ದೆಹಲಿ: ರಷ್ಯಾ-ಉಕ್ರೇನ್ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಸೋಮವಾರ ಭಾರತದ ಷೇರುಪೇಟೆ ಕುಸಿತ ದಾಖಲಿಸಿದೆ. ಹೂಡಿಕೆದಾರರು ಹಣ ಹಿಂಪಡೆಯಲು ಹಾತೊರೆದ ಕಾರಣ ಮುಂಜಾನೆ 9.25ರ ಸಮಯದಲ್ಲಿ ಬಿಎಸ್ಇ ಸೆನ್ಸೆಕ್ಸ್ 1,428 ಅಂಶಗಳ ಕುಸಿತ ದಾಖಲಿಸಿತು. ಹಿಂದಿನ ವಹಿವಾಟಿಗೆ ಹೋಲಿಸಿದರೆ ಇದು ಶೇ 2.63ರ ಕುಸಿತವಾಗಿದೆ. ಬಿಎಸ್ಇ 52,906ರಲ್ಲಿ ವಹಿವಾಟು ನಡೆಸುತ್ತಿತ್ತು. ದೇಶದ ಬಹುತೇಕ ಕಂಪನಿಗಳನ್ನು ಒಳಗೊಂಡಿರುವ ಎನ್ಎಸ್ಇ ನಿಫ್ಟಿ ಸೂಚ್ಯಂಕವು 398 ಅಂಶಗಳ ಕುಸಿತ ದಾಖಲಿಸಿ, 15,847 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ಇದು ಹಿಂದಿನ ದಿನದ ವಹಿವಾಟಿಗೆ ಹೋಲಿಸಿದರೆ ಶೇ 2.45ರಷ್ಟು ಕುಸಿತವಾಗಿದೆ.
ರಷ್ಯಾದಲ್ಲಿ ಉತ್ಪಾದನೆಯಾಗುವ ಕಚ್ಚಾ ತೈಲಕ್ಕೆ ಅಮೆರಿಕ ಮತ್ತು ಯೂರೋಪ್ ದೇಶಗಳು ನಿರ್ಬಂಧ ವಿಧಿಸಲು ಮುಂದಾಗಿವೆ. ಇದರ ಜೊತೆಗೆ ಇರಾನ್ನಲ್ಲಿ ಉತ್ಪಾದನೆಯಾಗುತ್ತಿರುವ ಕಚ್ಚಾ ತೈಲದ ಬಳಕೆಗೆ ಇರುವ ನಿರ್ಬಂಧ ಸಡಿಲಿಸುವ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಅಮೆರಿಕದ ಕಮಾಡಿಟಿ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬ್ರೆಂಟ್ಕ್ರೂಡ್ನ ಬೆಲೆ 140 ಡಾಲರ್ ದಾಟಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ವಿಶ್ವದ ಹಲವು ಷೇರುಪೇಟೆಗಳಲ್ಲಿ ಜನರು ಮುಗಿಬಿದ್ದು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಕಮಾಡಿಟಿ ವಿನಿಮಯ ಕೇಂದ್ರಗಳಲ್ಲಿ ಲೋಹ, ಆಹಾರ ಧಾನ್ಯಗಳು ಸೇರಿದಂತೆ ಬಹುತೇಕ ಉತ್ಪನ್ನಗಳ ಬೆಲೆಗಳು ಹೆಚ್ಚಾಗಿವೆ. ಒಂದು ಔನ್ಸ್ ಚಿನ್ನದ ಬೆಲೆ ₹ 2000 ದಾಟಿದೆ.
ಭಾರತದ ಷೇರು ವಿನಿಮಯ ಕೇಂದ್ರಗಳಲ್ಲಿ ಮಧ್ಯಮ ಮತ್ತು ಸಣ್ಣ ಬಂಡವಾಳದ ಕಂಪನಿಗಳ ಮೌಲ್ಯ ಕುಸಿತ ಕಂಡಿವೆ. ನಿಫ್ಟಿ ಮಿಡ್ಕ್ಯಾಪ್ 100 ಸಂವೇದಿ ಸೂಚ್ಯಂಕವು ಶೇ 2.62ರಷ್ಟು ಕುಸಿತ ಕಂಡಿದ್ದರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇ 2.41ರ ಕುಸಿತ ಕಂಡಿದೆ. ಬಹುತೇಕ ಎಲ್ಲ ವಲಯಗಳ ಕಂಪನಿಗಳು ಮೌಲ್ಯ ಕಳೆದುಕೊಂಡಿದ್ದರೂ ಆಟೊಮೊಬೈಲ್ ಮತ್ತು ಬ್ಯಾಂಕಿಂಗ್ ಕಂಪನಿಯ ಷೇರುಗಳ ಬೆಲೆ ಹೆಚ್ಚು ಕುಸಿದಿದೆ. ನಿಫ್ಟಿ ಆಟೊ ಶೇ 4.38 ಮತ್ತು ನಿಫ್ಟಿ ಬ್ಯಾಂಕ್ ಶೇ 3.69ರಷ್ಟು ಕುಸಿದಿದೆ. ನಿಫ್ಟಿ ಮೆಟಲ್ ಮಾತ್ರ ಶೇ 0.47ರಷ್ಟು ಏರಿಕೆ ಕಂಡಿದೆ.
ಮಾರುತಿ ಸುಜುಕಿ ಶೇ 5.59ರಷ್ಟು ಮೌಲ್ಯ ಕಳೆದುಕೊಂಡಿದ್ದು ₹ 6,842.35ರಲ್ಲಿ ವಹಿವಾಟಾಗುತ್ತಿತ್ತು. ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಐಷರ್ ಮೋಟಾರ್ಸ್, ಮಹಿಂದ್ರಾ ಮಹಿಂದ್ರಾ ಕಂಪನಿಗಳ ಷೇರುಗಳು ಸಹ ಕುಸಿತ ಕಂಡಿವೆ. ಬಿಎಸ್ಇಯಲ್ಲಿ ಒಟ್ಟು 572 ಷೇರುಗಳು ಮುನ್ನಡೆ ಕಂಡಿದ್ದರೆ, 2,043 ಷೇರುಗಳ ಮೌಲ್ಯ ಕುಸಿತ ಕಂಡಿದ್ದವು.
ಇದನ್ನೂ ಓದಿ: TCS Shares Buyback: ಮಾರ್ಚ್ 9ರಿಂದ 23ರ ಮಧ್ಯೆ 18 ಸಾವಿರ ಕೋಟಿ ರೂ. ಮೊತ್ತದ ಟಿಸಿಎಸ್ ಷೇರು ಮರುಖರೀದಿ
ಇದನ್ನೂ ಓದಿ: Google Investments In Airtel: ಏರ್ಟೆಲ್ನಲ್ಲಿ ಗೂಗಲ್ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