Google Investments In Airtel: ಏರ್ಟೆಲ್ನಲ್ಲಿ ಗೂಗಲ್ನ 7500 ಕೋಟಿ ರೂಪಾಯಿ ಹೂಡಿಕೆಗೆ ಷೇರುದಾರರ ಒಪ್ಪಿಗೆ
ಏರ್ಟೆಲ್ನಲ್ಲಿ ಗೂಗಲ್ನಿಂದ ನೂರು ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಕ್ಕೆ ಷೇರುದಾರರು ಅನುಮತಿ ನೀಡಿದ್ದಾರೆ. ಆ ಬಗ್ಗೆ ವಿವರ ಇಲ್ಲಿದೆ.
ಏರ್ಟೆಲ್ನ ಶೇ 1.28ರ ಪಾಲಿನ ಖರೀದಿಗೆ 7,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಭಾರತೀಯ ಟೆಲಿಕಾಂ ಕಂಪೆನಿಯ ಷೇರುದಾರರು ಅನುಮತಿ ನೀಡಿದ್ದಾರೆ. ಗೂಗಲ್ನಿಂದ (Google) ಹೂಡಿಕೆಗೆ ವಿಶೇಷ ನಿಲುವಳಿಯನ್ನು ಶೇ 99ರಷ್ಟು ಷೇರುದಾರರು ಅನುಮೋದಿಸಿದರು ಎಂದು ಫೆಬ್ರವರಿ 26ನೇ ತಾರೀಕಿನಂದು ನಡೆದ ವಿಶೇಷ ಸಾಮಾನ್ಯ ಸಭೆ (EGM) ಫಲಿತಾಂಶದ ಆಧಾರದಲ್ಲಿ ತಿಳಿಸಲಾಗಿದೆ. ಗೂಗಲ್ನಿಂದ ಏರ್ಟೆಲ್ನಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಅಥವಾ 7500 ಕೋಟಿ ರೂಪಾಯಿಯಷ್ಟು ಹೂಡಿಕೆ ಮಾಡುವುದಾಗಿ ಜನವರಿ 28ನೇ ತಾರೀಕು ಘೋಷಣೆ ಮಾಡಲಾಗಿತ್ತು. ಅದರಲ್ಲಿ ಈಕ್ವಿಟಿ ಹೂಡಿಕೆ ಮತ್ತು ವಾಣಿಜ್ಯ ಒಪ್ಪಂದ ಸಹ ಒಳಗೊಂಡಿತ್ತು.
ಪರಸ್ಪರ ಒಪ್ಪಿದ ನಿಬಂಧನೆಗಳ ಜತೆಗೆ ಮುಂದಿನ 5 ವರ್ಷಗಳಿಗೆ ಹಣಕಾಸು ಒದಗಿಸುವುದು ಸಹ ಸೇರಿತ್ತು. ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್ ಭಾಗವಾಗಿ ಏರ್ಟೆಲ್ ಸಹಭಾಗಿತ್ವದಲ್ಲಿ 100 ಕೋಟಿ ಅಮೆರಿಕನ್ ಡಾಲರ್ ತನಕ ಹೂಡಿಕೆ ಮಾಡುವುದಾಗಿ ಗೂಗಲ್ ಹೇಳಿತ್ತು.
ಈ ಹೂಡಿಕೆಯಲ್ಲಿ 70 ಕೋಟಿ ಡಾಲರ್ ಅನ್ನು ಈಕ್ವಿಟಿ ರೂಪದಲ್ಲಿ ಏರ್ಟೆಲ್ನಲ್ಲಿ ಹೂಡಿಕೆ ಮಾಡುತ್ತದೆ. ಅಂದರೆ ಪ್ರತಿ ಷೇರಿಗೆ 734 ರೂಪಾಯಿಯಂತೆ ಖರೀದಿಸುತ್ತದೆ. ಇನ್ನು ಬಾಕಿ 30 ಕೋಟಿ ಡಾಲರ್ ವಾಣಿಜ್ಯ ಒಪ್ಪಂದಗಳ ಜಾರಿಗಾಗಿ ಹೂಡಿಕೆ ಮಾಡುತ್ತದೆ. ಅದರಲ್ಲಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮೊಬೈಲ್ ಸಾಧನಗಳ ಉತ್ಪಾದನೆ, ಭಾರತದಾದ್ಯಂತ ಡಿಜಿಟಲ್ ಎಕೋಸಿಸ್ಟಮ್ ಅಡಿಯಲ್ಲಿ ಡಿಜಿಟಲ್ ಸಂಪರ್ಕಕ್ಕೆ ಪ್ರಯತ್ನಿಸುತ್ತದೆ.
ಇದರ ಜತೆಗೆ ಬಹುತೇಕ ಷೇರುದಾರರು ಏರ್ಟೆಲ್ನ ಪ್ರಸ್ತಾವ ಆದ 1.17 ಲಕ್ಷ ಕೋಟಿ ರೂಪಾಯಿಯನ್ನು ಅಂಗಸಂಸ್ಥೆಗಳಾದ ಇಂಡಸ್ ಟವರ್ಸ್, Nxtra ಮತ್ತು ಭಾರ್ತಿ ಹೆಕ್ಸಾಕಾಂಗಾಗಿ ವೆಚ್ಚ ಮಾಡುವುದಕ್ಕೆ ಅನುಮೋದನೆಯನ್ನು ನೀಡಿದರು.
ಇದನ್ನೂ ಓದಿ: Airtel Payments Bank: ಆರ್ಬಿಐನಿಂದ ಶೆಡ್ಯೂಲ್ ಬ್ಯಾಂಕ್ ಸ್ಥಾನ ಪಡೆದ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್
Published On - 4:58 pm, Mon, 28 February 22