ಭಾರತದ ಹೆಚ್ಚುತ್ತಿರುವ ಪ್ರಾಬಲ್ಯದಿಂದಲೇ ಉಕ್ರೇನ್ನಿಂದ ಭಾರತೀಯರನ್ನು ಸ್ಥಳಾಂತರಿಸಲು ಸಾಧ್ಯವಾಗುತ್ತಿದೆ: ಪ್ರಧಾನಿ ನರೇಂದ್ರ ಮೋದಿ
ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ನಾವು ಆಪರೇಶನ್ ಗಂಗಾ ಹಮ್ಮಿಕೊಂಡಿದ್ದೇವೆ. ಈ ಮೂಲಕ ಈಗಾಗಲೇ ಸಾವಿರಾರು ಭಾರತೀಯರನ್ನು ವಾಪಸ್ ಕರೆತರಲಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇನ್ನೂ ಎರಡು ಹಂತದ ಮತದಾನ ಬಾಕಿ ಇರುವ ಉತ್ತರ ಪ್ರದೇಶದಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ (Uttar Pradesh Assembly Election) ನಡೆಸಿದರು. ಈ ವೇಳೆ ಉಕ್ರೇನ್ ವಿಚಾರ ಪ್ರಸ್ತಾಪಿಸಿದ ಅವರು, ಇಂದು ಜಾಗತಿಕವಾಗಿ ಭಾರತ ಹೆಚ್ಚಿಸಿಕೊಂಡಿರುವ ಪ್ರಾಬಲ್ಯದಿಂದಲೇ, ರಷ್ಯಾ ಆಕ್ರಮಣ ನಡೆಸುತ್ತಿರುವ ಉಕ್ರೇನ್ನಿಂದ ಭಾರತೀಯರನ್ನು ರಕ್ಷಿಸಲು ಸಾಧ್ಯವಾಗುತ್ತಿದೆ. ಅಲ್ಲಿರುವ ಭಾರತೀಯ ನಾಗರಿಕರನ್ನು ಕರೆತರಲು ಏನೆಲ್ಲ ಪ್ರಯತ್ನ ಮಾಡಬಹುದೋ, ಅಷ್ಟನ್ನೂ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇಂದು ಉತ್ತರ ಪ್ರದೇಶದ ಸೋನ್ಭದ್ರಾದಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿದ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಪ್ರಶ್ನೆ ಮಾಡುತ್ತಿರುವವರು ಎಂದಿಗೂ ನಮ್ಮ ದೇಶವನ್ನು ಬಲಿಷ್ಠಗೊಳಿಸಲಾರರು ಎಂದು ಹೇಳಿದರು.
ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಣೆ ಮಾಡಲು ನಾವು ಆಪರೇಶನ್ ಗಂಗಾ ಹಮ್ಮಿಕೊಂಡಿದ್ದೇವೆ. ಈ ಮೂಲಕ ಈಗಾಗಲೇ ಸಾವಿರಾರು ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಅಷ್ಟೆ ಅಲ್ಲ, ಈ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲು ಕೇಂದ್ರದ ನಾಲ್ವರು ಸಚಿವರನ್ನು ಉಕ್ರೇನ್ನ ನಾಲ್ಕು ನೆರೆ ರಾಷ್ಟ್ರಗಳಿಗೆ ಕಳಿಸಲಾಗಿದೆ. ನಮ್ಮವರ ಸುರಕ್ಷತೆಯೇ ಆದ್ಯತೆ. ಅವರನ್ನೆಲ್ಲ ರಕ್ಷಣೆ ಮಾಡಿದ ವಿನಃ ನಾವು ವಿಶ್ರಮಿಸುವುದಿಲ್ಲ ಎಂದು ಪ್ರಧಾನಿಯವರು ಇಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧದ ವಿಚಾರದಲ್ಲಿ ಭಾರತ ತುಂಬ ಸೂಕ್ಷ್ಮವಾಗಿ ವರ್ತಿಸುತ್ತಿದೆ. ಒಂದೆಡೆ ಉಕ್ರೇನ್ಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದೆ. ಇನ್ನೊಂದೆಡೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಕೈಗೊಳ್ಳುವ ಯಾವುದೇ ನಿರ್ಣಯಗಳಿಗೂ ಮತದಾನ ಮಾಡುತ್ತಿಲ್ಲ. ಶಾಂತಿಯಿಂದ ಪರಿಹರಿಸಿಕೊಳ್ಳಿ ಎಂಬ ಹೇಳಿಕೆಗೆ ಬದ್ಧವಾಗಿ ನಡೆದುಕೊಳ್ಳುತ್ತಿದೆ. ಭಾರತದ ನಾಗರಿಕರ ರಕ್ಷಣೆಗೆ ಉಕ್ರೇನ್ ಆಗಲಿ, ರಷ್ಯಾ ಆಗಲಿ ಮತ್ತು ಉಕ್ರೇನ್ ಗಡಿಯಲ್ಲಿರುವ ಪೋಲ್ಯಾಂಡ್, ರೊಮೇನಿಯಾ, ಹಂಗೇರಿ ಸೇರಿ ಇನ್ಯಾವುದೇ ರಾಷ್ಟ್ರಗಳಾಗಲಿ ಅಡ್ಡಿಪಡಿಸುತ್ತಿಲ್ಲ. ಭಾರತದ ಧ್ವಜ ಹಿಡಿದವರನ್ನು ಕಂಡರೆ ಗಡಿಯಲ್ಲಿ ಸುಮ್ಮನೆ ಬಿಡುತ್ತಿದ್ದಾರೆ. ಇಷ್ಟು ದಿನ ಉಕ್ರೇನ್ ಪಶ್ಚಿಮ ಗಡಿಯಿಂದ ಮಾತ್ರ ಭಾರತೀಯರನ್ನು ಸ್ಥಳಾಂತರ ಮಾಡುತ್ತಿದ್ದ ಭಾರತಕ್ಕೆ ಇನ್ನು ಮುಂದೆ ರಷ್ಯಾ ಮಾರ್ಗವೂ ತೆರೆದುಕೊಂಡಿದೆ. ಭಾರತೀಯರನ್ನು ಸ್ಥಳಾಂತರಿಸಲು ನಮ್ಮ ಒಪ್ಪಿಗೆ ಇದೆ ಎಂದು ರಷ್ಯಾ ರಾಯಭಾರಿ ತಿಳಿಸಿದ್ದಾರೆ.
ಇದನ್ನೂ ಓದಿ: Russia- Ukraine War: ಉಕ್ರೇನ್ ಜೊತೆ ಮತ್ತೆ ಮಾತುಕತೆಗೆ ಸಿದ್ಧ ಎಂದ ರಷ್ಯಾ; 6 ಹೊಸ ಬೆಳವಣಿಗೆಗಳು ಹೀಗಿವೆ
Published On - 4:15 pm, Wed, 2 March 22