Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಕಚ್ಚಾ ತೈಲ ಬ್ಯಾರಲ್ಗೆ 10 ಯುಎಸ್ಡಿಗೂ ಜಾಸ್ತಿ ಹೆಚ್ಚಳ
ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ 7ನೇ ತಾರೀಕಿನ ಸೋಮವಾರದ ಒಂದೇ ದಿನ ಪ್ರತಿ ಬ್ಯಾರೆಲ್ಗೆ 10 ಯುಎಸ್ಡಿಗೂ ಹೆಚ್ಚಾಗಿದೆ.
ಉಕ್ರೇನ್- ರಷ್ಯಾ ಬಿಕ್ಕಟ್ಟು (Russia- Ukraine Crisis) ತೀವ್ರಗೊಳ್ಳುತ್ತಿದ್ದಂತೆ ಮಾರ್ಚ್ 7ನೇ ತಾರೀಕಿನ ಸೋಮವಾರದಂದು ಪ್ರತಿ ಬ್ಯಾರೆಲ್ಗೆ ತೈಲ ಬೆಲೆ 10 ಯುಎಸ್ಡಿಗೂ ಹೆಚ್ಚು ಮೇಲೇರಿದೆ. ರಷ್ಯಾದ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ಹೇರಬೇಕು ಎಂಬ ಕರೆ ವ್ಯಾಪಕ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ. ಸೋಮವಾರ ದಿನದ ಆರಂಭದಲ್ಲಿ ಬ್ರೆಂಟ್ ಕಚ್ಚಾ ತೈಲ 10 ಯುಎಸ್ಡಿಗೂ ಹೆಚ್ಚು ಜಿಗಿತ ಕಂಡು, 130 ಯುಎಸ್ಡಿ ಸಮೀಪ ಮುಟ್ಟಿತು. ಯು.ಎಸ್. ಕಚ್ಚಾ ತೈಲ ಬೆಂಚ್ಮಾರ್ಕ್ 9 ಯುಎಸ್ಡಿಗೂ ಜಾಸ್ತಿ ಮೇಲೇರಿ, ಈಗ ಬ್ಯಾರಲ್ಗೆ 124 ಡಾಲರ್ಗೂ ಹೆಚ್ಚಿನ ದರದಲ್ಲಿದೆ. ರಷ್ಯಾದ ಪಡೆಗಳು ಆಯಕಟ್ಟಿನ ಸ್ಥಳಗಳನ್ನು ವಶಕ್ಕೆ ಪಡೆದಿರುವುದರಿಂದ ಉಕ್ರೇನ್ನ ದೇಶದ ಸ್ಥಾನಮಾನ ಅಪಾಯದಲ್ಲಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಎಚ್ಚರಿಕೆ ನಂತರ ಈ ಹೆಚ್ಚಳ ಆಗಿದೆ.
ಉಕ್ರೇನ್ನ ಎರಡು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯು ವಿಫಲವಾಗಿದೆ. ಇದು ಎರಡೂ ಕಡೆಯಿಂದ ಪರಸ್ಪರ ನಿಂದೆಗೆ ಕಾರಣ ಆಗಿದೆ. ಇನ್ನು, ಜಾಗತಿಕ ಆರ್ಥಿಕತೆಯಿಂದ ರಷ್ಯಾವನ್ನು ಮತ್ತಷ್ಟು ಏಕಾಂಗಿ ಮಾಡುವುದಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ (ಜನ ಪ್ರತಿನಿಧಿಗಳ ಸಭೆ) ಹೊಸ ಕಾನೂನು ಜಾರಿಗೆ ತರಲು ಹೊರಟಿರುವ ಬಗ್ಗೆ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮಾತನಾಡಿದ್ದಾರೆ. ರಷ್ಯಾದ ತೈಲ, ಇಂಧನ ಉತ್ಪನ್ನಗಳ ಆಮದನ್ನು ಸಹ ಅಮೆರಿಕದೊಳಗೆ ಬಾರದಂತೆ ನಿಷೇಧಿಸಲು ಉದ್ದೇಶಿಸಿರುವ ಕಾನೂನು ಅದು.
ಇದೇ ವೇಳೆ ಅಮೆರಿಕದಲ್ಲಿ ಗ್ಯಾಸೋಲಿನ್ ಬೆಲೆಯು ಏರಿಕೆ ಆಗುತ್ತಲೇ ಇದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರವು ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರದಲ್ಲಿ ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಇತ್ತ ಭಾರತದಲ್ಲಿ ಕೂಡ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆ ಆಗುವ ನಿರೀಕ್ಷೆ ವ್ಯಾಪಕವಾಗಿದೆ.
ಇದನ್ನೂ ಓದಿ: Petrol- Diesel Price: ಮುಂದಿನ ವಾರ ತೈಲ ದರ ಪರಿಷ್ಕರಣೆ ಶುರು; ಲೀಟರ್ ಪೆಟ್ರೋಲ್ ರೂ. 175 ಆದರೂ ಅಚ್ಚರಿಯಿಲ್ಲ