ರಷ್ಯಾ ಅಧ್ಯಕ್ಷರ ಜತೆ 50 ನಿಮಿಷ ಚರ್ಚೆ ನಡೆಸಿದ ಪ್ರಧಾನಿ ಮೋದಿ; ಉಕ್ರೇನ್ ಅಧ್ಯಕ್ಷರೊಟ್ಟಿಗೆ ನೇರವಾಗಿ ಮಾತನಾಡಲು ಪುಟಿನ್ಗೆ ಒತ್ತಾಯ
ಫೆ.24ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಶುರುಮಾಡಿದ ನಂತರ ಇಲ್ಲಿಯವರೆಗೆ ಪುಟಿನ್ ಜತೆ ಮೂರನೇ ಬಾರಿಗೆ ಪ್ರಧಾನಿ ಮೋದಿ ಚರ್ಚಿಸುತ್ತಿದ್ದಾರೆ. ಇಂದು ಕೂಡ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ದೂರವಾಣಿ ಮೂಲಕ ಸುಮಾರು 50 ನಿಮಿಷ ಮಾತನಾಡಿದ್ದಾಗಿ ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ. ಕದನ ವಿರಾಮ ಘೋಷಿಸಿದ್ದಕ್ಕೆ ರಷ್ಯಾವನ್ನು ಪ್ರಶಂಸಿಸಿದ ಅವರು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯವರೊಂದಿಗೆ ನೇರವಾಗಿ ನೀವೇ ಒಮ್ಮೆ ಮಾತನಾಡಿ ಎಂದು ಪುಟಿನ್ರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇಂದು ರಷ್ಯಾ ಅಧ್ಯಕ್ಷರೊಟ್ಟಿಗೆ ಮಾತುಕತೆ ನಡೆಸುವುದಕ್ಕೂ ಮೊದಲು ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯವರೊಂದಿಗೂ ಮಾತನಾಡಿದ್ದರು. ಸುಮಾರು 35 ನಿಮಿಷ ಮಾತನಾಡಿ, ಭಾರತೀಯರ ರಕ್ಷಣೆಗೆ ಸಹಕಾರ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಫೆ.24ರಂದು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಶುರುಮಾಡಿದ ನಂತರ ಇಲ್ಲಿಯವರೆಗೆ ಪುಟಿನ್ ಜತೆ ಮೂರನೇ ಬಾರಿಗೆ ಪ್ರಧಾನಿ ಮೋದಿ ಚರ್ಚಿಸುತ್ತಿದ್ದಾರೆ. ಇಂದು ಕೂಡ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ನ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ಸುಮಿ ಯುದ್ಧವಲಯದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಸಹಕಾರ ನೀಡಬೇಕು ಎಂದೂ ಪ್ರಧಾನಿ ಮೋದಿ ಕೇಳಿದ್ದಾರೆ. ಇದಕ್ಕೆ ರಷ್ಯಾ ಅಧ್ಯಕ್ಷರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯ ನೆರವನ್ನೂ ನೀಡುವುದಾಗಿ ಪ್ರಧಾನಿ ಮೋದಿಗೆ ಭರವಸೆ ಕೊಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ.
ಸುಮಿಯಲ್ಲಿ ಸುಮಾರು 700-900 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಈ ನಗರ ಇರುವುರು ಉಕ್ರೇನ್ನ ಈಶಾನ್ಯ ಭಾಗದಲ್ಲಿ. ಅಲ್ಲಿ ಯುದ್ಧ ತೀವ್ರತೆ ಹೆಚ್ಚಿದ್ದರೂ ಇಂದು ರಷ್ಯಾ ಸುಮಿ ಸೇರಿ ನಾಲ್ಕು ಪ್ರದೇಶಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದೆ. ಸುಮಿಯಲ್ಲಿ ಸಿಲುಕಿರುವ ಅನೇಕ ವಿದ್ಯಾರ್ಥಿಗಳು ವಿಡಿಯೋ ಮಾಡಿ ತಾವಿರುವ ಸ್ಥಿತಿ, ಸ್ಥಳಗಳನ್ನು ತಿಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ಹಿಮವನ್ನು ಸಂಗ್ರಹಿಸಿ, ಅದನ್ನು ಕರಗಿಸಿ ನೀರು ಮಾಡಿಕೊಳ್ಳುತ್ತಿರುವ ಮನಕಲಕುವ ವಿಡಿಯೋಗಳೂ ವೈರಲ್ ಆಗುತ್ತಿವೆ. ಸಾಕಷ್ಟು ಆಹಾರ, ಉಳಿಯಲು ಸರಿಯಾದ ಜಾಗ ಏನೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಯುದ್ಧ ಭೂಮಿಯಿಂದ ಭಾರತೀಯರನ್ನು ರಕ್ಷಿಸಲು ಭಾರತ ಎಲ್ಲ ರೀತಿಯ ಪ್ರಯತ್ನಗಳನ್ನೂ ಜಾರಿಯಲ್ಲಿಟ್ಟಿದೆ. ಆಪರೇಷನ್ ಗಂಗಾ ಕೊನೇ ಹಂತಕ್ಕೆ ತಲುಪಿದ್ದು, ಇನ್ನು ಕೆಲವೇ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರುವುದು ಬಾಕಿ ಇದೆ.
ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ಅಂತರ ಕಾಪಾಡಿಕೊಂಡಿದೆ. ಎರಡೂ ದೇಶಗಳ ದಿಗ್ಗಜರೊಟ್ಟಿಗೆ ಮಾತುಕತೆಯಲ್ಲಿ ತೊಡಗಿದ್ದು, ಶಾಂತಿಯಿಂದ ಬಿಕ್ಕಟ್ಟು ಪರಿಹಾರ ಮಾಡಿಕೊಳ್ಳಿ ಎಂಬ ಒತ್ತಾಯವನ್ನೂ ಮುಂದಿಟ್ಟಿದೆ. ಇದೆಲ್ಲದರ ಮಧ್ಯೆ ಯುದ್ಧದಿಂದ ಕಂಗೆಟ್ಟಿರುವ ನಾಡಿನಲ್ಲಿ ಭಯಭೀತರಾಗಿ ಇರುವ ಭಾರತೀಯರನ್ನು ಸ್ಥಳಾಂತರ ಮಾಡಲು ಎರಡೂ ರಾಷ್ಟ್ರಗಳ ನಾಯಕರೂ ಭಾರತಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ರಾಜತಾಂತ್ರಿಕ ಮಾತುಕತೆಯಲ್ಲಿ ತೊಡಗಿಕೊಂಡಿದೆ.
ಇದನ್ನೂ ಓದಿ: Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ
Published On - 3:32 pm, Mon, 7 March 22