕ ಚರ್ಚೆಗಳಾಗುತ್ತಿವೆ. ಉಕ್ರೇನ್​ನ ಕೀವ್ ಮತ್ತು ಇತರ ನಗರಗಳಲ್ಲಿ ಇಂಥದ್ದೇ ವಾಹನಗಳು ಸಂಚರಿಸುತ್ತಿವೆ. ರಷ್ಯಾ ಪರವಾಗಿರುವ ಪ್ರತಿಭಟನಾಕಾರರು ಸಹ Z ಸಂಕೇತರವಿರುವ ಟೀಶರ್ಟ್​ಗಳನ್ನು ತೊಟ್ಟು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರಷ್ಯನ್ ಭಾಷೆಯ ವಿದ್ವಾಂಸ ಗಾಲಿನಾ ಸ್ಟಾರೊವೊಟೊವಾ ಈ ಸಂಕೇತವನ್ನು ಎರಡು ರೀತಿಯಲ್ಲಿ ಅರ್ಥೈಸಿದ್ದಾರೆ. Z ಎನ್ನುವುದು ‘ಝಾ ಪೊಬೆಡಿ’ (Za pobedy) ಎನ್ನುವುದರ ಸಂಕ್ಷಿಪ್ತ ರೂಪ. ಇದರ ಮತ್ತೊಂದು ಅರ್ಥ ‘ಝಾಪಡ್’ (Zapad) ಎನ್ನುತ್ತಾರೆ ಅವರು. ಝಾ ಪೊಬೆಡಿ ಎಂದರೆ ‘ಗೆಲುವಿಗಾಗಿ’ ಎಂದು ಅರ್ಥ. ಝಾಪಡ್ ಎಂದರೆ ‘ಪಶ್ಚಿಮ’ ಎಂದು ಅರ್ಥ. ಈ ಎರಡೂ ಅರ್ಥಗಳನ್ನು ವಿಶ್ಲೇಷಿಸಿದರೆ ‘ಪಶ್ಚಿಮದತ್ತ ವಿಜಯಕ್ಕಾಗಿ ಮುನ್ನಡೆ’ ಎಂಬ ಭಾವನೆ ಬರುತ್ತದೆ ಎಂದು ರಷ್ಯನ್ ಭಾಷಿಕರು ಅಭಿಪ್ರಾಯಪಡುತ್ತಿದ್ದಾರೆ.

ರಷ್ಯಾದ ಸಿದ್ಧಾಂತ ಮತ್ತು ರಾಷ್ಟ್ರೀಯ ಅಸ್ಮಿತೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿ Z ಅಕ್ಷರವನ್ನು ಬಳಸಲು ರಷ್ಯಾ ಸರ್ಕಾರ ನಿರ್ಧರಿಸಿದಂತಿದೆ. ಉಕ್ರೇನ್ ಮೇಲಿನ ಆಕ್ರಮಣವನ್ನು ವಿರೋಧಿಸುತ್ತಿರುವ ಜನರು ಮತ್ತು ದೇಶಗಳು ಇರುವಂತೆಯೇ, ಆಕ್ರಮಣವನ್ನು ಬೆಂಬಲಿಸುವ ದೇಶ ಮತ್ತು ಜನರೂ ಇದ್ದಾರೆ. ಅವರಿಗೆ ಬೆಂಬಲ ನೀಡುವುದರ ಸಂಕೇತವಾಗಿ Z ಕಂಡುಬಂದಿದೆ. ಯುದ್ಧಭೂಮಿಯಲ್ಲಿ ಸ್ವಪಕ್ಷೀಯರೇ ಗುಂಡು ಹಾರಿಸುವುದನ್ನು ತಪ್ಪಿಸಲೆಂದು ರಷ್ಯಾ ಈ ಸಂಕೇತ ಬಳಸುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಸ್ಥಳೀಯ ಮಿಲಿಟರಿ ಘಟಕಗಳು ಪರಸ್ಪರ ಗುರುತಿಗೆಂದು ಇಟ್ಟುಕೊಂಡಿರುವ ಸಂಕೇತಾಕ್ಷರ ಎಂದು ರಷ್ಯಾದ ಚಿಂತಕರ ಚಾವಡಿಯ ಸದಸ್ಯರೂ ಆಗಿರುವ ಪ್ರೊ ಮೈಕೆಲ್ ಕ್ಲಾರ್ಕ್ ಹೇಳುತ್ತಾರೆ.

ಈ ಸಂಕೇತ ಮೊದಲು ಕಂಡುಬಂದಿದ್ದು ಎಲ್ಲಿ?

ಕಳೆದ ಫೆಬ್ರುವರಿ 22ರಂದು Z ಸಂಕೇತ ಹೊತ್ತ ಮಿಲಿಟರಿ ವಾಹನಗಳು ಮೊದಲ ಬಾರಿಗೆ ರಷ್ಯಾದಿಂದ ಉಕ್ರೇನ್​ನ ಡೊನೆಟ್ಸ್​ಕ್ ಪ್ರದೇಶ ಪ್ರವೇಶಿಸಿದಾಗ ಅವುಗಳ ಮೇಲೆ Z ಸಂಕೇತ ಕಾಣಿಸಿಕೊಂಡಿತ್ತು. ಅದಾಗಲೇ ಉಕ್ರೇನ್ ಪ್ರವೇಶಿಸಿರುವ ರಷ್ಯನ್ ಪದಾತಿ ದಳಗಳಿಗೆ ತಮ್ಮ ದೇಶದ ವಾಹನಗಳ ಗುರುತು ಸಿಗಲೆಂದು ಈ ಸಂಕೇತ ಬಳಕೆಯಾಯಿತು ಎಂದೂ ಕೆಲವರು ಹೇಳಿದ್ದಾರೆ. 2014ರಲ್ಲಿ ಕ್ರಿಮಿಯಾ ಪ್ರಸ್ಥಭೂಮಿ ಪ್ರವೇಶಿಸಿದ ರಷ್ಯಾ ವಾಹನಗಳ ಮೇಲೆಯೂ Z ಸಂಕೇತ ಕಂಡುಬಂದಿತ್ತು.

