Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ
ಫೆಬ್ರವರಿ 22ರಿಂದ ಇದುವರೆಗೆ ಉಕ್ರೇನ್‌ನಿಂದ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ನೆರೆಯ ದೇಶಗಳಿಂದ ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಭಾನುವಾರ ಸರ್ಕಾರ ಮಾಹಿತಿ ನೀಡಿದೆ.
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ 12 ದಿನಗಳಾಗಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಮಧ್ಯಾಹ್ನ ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಲಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮಾತುಕತೆಯ ನಂತರ ಪುಟಿನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಲಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾದ ನಂತರ ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷರೊಂದಿಗೆ ಎರಡು ಬಾರಿ ಮಾತನಾಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಪ್ರಾರಂಭಿಸಿದ ಬೆನ್ನಲ್ಲೇ ನರೇಂದ್ರ ಮೋದಿ ಫೆಬ್ರವರಿ 26ರಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯೊಂದಿಗೆ ಮಾತನಾಡಿದ್ದರು. ಆ ಸಂಭಾಷಣೆಯು ರಷ್ಯಾದ ಆಕ್ರಮಣವನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದಿಂದ ಭಾರತ ಗೈರುಹಾಜರಾಗಿತ್ತು. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ನಂತರ ಉದ್ವಿಗ್ನತೆ ಉಲ್ಬಣಗೊಂಡಿದೆ ಮತ್ತು ಭಾರತೀಯ ವಿದ್ಯಾರ್ಥಿಗಳ ಸ್ಥಳಾಂತರಕ್ಕಾಗಿ ಸರ್ಕಾರವು ಉಕ್ರೇನ್ ನೆರೆಯ ದೇಶಗಳಿಂದ ವಿಮಾನಗಳ ವ್ಯವಸ್ಥೆ ಮಾಡಿದೆ.
Prime Minister Narendra Modi to speak to Russian President Vladimir Putin on the phone today: GoI sources
(file photos) pic.twitter.com/PkqIs0L4EM
— ANI (@ANI) March 7, 2022
ಫೆಬ್ರವರಿ 22ರಿಂದ ಇದುವರೆಗೆ ಉಕ್ರೇನ್‌ನಿಂದ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್‌ನ ನೆರೆಯ ದೇಶಗಳಿಂದ ವಿಮಾನಗಳ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಭಾನುವಾರ ಸರ್ಕಾರ ಮಾಹಿತಿ ನೀಡಿದೆ.
“ಉಕ್ರೇನ್‌ನಲ್ಲಿ ಸಿಲುಕಿರುವ ಪ್ರತಿಯೊಬ್ಬ ನಾಗರಿಕ ಮತ್ತು ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಭಾರತ ಹಗಲಿರುಳು ಶ್ರಮಿಸುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಉಕ್ರೇನ್‌ನಿಂದ ಸಾವಿರಾರು ಮಕ್ಕಳನ್ನು ಸುರಕ್ಷಿತವಾಗಿ ವಾಪಾಸ್ ಕರೆತಂದಿದ್ದೇವೆ ಎಂದು ಅವರು ತಿಳಿಸಿದ್ದರು. ಹಾಗೇ, ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾನುವಾರ ಸುಮಿಯಲ್ಲಿ ಸಿಕ್ಕಿಬಿದ್ದ ವಿದ್ಯಾರ್ಥಿಗಳಿಗೆ ಆದಷ್ಟು ಬೇಗ ಅಲ್ಲಿಂದ ಹೊರಡಲು ಸಿದ್ಧರಾಗಿರಲು ಸಲಹೆ ನೀಡಿತ್ತು. ಈಗಾಗಲೇ ಖಾರ್ಕಿವ್ನಿಂದ ಎಲ್ಲ ಭಾರತೀಯರನ್ನೂ ತಾಯ್ನಾಡಿಗೆ ಸ್ಥಳಾಂತರ ಮಾಡಲಾಗಿದೆ.
ಇದನ್ನೂ ಓದಿ: ಅಧ್ಯಕ್ಷ ಝೆಲೆನ್ಸ್ಕಿ ಹತ್ಯೆಯಾದರೂ ಹೋರಾಟ ನಿಲ್ಲುವುದಿಲ್ಲ: ಪರ್ಯಾಯ ಯೋಜನೆಗಳನ್ನು ರೂಪಿಸಿಕೊಂಡಿದೆ ಉಕ್ರೇನ್