Z ಸಂಕೇತದ ಜೊತೆಗೆ ರಷ್ಯನ್ ಮಿಲಿಟರಿ ವಾಹನಗಳ ಮೇಲೆ ಅಂಚಿನಲ್ಲಿ ಎರಡು ಗೆರೆಗಳು, ಮೂರು ಚುಕ್ಕೆಗಳ ಸುತ್ತ ವೃತ್ತ ಹಾಗೂ ಒಂದು ಸಣ್ಣ ತ್ರಿಕೋನದ ಸುತ್ತ ದೊಡ್ಡ ತ್ರಿಕೋನ ಇರುವ ಸಂಕೇತಗಳನ್ನು ಹೊತ್ತ ವಾಹನಗಳೂ ಉಕ್ರೇನ್​ ಪ್ರವೇಶಿಸಿವೆ. ಈ ಸಂಕೇತಗಳ ಬಳಕೆಯ ಅರ್ಥವೇನು ಎಂಬುದರ ಬಗ್ಗೆ ಈವರೆಗೆ ರಷ್ಯಾದ ಅಧಿಕಾರಿಗಳೂ ಏನನ್ನೂ ಹೇಳಿಲ್ಲ.

ಉಕ್ರೇನ್​ನ ಸದ್ಯದ ಪರಿಸ್ಥಿತಿ ಏನು?

ಉಕ್ರೇನ್​ನಲ್ಲಿ ರಷ್ಯಾ ಇದೀಗ ಮಾನವೀಯ ಕಾರಿಡಾರ್​ಗಳನ್ನು ಘೋಷಿಸಿ, ಉಕ್ರೇನ್ ಮತ್ತು ಇತರ ದೇಶಗಳ ನಾಗರಿಕರ ಸ್ಥಳಾಂತರಕ್ಕೆ ಅವಕಾಶ ಕಲ್ಪಿಸಿದೆ. ಆದರೆ ರಷ್ಯಾದ ಘೋಷಣೆಯನ್ನು ಉಕ್ರೇನ್ ಅನುಮಾನಿಸುತ್ತಿದೆ. ಉಕ್ರೇನ್​ನಿಂದ ರಷ್ಯಾ ಮತ್ತು ಬೆಲರೂಸ್ ದೇಶಗಳಿಗೆ ಮಾತ್ರವೇ ತೆರಳಲು ಅನುಕೂಲವಾಗುವಂತೆ ಕಾರಿಡಾರ್​ಗಳನ್ನು ರೂಪಿಸಲಾಗಿದೆ. ಅಲ್ಲಿಗೆ ಹೋಗುವ ನಾಗರಿಕರಿಗೆ ಮುಂದಿನ ದಿನಗಳಲ್ಲಿ ಭದ್ರತೆಯ ಖಾತ್ರಿ ಇರುವುದಿಲ್ಲ ಎಂದು ಉಕ್ರೇನ್ ಶಂಕಿಸಿದೆ.

ಬೆಲರೂಸ್​ನಲ್ಲಿ ಉಕ್ರೇನ್ ಮತ್ತು ರಷ್ಯಾ ನಡುವಣ ಮೂರನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಉಕ್ರೇನ್​ ಮೇಲೆ ರಷ್ಯಾದ ದಾಳಿ ನಡೆದ ನಂತರ ಈವರೆಗೆ ಸುಮಾರು 15 ಲಕ್ಷ ಜನರು ದೇಶ ಬಿಟ್ಟು ತೆರಳಿದ್ದಾರೆ. 2ನೇ ವಿಶ್ವಯುದ್ಧದ ನಂತರ ಯೂರೋಪ ಮತ್ತೊಂದು ಅತಿದೊಡ್ಡ ಮಾನವೀಯ ಬಿಕ್ಕಟ್ಟಿಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ನಡುವೆ ಮಧ್ಯಸ್ಥಿಕೆಗೆ ಮುಂದಾದ ಭಾರತ: ಪುಟಿನ್ ಮತ್ತು ಝೆಲೆನ್​ಸ್ಕಿ ಮಧ್ಯೆ ಸಂಧಾನಕ್ಕೆ ಮೋದಿ ಪ್ರಸ್ತಾವ

ಇದನ್ನೂ ಓದಿ: ರಷ್ಯಾ ಅಧ್ಯಕ್ಷರ ​​ಜತೆ 50 ನಿಮಿಷ ಚರ್ಚೆ ನಡೆಸಿದ ಪ್ರಧಾನಿ ಮೋದಿ; ಉಕ್ರೇನ್​ ಅಧ್ಯಕ್ಷರೊಟ್ಟಿಗೆ ನೇರವಾಗಿ ಮಾತನಾಡಲು ಪುಟಿನ್​ಗೆ ಒತ್ತಾಯ

Published On - 10:58 am, Tue, 8 March 22